ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ನೇಮಕಾತಿ: ಕನ್ನಡಿಗರಿಗೆ ಮೀಸಲಾತಿ ನೀಡಿ

ರೈಲ್ವೆ ನೇಮಕಾತಿ ಹೋರಾಟ ಸಮಿತಿ ಪ್ರತಿಭಟನೆ
Last Updated 30 ಆಗಸ್ಟ್ 2019, 13:00 IST
ಅಕ್ಷರ ಗಾತ್ರ

ದಾವಣಗೆರೆ: ರೈಲ್ವೆ ಇಲಾಖೆಯ ‘ಡಿ’ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಶೇ 80 ಮೀಸಲಾತಿ ನೀಡಬೇಕು. ರೈಲ್ವೆ ನೇಮಕಾತಿ ಕೋಶ ಮೂಲಕವೇ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿ ರೈಲ್ವೆ ನೇಮಕಾತಿ ಹೋರಾಟ ಸಮಿತಿ ಪದಾಧಿಕಾರಿಗಳು, ಪರೀಕ್ಷಾರ್ಥಿಗಳು ಶುಕ್ರವಾರ ಇಲ್ಲಿನ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಕೇಂದ್ರ ಗ್ರಂಥಾಲಯದಿಂದ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಉಪ ವಿಭಾಗಾಧಿಕಾರಿ ಕಚೇರಿ ಎದುರು ಕೆಲಕಾಲ ರಸ್ತೆತಡೆ ನಡೆಸಿದರು. ಬಳಿಕ ರೈಲು ನಿಲ್ದಾಣದ ಕಡೆ ಹೊರಟಾಗ ಆರ್‌ಪಿಎಫ್ ಸಿಬ್ಬಂದಿ ತಡೆದಿದ್ದರಿಂದ ಆವರಣದಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ನೈರುತ್ಯ ರೈಲ್ವೆಯ ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ 2012-13ರಲ್ಲಿ ರೈಲ್ವೆ ನೇಮಕಾತಿ ಕೋಶ (ಆರ್‌ಆರ್‌ಸಿ) ಆರಂಭಿಸಲಾಗಿತ್ತು. ಆಗ ‘ಡಿ‘ ದರ್ಜೆ ನೌಕರರಾಗಿ ಶೇ 80ರಷ್ಟು ಕನ್ನಡಿಗರು ಆಯ್ಕೆಯಾಗಿದ್ದರು. ಆದರೆ, 2017-18ರಲ್ಲಿ ಕೇಂದ್ರೀಕೃತ ವ್ಯವಸ್ಥೆ ಜಾರಿಗೊಂಡಿದ್ದರಿಂದ 2200 ಹುದ್ದೆಗಳಲ್ಲಿ ಶೇ 1 ರಷ್ಟು ಮಂದಿ ಮಾತ್ರ ನೇಮಕಗೊಂಡಿದ್ದಾರೆ. ಇದರಿಂದ ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ಕೇಂದ್ರೀಕೃತ ವ್ಯವಸ್ಥೆಯಲ್ಲಿ ದೇಶದ ಎಲ್ಲಿ ಬೇಕಾದರೂ ಪರೀಕ್ಷೆ ಬರೆಯಬಹುದು. ಅಲ್ಲದೇ ಪಠ್ಯಕ್ರಮ ಉತ್ತರ ಭಾರತದಲ್ಲಿ ತಯಾರಾಗುತ್ತದೆ. ಇದರಿಂದ ರೈಲ್ವೆ ನೇಮಕಾತಿಯಲ್ಲಿ ರಾಜ್ಯವೂ ಸೇರಿ ದಕ್ಷಿಣ ಭಾರತದವರಿಗೆ ಅನ್ಯಾಯವಾಗುತ್ತಿದೆ. ಇದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಮೊದಲು ಇದ್ದ ರೈಲ್ವೆ ನೇಮಕಾತಿ ಕೋಶದ ಮೂಲಕವೇ ಪರೀಕ್ಷೆ ನಡೆಸಬೇಕು. ನೇಮಕಾತಿಯಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಕೇರಳ ವಿವಿಧ ರಾಜ್ಯಗಳಲ್ಲಿ ಸ್ಥಳೀಯರಿಗೆ ಶೇ 80 ಮೀಸಲಾತಿ ನೀಡಲಾಗಿದೆ. ಕನ್ನಡಿಗರಿಗೂ ಈ ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.

ನಂತರ ಸ್ಥಳಕ್ಕೆ ಬಂದ ನಿಲ್ದಾಣದ ಅಧೀಕ್ಷಕ ಮೂಲಕ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.

ಸಂಘಟನೆಯ ಸಂಚಾಲಕ ರಂಗನಾಥ್, ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ವೆಂಕಟೇಶ್, ಹಾಲೇಶ್, ಮೌನೇಶ್, ಶಿವಮೂರ್ತಿ, ಟಿ.ರಘು, ಜಿ.ಈ. ದಾನೇಗೌಡ, ನಾಗರಾಜ್, ಮಾರುತಿ, ನಿಂಗರಾಜ್, ಪುರುಷೋತ್ತಮ್ ಇದ್ದರು.

ಕನ್ನಡಪರ, ರೈತಪರ ಸೇರಿ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT