ಮಂಗಳವಾರ, ನವೆಂಬರ್ 19, 2019
28 °C

ರೈಲ್ವೆ ಟರ್ಮಿನಲ್ ಕೇಂದ್ರ ಸ್ಥಾಪನೆಗೆ ಸ್ಥಳ ನಿಗದಿಯಾಗಿಲ್ಲ: ಬಿ.ವೈ.ರಾಘವೇಂದ್ರ

Published:
Updated:

ಸಾಗರ: ‘ರೈಲ್ವೆ ಕೋಚಿಂಗ್ ಟರ್ಮಿನಲ್ ಕೇಂದ್ರ ಜಿಲ್ಲೆಗೆ ಮಂಜೂರಾಗಿದೆ. ಇದನ್ನು ಎಲ್ಲಿ ನಿರ್ಮಿಸಬೇಕು ಎನ್ನುವ ಬಗ್ಗೆ ಇನ್ನೂ ಅಂತಿಮವಾಗಿ ತೀರ್ಮಾನವಾಗಿಲ್ಲ’ ಎಂದು ಸಂಸದ ಬಿ.ವೈ.ರಾಘವೇಂದ್ರ ಸ್ಪಷ್ಟಪಡಿಸಿದರು.

ತಾಲ್ಲೂಕಿನ ಹೆಗ್ಗೋಡಿನಲ್ಲಿ ಭಾನುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಶಿವಮೊಗ್ಗ ಸಮೀಪದ ಕೋಟೆಗಂಗೂರು ಅಥವಾ ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ಕೇಂದ್ರವನ್ನು ಆರಂಭಿಸಬೇಕು ಎನ್ನುವ ಪ್ರಸ್ತಾಪವಿದೆ. ಅಧಿಕಾರಿಗಳ ತಾಂತ್ರಿಕ ವರದಿ ಆಧರಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘₹ 60 ಕೋಟಿ ವೆಚ್ಚದಲ್ಲಿ ಜಿಲ್ಲೆಯಲ್ಲಿ ರೈಲ್ವೆ ಕೋಚಿಂಗ್ ಟರ್ಮಿನಲ್ ಕೇಂದ್ರ ಆರಂಭವಾಗುತ್ತಿದೆ ಎಂಬುದೇ ಸಂತೋಷದ ವಿಷಯ. ಇದನ್ನು ಎಲ್ಲಿ ಸ್ಥಾಪಿಸಬೇಕು ಎಂಬ ವಿಷಯದಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ. ಈ ವಿಷಯದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ತಿಳಿಸಿದರು.

‘ತಾಳಗುಪ್ಪದಲ್ಲಿ ಟರ್ಮಿನಲ್ ಕೇಂದ್ರ ಆರಂಭವಾಗುವುದಕ್ಕೆ ತಡೆಯೊಡ್ಡಿ ರಾಜಕೀಯ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ಸಾಗರದ ರೈಲ್ವೆ ಹೋರಾಟ ಸಮಿತಿ ಪ್ರಮುಖರು ಈಚೆಗೆ ಪತ್ರಿಕಾಗೋಷ್ಟಿಯಲ್ಲಿ ಆರೋಪ ಮಾಡಿರುವುದು ಬೇಸರ ತಂದಿದೆ. ಹೀಗೆ ಆರೋಪಿಸುವ ಮೊದಲು ಅವರು ನನ್ನನ್ನು ಭೇಟಿಯಾಗಿ ವಿಷಯ ಚರ್ಚಿಸಬಹುದಿತ್ತು. ತಾಳಗುಪ್ಪದಲ್ಲಿ ಟರ್ಮಿನಲ್ ಕೇಂದ್ರವನ್ನು ಸ್ಥಾಪಿಸದೆ ಇದ್ದರೆ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿರುವುದು ಬೇಸರ ತಂದಿದೆ’ ಎಂದರು.

‘ಟರ್ಮಿನಲ್ ಕೇಂದ್ರವನ್ನು ಸ್ಥಾಪಿಸಲು 25ರಿಂದ 30 ಎಕರೆ ಭೂ ಪ್ರದೇಶದ ಅವಶ್ಯಕತೆ ಇದೆ. ತಾಳಗುಪ್ಪದಲ್ಲಿ ರೈಲ್ವೆ ಇಲಾಖೆಗೆ ಸೇರಿದ 19.4 ಎಕರೆ ಭೂಮಿ ಇದ್ದರೆ, ಕೋಟೆಗಂಗೂರಿನಲ್ಲಿ 17.2 ಎಕರೆ ಭೂಮಿ ಇದೆ. ಎಲ್ಲಿ ಕೇಂದ್ರವನ್ನು ಸ್ಥಾಪಿಸಿದರೂ ಹೆಚ್ಚುವರಿ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆ ಮೂಲಕ ಪಡೆಯಬೇಕಾದ ಅನಿವಾರ್ಯತೆ ಇದೆ’ ಎಂದು ತಿಳಿಸಿದರು. 

‘ಶಿವಮೊಗ್ಗ-ತಾಳಗುಪ್ಪ ರೈಲ್ವೆ ಮಾರ್ಗದ ಬ್ರಾಡ್ ಗೇಜ್ ಪರಿವರ್ತನೆಗೆ ₹ 150 ಕೋಟಿ ಹಣವನ್ನು ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ್ದಾರೆ. ಜಿಲ್ಲೆಯ ರೈಲ್ವೆ ಮಾರ್ಗದ ಅಭಿವೃದ್ಧಿಗೆ ಸಂಸದನಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸುವುದಿಲ್ಲ: ‘ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸಿ ಶಿಕಾರಿಪುರನ್ನು ಜಿಲ್ಲಾ ಕೇಂದ್ರವಾಗಿ ಮಾಡಲಾಗುವುದು ಎಂಬುದು ಕೇವಲ ವದಂತಿಯಷ್ಟೆ. ಇಂತಹ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಶಾಸಕ ಎಚ್. ಹಾಲಪ್ಪ ಹರತಾಳು, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಬಿಜೆಪಿ ಪ್ರಮುಖರಾದ ದತ್ತಾತ್ರಿ, ಯು.ಎಚ್. ರಾಮಪ್ಪ, ಪ್ರಸನ್ನ ಕೆರೆಕೈ, ಗುರುಮೂರ್ತಿ ಇದ್ದರು.

ಪ್ರತಿಕ್ರಿಯಿಸಿ (+)