ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ನೆಲಕಚ್ಚಿದ ಬಾಳೆ, ಅಡಿಕೆ, ಭತ್ತದ ಬೆಳೆ; ರೈತರಿಗೆ ಮೊದಲ ಮಳೆಯ ‘ಬರೆ’

ಲಕ್ಷಾಂತರ ರೂಪಾಯಿ ಹಾನಿ
Last Updated 1 ಮೇ 2019, 10:50 IST
ಅಕ್ಷರ ಗಾತ್ರ

ದಾವಣಗೆರೆ: ಸೋಮವಾರ ರಾತ್ರಿ ಬಂದ ಬಿರುಗಾಳಿ ಸಹಿತ ಮೊದಲ ಮಳೆಯು ದಾವಣಗೆರೆಯ ಕಸಬಾ ಹಾಗೂ ಆನಗೋಡ ಹೋಬಳಿಯ ಹಲವು ಹಳ್ಳಿಗಳ ರೈತರಿಗೆ ‘ಬರೆ’ ಎಳೆದಿದೆ. ಗಾಳಿ–ಮಳೆಗೆ ನೂರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶಗಳಲ್ಲಿ ಬಾಳೆ, ಅಡಿಕೆ, ಭತ್ತದ ಬೆಳೆ ನೆಲಕಚ್ಚಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ.

ಹಳ್ಳಿಗಳಲ್ಲಿ ಕೊಯ್ಲಿಗೆ ಬಂದಿದ್ದ ಬಾಳೆಗಿಡಗಳು, ಅಡಿಕೆ ಮರಗಳು ಸಾಲು ಸಾಲಾಗಿ ನೆಲಕ್ಕುರುಳಿವೆ. ಭತ್ತದ ಗದ್ದೆಗಳಲ್ಲಿ ತೆನೆಗಳು ಚಾಪೆ ಹಾಸಿದಂತೆ ನೆಲಕ್ಕೊರಗಿವೆ.

ಎಲೆಬೇತೂರು, ಪುಟಗನಾಳು, ಕಾಡಜ್ಜಿ, ಮಾಳಗೊಂಡನಹಳ್ಳಿ, ಕಡ್ಲೆಬಾಳು, ಓಬಜ್ಜಿಹಳ್ಳಿ, ಬಿ. ಕಲ್ಪನಹಳ್ಳಿ, ನಾಗರಕಟ್ಟೆ ಗ್ರಾಮಗಳು ಹಾಗೂ ಆನಗೋಡು ಹೋಬಳಿಯ ಬೋರಗೊಂಡನಹಳ್ಳಿ, ಆಲೂರು, ಮೆಳ್ಳೆಕಟ್ಟೆ, ಅಣಜಿ, ಕಿತ್ತೂರು, ಹೆಮ್ಮನಬೇತೂರು, ದ್ಯಾಮವ್ವನಹಳ್ಳಿ, ಚಿಕ್ಕವ್ವನಾಗತಿಹಳ್ಳಿ, ಹುಲಿಕಟ್ಟೆ, ಗೂಡಾಳು, ಗುಮ್ಮನೂರು ಗಾಂಧಿನಗರ ಗ್ರಾಮಗಳಲ್ಲಿ ತೋಟಗಾರಿಕೆ ಬೆಳೆಗಳಾದ ಬಾಳೆ, ಅಡಿಕೆ, ಎಲೆಬಳ್ಳಿ, ಪಪ್ಪಾಯಿ ಬೆಳೆ ಹಾನಿಗೊಳಗಾಗಿವೆ.

ಬಾಳೆ, ಅಡಿಕೆ ಹಾಗೂ ಪಪ್ಪಾಯಿ ಮರಗಳು ಮುರಿದು ಬಿದ್ದು, ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.

ಮಾಳಗೊಂದನಹಳ್ಳಿ, ದೇವರಹಟ್ಟಿ, ಚಿಕ್ಕಬೂದಿಹಾಳ, ದೊಡ್ಡಬೂದಿಹಾಳ, ಕಕ್ಕರಗೊಳ್ಳ, ಬೇತೂರು, ಕಾಡಜ್ಜಿ, ನಾಗರಕಟ್ಟೆ ಗ್ರಾಮಗಳಲ್ಲಿ ಒಟ್ಟು 225 ಹೆಕ್ಟೇರ್‌ ಭತ್ತದ ಬೆಳೆ ನೆಲಕ್ಕೊರಗಿವೆ. ಬೇತೂರಿನಲ್ಲಿ 15 ಹೆಕ್ಟೇರ್‌ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ.

ತೋಟಗಾರಿಕೆ, ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ಮಂಗಳವಾರ ತೆರಳಿ ಪರಿಶೀಲನೆ ನಡೆಸಿದರು.

ಕೈಗೆ ಬಾರದ ಬೆಳೆ

ಎಲೆಬೇತೂರು ಗ್ರಾಮದಲ್ಲಿ ಸಾಲು ಸಾಲು ಬಾಳೆ, ಅಡಿಕೆ ತೋಟಗಳು ನೆಲಕಚ್ಚಿದ್ದು, ಅಪಾರ ಪ್ರಮಾಣದ ಹಾನಿಯಿಂದ ರೈತರು ಕಂಗಾಲಾಗಿದ್ದಾರೆ.

‘ಮೂರು ಎಕರೆಯಲ್ಲಿ ಬಾಳೆ ಬೆಳೆದಿದ್ದೆ. ಕೊಯ್ಲಿನ ಹಂತಕ್ಕೆ ಬಂದಿತ್ತು. ಗಾಳಿ ಮಳೆಗೆ ಶೇ 70ರಷ್ಟು ತೋಟ ಹಾಳಾಗಿದೆ. ಜೊತೆಗೆ ತೇಗ, ಅಡಿಕೆ ಮರಗಳೂ ಉರುಳಿ ಬಿದ್ದಿವೆ’ ಎಂದು ಎಲೆಬೇತೂರು ಗ್ರಾಮದ ರೈತ ಅಂಬಲಿ ಪ್ರದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರು ಎಕರೆ ಬಾಳೆ ತೋಟಕ್ಕೆ ಸುಮಾರು ₹ 90 ಸಾವಿರ ಖರ್ಚು ಮಾಡಿದ್ದೆ. ಬೆಳೆ ಕೈಗೆ ಬಂದಿದ್ದರೆ ₹ 4 ಲಕ್ಷಕ್ಕೂ ಹೆಚ್ಚು ಆದಾಯ ಸಿಗುತ್ತಿತ್ತು. ಆದರೆ, ಗಾಳಿ ಮಳೆ ತೋಟವನ್ನೇ ನಾಶ ಮಾಡಿತು’ ಎಂದು ಅಳಲು ತೋಡಿಕೊಂಡರು.

ಇದೇ ಗ್ರಾಮದ ರಮೇಶ್‌ ಅವರ 4.5 ಎಕರೆಯ ಬಾಳೆ ತೋಟವೂ ನೆಲ ಕಚ್ಚಿದೆ.

ಬೆಳೆ ಹಾನಿ ವಿವರ

ಬೆಳೆ–ಪ್ರದೇಶ (ಹೆಕ್ಟೇರ್‌ಗಳಲ್ಲಿ)

ಬಾಳೆ–80

ಅಡಿಕೆ–75

ಎಲೆಬಳ್ಳಿ–5

ಪಪ್ಪಾಯಿ–5

ಭತ್ತ–225

ಮೆಕ್ಕೆಜೋಳ–15

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT