ಭಾನುವಾರ, ಅಕ್ಟೋಬರ್ 17, 2021

ಮಳೆ: 31 ಕಚ್ಚಾ ಮನೆ, 29 ಪಕ್ಕ ಮನೆಗಳಿಗೆ ಹಾನಿ: ಒಬ್ಬರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ಸುರಿದ ಭಾರಿ ಮಳೆ ಮತ್ತು ಗಾಳಿಗೆ 31 ಕಚ್ಚಾ ಮನೆಗಳಿಗೆ, 29 ಪಕ್ಕಾ ಮನೆಗಳಿಗೆ ಹಾನಿಯಾಗಿದೆ. ತಾಲ್ಲೂಕಿನ ನರಗನಹಳ್ಳಿಯಲ್ಲಿ ಗುರುವಾರ ಮಧ್ಯಾಹ್ನ ಮನೆಯ ಗೋಡೆ ಕುಸಿದು ಕುಂಬ್ಳರ ಮಂಜಪ್ಪ (48) ಮೃತಪಟ್ಟಿದ್ದಾರೆ. ಅವರ ಸಹೋದರ ಪರಶುರಾಮಪ್ಪ ಗಾಯಗೊಂಡಿದ್ದಾರೆ. ಜಿಲ್ಲೆಯಲ್ಲಿ ₹ 42 ಲಕ್ಷ ನಷ್ಟ ಉಂಟಾಗಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 55 ಎಕರೆ ಮೆಕ್ಕೆಜೋಳ, 2.2 ಎಕರೆ ಕಬ್ಬು ನಾಶವಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ 6 ಎಕರೆ ಮೆಕ್ಕೆಜೋಳ ಹಾಳಾಗಿದೆ. 50 ಎಕರೆ ಮೆಕ್ಕೆಜೋಳಕ್ಕೆ ಹಾನಿಯಾಗಿದೆ. ಇದಲ್ಲದೇ ಅಡಿಕೆ, ಬಾಳೆ, ಟೊಮೆಟೊ ಸಹಿತ ವಿವಿಧ ಬೆಳೆಗಳಿಗೆ ಹಾನಿಯಾಗಿದೆ.

ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಪರಿಹಾರಕ್ಕೆ ಆಗ್ರಹ: ತಾಲ್ಲೂಕಿನ ನರಗನಹಳ್ಳಿಯಲ್ಲಿ ಗೋಡೆ ಕುಸಿದು ಮೃತಪಟ್ಟಿರುವ ಕುಂಬ್ಳರ ಮಂಜಪ್ಪ ಆ ಮನೆಯ ಆಧಾರವಾಗಿದ್ದರು. ಕೂಲಿ ಮಾಡಿ ಮನೆ ನಡೆಸುತ್ತಿದ್ದರು. ಆ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ, ಎರಡು ಎಕರೆ ಭೂಮಿ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್‌. ಬಸವಂತಪ್ಪ ಆಗ್ರಹಿಸಿದ್ದಾರೆ.

ನೀರ್ತಡಿಯಲ್ಲಿ ಮನೆಗೆ ನೀರು: ತಾಲ್ಲೂಕಿನ ಹೆಬ್ಬಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರ್ತಡಿಯಲ್ಲಿ ಚರಂಡಿ ನಿರ್ಮಿಸದ ಕಾರಣ ಮನೆಗಳಿಗೆ ನೀರು ನುಗ್ಗಿದೆ. ಬುಧವಾರ ರಾತ್ರಿ ನೀರು ಹೊರಹಾಕುವುದರಲ್ಲಿಯೇ ಜನ ಸುಸ್ತಾದರು. ಒಂದು ಮನೆಯ ಗೋಡೆ ಕುಸಿದಿದೆ. ಕೂಡಲೇ ಮನೆಗಳಿಗೆ ಪರಿಹಾರ ನೀಡಬೇಕು. ಹೊಂಡದಿಂದ ನೀರು ಹರಿಯಲು ಚರಂಡಿ ನಿರ್ಮಿಸಿಕೊಡಬೇಕು ಎಂದು ರಾಜ್ಯ ರೈತ ಸಂಘದ (ಹುಚ್ಚವ್ವನಹಳ್ಳಿ ಬಣ) ರಾಜ್ಯ ಕಾರ್ಯದರ್ಶಿ ನೀರ್ತಡಿ ತಿಪ್ಪೇಶ್‌ ಒತ್ತಾಯಿಸಿದ್ದಾರೆ.

ಪ್ರತಿಭಟನೆ: ಮಳೆಯಿಂದಾಗಿ ತತ್ತರಿಸಿರುವ ಎಸ್ಸೆಸ್ಸೆಂ ನಗರ ಸಿ ಬ್ಲಾಕ್, ಬೀಡಿ ಕಾರ್ಮಿಕರ ಕಾಲೊನಿ, ಎಚ್‍ಕೆಬಿಎನ್ ಲೇಔಟ್‍ಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಪಾಲಿಕೆ ಮುಂಭಾಗದಲ್ಲಿ ಗುರುವಾರ ಪ್ರತಿಭಟಿಸಿದರು.

ಚರಂಡಿಗಳು ಇಲ್ಲದಿರುವುದು, ಅವೈಜ್ಞಾನಿಕವಾಗಿ ನಿರ್ಮಿಸಿರುವ ಒಳ ಚರಂಡಿಗಳಿಂದಾಗಿ ಸಮಸ್ಯೆ ಜಟಿಲವಾಗಿದೆ. ಆಹಾರ ಧಾನ್ಯ, ಬಟ್ಟೆ ಬರೆ, ದಾಖಲಾತಿ, ಶಾಲಾ-ಕಾಲೇಜು ಪುಸ್ತಕಗಳು ಹೀಗೆ ಎಲ್ಲವೂ ಮಳೆ ನೀರಿನಲ್ಲಿ ತೊಯ್ದು ಹಾಳಾಗುತ್ತಿವೆ. ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಅವ್ಯವಸ್ಥೆಯಿಂದ ಕೂಡಿರುವ ಒಳ ಚರಂಡಿ ಸರಿಪಡಿಸಬೇಕು ಎಂದು ಪ್ರತಿಭಟನಕಾರರು ‍ಆಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ನಿವಾಸಿಗಳಾದ ಇತ್ರಾಜ್, ಐಸಾಕ್, ಬಾಬ್‍ಜಾನ್, ಎಚ್.ಡಿ. ಗೌಸ್‍ಪೀರ್, ಸೈಯದ್ ಜಿಯಾ, ಮಹಮ್ಮದ್ ಹಬೀಬುಲ್ಲಾ, ದಾವಲ್ ಸಾಬ್, ಸಿದ್ದಿಕ್ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.