ಅರಸೀಕೆರೆ (ಉಚ್ಚಂಗಿದುರ್ಗ): ಅರಸೀಕೆರೆ ಹೋಬಳಿಯ ರೈತರಿಗೆ ಪ್ರಸಕ್ತ ವರ್ಷದ ಮುಂಗಾರು ಪೂರ್ವದಲ್ಲೇ ಆಘಾತ ಉಂಟಾಗಿದೆ. ಸಕಾಲದಲ್ಲಿ ಮಳೆ ಬಾರದೇ ತೇವಾಂಶ ಕೊರತೆಯಿಂದ ಬಾಡುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆಯಂತೆ ಮೇ ಅಂತ್ಯ ಹಾಗೂ ಜೂನ್ ತಿಂಗಳ ಆರಂಭದಲ್ಲಿ ಮಳೆ ಉತ್ತಮವಾಗಿ ಸುರಿದಿದ್ದರಿಂದ ಹರ್ಷಗೊಂಡ ರೈತರು ಬಿತ್ತನೆ ಮಾಡಿದ್ದರು. ಹೋಬಳಿಯಲ್ಲಿ 24,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಈಗಾಗಲೇ ಶೇ 85ರಷ್ಟು ಬಿತ್ತನೆ ಪೂರ್ಣಗೊಂಡಿದ್ದು ಬೆಳೆ ಸುಸ್ಥಿರವಾಗಿದೆ. ಆದರೆ 22 ದಿನಗಳಿಂದ ಮಳೆಯಾಗದೇ ಇರುವುದರಿಂದ ಬಿಸಿಲು ಹಾಗೂ ಗಾಳಿಯ ರಭಸಕ್ಕೆ ಭೂಮಿಯ ತೇವಾಂಶ ಒಣಗಿದೆ.
ಉಚ್ಚಂಗಿದುರ್ಗ, ಹಿರೇಮೆಗಳಗೆರೆ, ಚಟ್ನಿಹಳ್ಳಿ ಭಾಗದ ರೈತರು ಗೋಕಟ್ಟೆ, ಕೃಷಿ ಹೊಂಡ, ಕಲ್ಲಿನ ಕ್ವಾರಿಗಳಲ್ಲಿಯ ನೀರನ್ನು ಬೆಳೆಗಳಿಗೆ ಮೋಟರ್‌ಗಳ ಮೂಲಕ ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ. ಪುಣಭಘಟ್ಟ, ಅರಸೀಕೆರೆ, ತವಡೂರು, ಲಕ್ಷ್ಮೀಪುರ, ಹೊಸಕೋಟೆ, ಕಂಚಿಕೆರೆ ಭಾಗದ ರೈತರು ಕೊಳವೆ ಬಾವಿ ಆಶ್ರಿತ ರೈತರಿಂದ ಹೊಂದಾಣಿಕೆ ಆಧಾರದಲ್ಲಿ ನೀರು ಪಡೆದು ಬೆಳೆಗಳಿಗೆ ಉಣಿಸುತ್ತಿದ್ದಾರೆ.
‘ಬೇಸಾಯ ಬಾಡಿಗೆ, ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಕೂಲಿ ಕಾರ್ಮಿಕರಿಗಾಗಿ ಪ್ರತಿ ಏಕರೆಗೆ ₹ 10 ಸಾವಿರದಿಂದ ₹ 15 ಸಾವಿರದಷ್ಟು ಹಣ ಖರ್ಚು ತಗುಲುವ ಜೊತೆಗೆ ಹೊಂಡದ ನೀರು ಉಣಿಸಲು ಡೀಸೆಲ್, ಮೋಟರ್ ಬಾಡಿಗೆ ಹೆಚ್ಚುವರಿಯಾಗಿದೆ. ಹಾಗಾಗಿ ಪ್ರಸಕ್ತ ಸಾಲಿನ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಮುಂಗಾರು ಮಳೆ ಸಾಲದ ಶೂಲ ನೆತ್ತಿಯ ಮೇಲೆ ತೂಗಾಡುವಂತೆ ಮಾಡಿದೆ’ ಎನ್ನುತ್ತಾರೆ ನಾಗತಿಕಟ್ಟೆಯ ಯುವ ರೈತ ಪಿ.ಎನ್. ರವಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.