ಶನಿವಾರ, ಸೆಪ್ಟೆಂಬರ್ 25, 2021
29 °C
ಜಗಳೂರು ತಾಲ್ಲೂಕಿನಲ್ಲಿ ಮುಂಗಾರು ವೈಫಲ್ಯ

ಬತ್ತಿದ ಕೆರೆಕಟ್ಟೆಗಳು; ಅಂತರ್ಜಲ ಕುಸಿತದ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ರಾಜ್ಯದಲ್ಲಿ ಈ ಬಾರಿ ಸಮೃದ್ಧ ಮಳೆಯಿಂದಾಗಿ ನದಿ, ಜಲಾಶಯಗಳು ಮೈದುಂಬಿ ಕೆಲವೆಡೆ ಅತಿವೃಷ್ಟಿಯಾಗಿದೆ. ಆದರೆ, ತಾಲ್ಲೂಕಿನಲ್ಲಿ ಎರಡು ತಿಂಗಳಿಂದ ಮಳೆ ಕೊರತೆಯಾಗಿದ್ದು, ಬಹುತೇಕ ಕೆರೆಕಟ್ಟೆಗಳು ಬರಿದಾಗಿವೆ. ಅಂತರ್ಜಲ ಕುಸಿತದ ಆತಂಕ ಎದುರಾಗಿದೆ.

ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗುವ ಮೂಲಕ ಕಳೆದ ವರ್ಷದಂತೆ ಈ ಬಾರಿಯೂ ಉತ್ತಮ ಮಳೆಯಾಗುವ ಮುನ್ಸೂಚನೆಯಿಂದ ರೈತರು ಸಂತಸಗೊಂಡಿದ್ದರು. ಆದರೆ, ಮುಂಗಾರು ಪೂರ್ವದಲ್ಲಿ ಸುರಿದ ಮಳೆಯ ನಂತರ ಎರಡೂವರೆ ತಿಂಗಳಿಂದ ತಾಲ್ಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿಲ್ಲ. ಬಿಳಿಚೋಡು ಹೋಬಳಿಯಲ್ಲಿ ಒಂದೂವರೆ ತಿಂಗಳ ಹಿಂದೆ ಒಂದು ರಾತ್ರಿ ಉತ್ತಮ ಮಳೆಯಾಗಿದ್ದರಿಂದ ಬಿಳಿಚೋಡು ಮತ್ತು ತುಪ್ಪದಹಳ್ಳಿ ಕೆರೆಗಳಿಗೆ ಐದಾರು ಅಡಿ ನೀರು ಬಂದಿದೆ. ಉಳಿದಂತೆ ತಾಲ್ಲೂಕಿನ 40ಕ್ಕೂ ಹೆಚ್ಚು ಕೆರೆಗಳು ಹನಿ ನೀರಿಲ್ಲದೆ ಬತ್ತಿಹೋಗಿವೆ.

ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ ಸೇರಿ 11 ಮಳೆಗಳು ಮುಗಿದಿದ್ದು, ಪ್ರಸ್ತುತ ಹುಬ್ಬ ಮಳೆ ಅವಧಿಯಾಗಿದೆ. ಉತ್ತರ, ಹಸ್ತ, ಚಿತ್ತ, ಸ್ವಾತಿ ಮಳೆಗಳು ಮಾತ್ರ ಬಾಕಿ ಇವೆ. ಕಳೆದ ಜನವರಿಯಿಂದ ಆಗಸ್ಟ್ ಅಂತ್ಯದ ವೇಳೆಗೆ 490 ಮಿ.ಮೀ. ಮಳೆಯಾಗಿದೆ. ಆದರೆ, ಸಮಾನಾಂತರವಾಗಿ ಮಳೆ ಬಿದ್ದಿಲ್ಲ. 3 ವರ್ಷಗಳ ಹಿಂದೆ ಇದೇ ರೀತಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದು ರೈತರ ಸಾವಿರಾರು ಕೊಳವೆಬಾವಿಗಳು ವಿಫಲವಾಗಿದ್ದವು. ನೂರಾರು ಎಕರೆ ಅಡಿಕೆ, ತೆಂಗಿನ ತೋಟಗಳು ನಾಶವಾಗಿದ್ದವು. 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಎದುರಾಗಿ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಬೇಕಾದ ಸ್ಥಿತಿ ಎದುರಾಗಿತ್ತು.

‘ತಾಲ್ಲೂಕಿನಲ್ಲಿ ಇದುವರೆಗೆ ಆಗಾಗ್ಗೆ ಹಸಿ ಮಳೆಯಾಗಿದ್ದು, ಬೆಳೆಗಳು ಸಂಪೂರ್ಣ ಬಾಡಿಲ್ಲ. ಆದರೆ, ಎರಡು ತಿಂಗಳಿಂದ ತಾಲ್ಲೂಕಿನಲ್ಲಿ ಒಂದೂ ದೊಡ್ಡ ಮಳೆಯಾಗಿಲ್ಲ. ಬಹುತೇಕ ಮಳೆಗಳು ಮುಗಿದಿದ್ದು, ಇನ್ನುಳಿದ ನಾಲ್ಕು ಮಳೆಗಳ ಅವಧಿಯಲ್ಲಿ ಮಳೆ ಬರಬೇಕಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಅಂತರ್ಜಲ ಕುಸಿತಕ್ಕೆ ಕಾರಣವಾಗಲಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸುಲು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕಳೆದ ವರ್ಷ ಇದೇ ವೇಳೆಗೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿತ್ತು. ಆದರೆ, ಈ ಬಾರಿ ಆಗಾಗ ತುಂತುರು ಮಳೆಯಾಗಿದ್ದು ಬಿಟ್ಟರೆ ದೊಡ್ಡ ಮಳೆಗಳು ಬಿದ್ದಿಲ್ಲ. ಹೊಲಗಳಲ್ಲಿರುವ ಕೃಷಿಹೊಂಡಗಳು, ಗೋಕಟ್ಟೆಗಳು, ಚೆಕ್ ಡ್ಯಾಂಗಳು ಹಾಗೂ ಕೆರೆಕಟ್ಟೆಗಳಲ್ಲಿ ಈ ವರ್ಷ ಹನಿ ನೀರು ಸಂಗ್ರಹವಾಗಿಲ್ಲ. ಮಳೆಗಾಲ ಬಹುತೇಕ ಮುಗಿದಿದ್ದು, ಈ ವರ್ಷ ಮತ್ತೆ ಬರಗಾಲ ಬರಬಹುದೇ ಎನ್ನುವ ಆತಂಕ ಎದುರಾಗಿದೆ’ ಎಂದು ಹುಚ್ಚವ್ವನಹಳ್ಳಿ ಕೊರಚರಹಟ್ಟಿಯಲ್ಲಿ ಶ್ರೀಗಂಧ ಬೆಳೆದಿರುವ ಮುನಿಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ತುಂಗಭದ್ರಾ ನದಿಯಿಂದ ತಾಲ್ಲೂಕಿನ 57 ಕೆರೆಗಳನ್ನು ತುಂಬಿಸುವ ₹ 640 ಕೋಟಿ ವೆಚ್ಚದ ಮಹತ್ವದ ಯೋಜನೆಯ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇದೇ ವರ್ಷದ ಡಿಸೆಂಬರ್ ವೇಳೆಗೆ ಪ್ರಾಯೋಗಿಕವಾಗಿ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲಾಗುವುದು. ಮುಂದಿನ ವರ್ಷ ಎಲ್ಲಾ ಕೆರೆಗಳನ್ನು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಎಸ್.ವಿ. ರಾಮಚಂದ್ರ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.