ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿಗೆ ಹಾರಿಹೋದ 30 ಮಳಿಗೆಗಳ ಶೀಟ್‌

‘ರೇವತಿ’ ಮಳೆ ಸೃಷ್ಟಿಸಿದ ಅವಾಂತರ
Last Updated 6 ಏಪ್ರಿಲ್ 2020, 14:19 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ಭಾನುವಾರ ರಾತ್ರಿ ಗಾಳಿಯ ಜೊತೆಗೆ ‘ರೇವತಿ’ ಮಳೆ ಅಬ್ಬರಿಸಿದ ಪರಿಣಾಮ ಹೈಸ್ಕೂಲ್‌ ಮೈದಾನದಲ್ಲಿರುವ ಖಾಸಗಿ ಬಸ್‌ನಿಲ್ದಾಣದ 30ಕ್ಕೂ ಹೆಚ್ಚು ಮಳಿಗೆಗಳ ತಗಡಿನ ಶೀಟ್‌ ಹಾರಿಹೋಗಿದೆ. ಅಂಗಡಿಯೊಳಗಿನ ಸಾಮಗ್ರಿಗಳು ಮಳೆ ನೀರಿಗೆ ನೆನೆದು ವ್ಯಾಪಾರಿಗಳಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.

ಸೋಮವಾರ ಬೆಳಿಗ್ಗೆ ವ್ಯಾಪಾರಿಗಳು ಮಳೆ ನೀರನ್ನು ಹೊರಗೆ ಹಾಕುತ್ತಿದ್ದರು. ಕಳಪೆ ಕಾಮಗಾರಿಯಿಂದಾಗಿಯೇ ಶೀಟ್‌ ಹಾರಿ ಹೋಗಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿ ಕಾರುತ್ತಿರುವುದು ಕಂಡುಬಂತು. ಇನ್ನೊಂದೆಡೆ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಸಂಬಂಧಪಟ್ಟ ಗುತ್ತಿದಾರರಿಂದ ಶೀಟ್‌ಗಳನ್ನು ಪುನಃ ಹಾಕಿಸಿದರು.

‘ಹಳೇ ಪಿ.ಬಿ. ರಸ್ತೆಯಲ್ಲಿದ್ದ ಖಾಸಗಿ ಬಸ್‌ನಿಲ್ದಾಣದಿಂದ ಇಲ್ಲಿಗೆ ಮೂರು ತಿಂಗಳ ಹಿಂದೆಯಷ್ಟೇ ನಮ್ಮನ್ನು ಸ್ಥಳಾಂತರಿಸಲಾಗಿತ್ತು. ಬಳೆಗಳು, ಅಲಂಕಾರಿಕ ವಸ್ತುಗಳೆಲ್ಲ ಮಳೆ ನೀರಿಗೆ ಒದ್ದೆಯಾಗಿದೆ. ಅಂದಾಜು ₹ 50 ಸಾವಿರಕ್ಕೂ ಹೆಚ್ಚು ಹಾನಿ ಸಂಭವಿಸಿದೆ’ ಎಂದು ಬಳೆ ಅಂಗಡಿಯ ಮಾಲೀಕ ಮಹಮ್ಮದ್‌ ಶಫಿವುಲ್ಲಾ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಬಸ್‌ನಿಲ್ದಾಣವನ್ನು ಇಲ್ಲಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸುತ್ತಿದ್ದಾರೆ ಎಂಬ ಕಾರಣಕ್ಕೆ ಕಾಮಗಾರಿಯನ್ನು ಸಮರ್ಪಕವಾಗಿ ಮಾಡಿರಲಿಲ್ಲ. 48ರಿಂದ 77ನೇ ಸಂಖ್ಯೆವರೆಗಿನ ಮಳಿಗೆಗಳ ಶೀಟ್‌ಗಳು ಹಾರಿ ಹೋಗಿವೆ. ವ್ಯಾಪಾರಿಗಳಿಗೂ ₹ 1 ಲಕ್ಷದಿಂದ ₹ 1.50 ಲಕ್ಷದವರೆಗೂ ನಷ್ಟವಾಗಿದೆ. ಸರ್ಕಾರ ಪರಿಹಾರ ನೀಡಬೇಕು’ ಎಂದು ರೇಣುಕಾ ಬ್ಯಾಂಗಲ್‌ ಸ್ಟಾಲ್‌ನ ರೇಣುಕಮ್ಮ ಮನವಿ ಮಾಡಿದರು.

‘ಲಾಕ್‌ಡೌನ್‌ ಇರುವುದರಿಂದ ಮಳಿಗೆಗೆ ಬೀಗ ಹಾಕಿ ಮನೆಯಲ್ಲಿದ್ದೆವು. ಅಂಗಡಿಯಲ್ಲೇ ಇದ್ದಾಗ ಗಾಳಿ–ಮಳೆ ಬಂದಿದ್ದರೆ ಜೀವಹಾನಿ ಸಂಭವಿಸುತ್ತಿತ್ತು. ಸ್ವೀಟ್‌, ಖಾರಾ, ರಸ್ಕ್‌ ಸೇರಿ ಹಲವು ಸಾಮಗ್ರಿಗಳು ಮಳೆ ನೀರಿಗೆ ಸಿಲುಕಿದೆ. ಲಾಕ್‌ಡೌನ್‌ನಿಂದಾಗಿ ವ್ಯಾಪಾರ ಇಲ್ಲದೆ ನಷ್ಟದಲ್ಲಿದ್ದೆವು. ಈಗ ಮಳೆಯಿಂದಾಗಿ ಇನ್ನಷ್ಟು ಹಾನಿಯಾಗಿದೆ’ ಎಂದು ಬಸಣ್ಣ ಬೇಕರಿ ಹಾಗೂ ಗಿರೀಶ್‌ ಬೇಕರಿಯ ಮಾಲೀಕರು ಅಳಲು ತೋಡಿಕೊಂಡರು.

ಪರಿಹಾರಕ್ಕೆ ಯತ್ನ: ‘ಮಳೆ ನೀರು ದೂರ ಹೋಗಿ ಬೀಳಲಿ ಎಂದು ಕೆಳ ಭಾಗದಲ್ಲಿ ಎರಡು ಅಡಿ ಉದ್ದಕ್ಕೆ ಶೀಟ್‌ ಇಳಿ ಬಿಡಲಾಗಿತ್ತು. ಮೈದಾನದಲ್ಲಿ ಖಾಲಿ ಜಾಗ ಇರುವುದರಿಂದ ಏಕಾಏಕಿ ಬಿರುಗಾಳಿ ಬೀಸಿದ ಪರಿಣಾಮ ಶೀಟ್‌ಗಳು ಹಾರಿ ಹೋಗಿವೆ. ಪ್ರತಿ 10 ಮಳಿಗೆಗಳ ನಡುವೆ ಗಾಳಿ ಆಡಲು ಜಾಗ ಬಿಡಲಾಗಿತ್ತು. ಆದರೆ, ಪ್ರಯಾಣಿಕರು ಹಿಂದೆ ಹೋಗಿ ಮೂತ್ರ ವಿಸರ್ಜನೆ ಮಾಡುತ್ತಾರೆ ಎಂಬ ಕಾರಣಕ್ಕೆ ಅದನ್ನೂ ಮುಚ್ಚಿಸಿಕೊಂಡಿದ್ದಾರೆ. ಕೆಲವರು ಅಕ್ರಮವಾಗಿ ಮಳಿಗೆಯನ್ನೂ ನಿರ್ಮಿಸಿಕೊಂಡಿದ್ದರು. ಮಳಿಗೆಗಳ ನಡುವಿನ ಜಾಗ ಮುಕ್ತವಾಗಿದ್ದರೆ ಶೀಟ್‌ ಹಾರಿ ಹೋಗುತ್ತಿರಲಿಲ್ಲ’ ಎಂದು ‘ಸ್ಮಾರ್ಟ್‌ ಸಿಟಿ’ ಮುಖ್ಯ ಎಂಜಿನಿಯರ್‌ ಸತೀಶ್‌ ಪ್ರತಿಕ್ರಿಯಿಸಿದರು.

ಮಳೆಯಿಂದಾದ ಅನಾಹುತಕ್ಕೆ ವ್ಯಾಪಾರಿಗಳಿಗೆ ಪರಿಹಾರ ನೀಡುವ ಬಗ್ಗೆ ಸ್ಮಾರ್ಟ್‌ ಸಿಟಿಯ ವ್ಯವಸ್ಥಾಪಕ ನಿರ್ದೇಶಕರು ಜಿಲ್ಲಾಧಿಕಾರಿ ಜೊತೆಗೆ ಚರ್ಚಿಸಿದ್ದಾರೆ ಎಂದೂ ಅವರು ತಿಳಿಸಿದರು.

ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು: ಏಕಾಏಕಿ ರಭಸದಿಂದ ಮಳೆ ಸುರಿದಿದ್ದರಿಂದ ಚರಂಡಿಗಳು ಉಕ್ಕಿ ರಸ್ತೆಯ ಮೇಲೆ ನೀರು ಹರಿದಿತ್ತು. ನೀಲಮ್ಮನ ತೋಟ, ಗಣೇಶ ಬಡಾವಣೆ, ಅಗ್ನಿಶಾಮಕ ಠಾಣೆ ಆವರಣ, ಕೆ.ಎಸ್‌.ಆರ್‌.ಟಿ.ಸಿ. ಬಸ್‌ನಿಲ್ದಾಣ, ಭಾರತ್‌ ಕಾಲೊನಿ ಸೇರಿ ಹಲವೆಡೆ ನೀರು ನುಗ್ಗಿದ್ದವು. ಕೆಲವೆಡೆ ರಸ್ತೆಯ ಮೇಲೆ ಕೊಳಚೆಯ ರಾಡಿ ನಿಂತುಕೊಂಡಿದ್ದರೆ, ಮತ್ತೆ ಕೆಲವೆಡೆ ರಸ್ತೆಯ ಮೇಲೆ ಮಣ್ಣು–ಮರಳು ಹರಡಿಕೊಂಡಿದೆ.

ಹಳೇ ಚಿಕ್ಕನಹಳ್ಳಿಯಲ್ಲಿನ ಕೆಲವ ಗುಡಿಸಲುಗಳ ತಗಡು ಗಾಳಿಗೆ ಹಾರಿ ಹೋದಿದೆ. ಪಕ್ಕದ ದೊಡ್ಡ ಮೋರಿಯಲ್ಲಿ ಕಸ ಕಟ್ಟಿಕೊಂಡಿದ್ದು, ಇನ್ನೊಂದು ಮಳೆ ಬಂದರೆ ಗುಡಿಸಲುಗಳಿಗೆ ನೀರು ನುಗ್ಗುವ ಆತಂಕವಿದೆ ಎನ್ನುತ್ತಾರೆ ಸ್ಥಳೀಯರಾದ ವಿಠ್ಠಲ್‌.

ವಲಸಿಗರ ಜೋಪಡಿಗೆ ನೀರು

ಯಾದಗಿರಿ ಜಿಲ್ಲೆಯಿಂದ ನಗರಕ್ಕೆ ವಲಸೆ ಬಂದ 10 ಕುಟುಂಬಗಳು ವಿನೋಬನಗರದ ಬಳಿ ಹಳೇ ಪಿ.ಬಿ. ರಸ್ತೆಯ ಪಕ್ಕದಲ್ಲಿ ಹಾಕಿಕೊಂಡಿದ್ದ ಜೋಪಡಿಗಳಿಗೆ ಮಳೆ ನೀರು ನುಗ್ಗಿದೆ. ಮನೆಯೊಳಗಿನ ಸಾಮಗ್ರಿಗಳೆಲ್ಲ ಮಳೆ ನೀರಿಗೆ ನೆನೆದು ಹೋಗಿವೆ. ಜಿಲ್ಲಾಡಳಿತದ ಸೂಚನೆಯಂತೆ ಭಾನುವಾರ ರಾತ್ರಿ ನರಹರಿಶೇಟ್‌ ಸಮುದಾಯಭವನದಲ್ಲಿ ಈ ಕುಟುಂಬಗಳು ನೆಲೆಸಿದ್ದವು.

‘ರುದ್ರಾಕ್ಷಿ, ಪ್ಲಾಸ್ಟಿಕ್‌ ಬುಟ್ಟಿ, ಸೂಜಿ ಸೇರಿ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೆವು. ಗಾಳಿಮಳೆ ಬಂದು ಜೋಪಡಿಯ ತಾಡಪಾಲ್‌ಗಳು ಹರಿದುಹೋಗಿವೆ. 10 ಜೋಪಡಿಗಳಿಗೂ ಹೊಸ ತಾಡಪಾಲ್‌ ಕೊಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ದಾನಿಗಳು ನೀಡುವ ಆಹಾರ ಧಾನ್ಯಗಳಿಂದ ಹೇಗೋ ಎರಡು ಹತ್ತು ಊಟ ಮಾಡಿಕೊಂಡಿದ್ದೇವೆ. ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ಊರಿಗೆ ಮರಳುತ್ತೇವೆ’ ಎಂದು ವಲಸಿಗರಾದ ಕೃಷ್ಣರಾಜು ತಿಳಿಸಿದರು.

6 ಹೆಕ್ಟೇರ್‌ ಬಾಳೆ ಬೆಳೆ ಹಾನಿ

ಅಕಾಲಿಕ ಮಳೆಯಿಂದಾಗಿ ದಾವಣಗೆರೆ ಹಾಗೂ ಜಗಳೂರು ತಾಲ್ಲೂಕಿನಲ್ಲಿ ಒಟ್ಟು ಆರು ಹೆಕ್ಟೇರ್‌ ಬಾಳೆ ಬೆಳೆ ಹಾನಿಯಾಗಿದೆ.

ದಾವಣಗೆರೆ ತಾಲ್ಲೂಕಿನ ಕಡಲೆಬಾಳು, ಅರಸಾಪುರ ಹಾಗೂ ಜಗಳೂರು, ಮರಿಕುಂಟೆ, ನಿಬಗೂರು ಗ್ರಾಮಗಳಲ್ಲಿ ಕೆಲ ರೈತರ ಜಮೀನಿನ ಬಾಳೆ ಗಿಡಗಳು ಗೊನೆ ಸಮೇತ ನೆಲಕ್ಕೆ ಬಿದ್ದಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗಾಳಿ ಮಳೆಯಿಂದಾಗಿ ಅರಸಾಪುರ, ಕಡಲೆಬಾಳು, ಕಕ್ಕರಗೋಳ ಗ್ರಾಮದಲ್ಲಿ ಕೆಲವು ಕಡೆ ಭತ್ತದ ಬೆಳೆ ನೆಲಕ್ಕೊರಗಿದ್ದು, ರೈತರಿಗೆ ಅಲ್ಪ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT