ಸಂತೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ಸುರಿದ ಗುಡುಗು-ಸಹಿತ ಬಿರುಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಕೆರೆ-ಕಟ್ಟೆ, ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹ ಹೆಚ್ಚುತ್ತಿದೆ.
ಭೀಮನೆರೆ ಗ್ರಾಮದಲ್ಲಿ ಚೆಕ್ಕ ಡ್ಯಾಂಗಳು ತುಂಬಿವೆ. ಮೆಕ್ಕೆಜೋಳದ ಬೆಳೆ ಕೆಲವೆಡೆ ನೆಲಕಚ್ಚಿವೆ. ಯಕ್ಕೆಗೊಂದಿ-ಉಪನಾಯಕನಹಳ್ಳಿ ಮಧ್ಯ ಹರಿಯುವ ಕರಲಟ್ಟಿ ಹಳ್ಳ ಬಿರು ಮಳೆಯಿಂದ ತುಂಬಿ ಹರಿಯುತ್ತಿದೆ. ರಭಸದಿಂದ ಹರಿಯುವ ನೀರಿನಲ್ಲಿ ಸೇತುವೆ ದಾಟಲು ಗ್ರಾಮಸ್ಥರು ಪರದಾಡಿದರು.
ಸೇತುವೆಗಳ ಎತ್ತರ ಕಡಿಮೆ ಇರುವುದರಿಂದ ಹಳ್ಳದ ನೀರು ಸೇತುವೆ ಮೇಲೆ ಹರಿಯುತ್ತದೆ. ಎತ್ತರದ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಯಕ್ಕೆಗೊಂದಿ ಟಿ.ಕೃಷ್ಣಮೂರ್ತಿ ಒತ್ತಾಯಿಸಿದರು.
5 ಸೆಂ.ಮೀ ಮಳೆ ಆಗಿದೆ. ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆಗೆ ಮಳೆ ಅಡ್ಡಿ ಆಗಿದೆ. ಧ್ವಜಾರೋಹಣ ಸಮಾರಂಭಕ್ಕೆ ಸಿದ್ಧಪಡಿಸಿದ ಮೈದಾನ ಕೆಸರಿನ ರಾಡಿಯಿಂದ ಆವರಿಸಿದೆ.