ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀಣಿಸಿದ ಮುಂಗಾರು: ಬೆಳೆ ಕಮರುವ ಭೀತಿ

ಕಳೆದ ಒಂದು ವಾರದಲ್ಲಿ ಶೇ 86ರಷ್ಟು ಮಳೆಯ ಕೊರತೆ
Last Updated 2 ಜುಲೈ 2021, 4:40 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಮುಂಗಾರು ಕ್ಷೀಣಿಸಿದ ಪರಿಣಾಮ ಬೆಳೆ ಒಣಗುವ ಭೀತಿ ರೈತರನ್ನು ಕಾಡುತ್ತಿದೆ. ಜಿಲ್ಲೆಯ ಬಹುತೇಕ ಹೋಬಳಿಗಳಲ್ಲಿ ಒಂದು ವಾರದಿಂದ ಮಳೆರಾಯ ದರ್ಶನ ನೀಡಿಲ್ಲ. ಇನ್ನೂ ನಾಲ್ಕೈದು ದಿನಗಳಲ್ಲಿ ಮಳೆಯಾಗದೇ ಇದ್ದರೆ ಮೆಕ್ಕೆಜೋಳ, ಶೇಂಗಾ, ಈರುಳ್ಳಿ ಹಾಗೂ ತರಕಾರಿ ಬೆಳೆಗಳು ಕಮರುವ ಲಕ್ಷಣಗಳು ಕಂಡುಬರುತ್ತಿವೆ.

ಜೂನ್‌ ತಿಂಗಳ ಆರಂಭದಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ರೈತರು ಸಂಭ್ರಮದಿಂದಲೇ ಬಿತ್ತನೆ ಮಾಡಿದ್ದರು. ಆದರೆ, ಆ ಬಳಿಕ ಮುಂಗಾರು ಕ್ಷೀಣಿಸಿದ್ದು, ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ಚಿಗುರೊಡೆದ ಸಸಿಗಳಿಗೆ ನೀರಿನ ಕೊರತೆಯಾಗುತ್ತಿದೆ.

ಜಿಲ್ಲೆಯಲ್ಲಿ ಜೂನ್‌ ತಿಂಗಳಲ್ಲಿ 76.3 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 82.7 ಮಿ.ಮೀ ಮಳೆಯಾಗಿದ್ದು, ಶೇ 8ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ. ಆದರೆ, ಕಳೆದ ಏಳು ದಿನಗಳಲ್ಲಿ 18.2 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ ಕೇವಲ 2.5 ಮಿ.ಮೀ ಮಳೆಯಾಗಿದೆ. ಒಂದು ವಾರದ ಅವಧಿಯಲ್ಲಿ ಶೇ 82.7ರಷ್ಟು ಮಳೆಯ ಕೊರತೆಯಾಗಿದೆ. ಬಿತ್ತನೆ ಮಾಡಿದ ಬಳಿಕ ಉತ್ತಮವಾಗಿ ಮಳೆಯಾಗದೇ ಇರುವುದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಎದುರಾಗಿದೆ.

‘ಮಳೆ ಚೆನ್ನಾಗಿ ಬಂತು ಎಂದು 20 ದಿನಗಳ ಹಿಂದೆ ₹ 20 ಸಾವಿರ ಖರ್ಚು ಮಾಡಿ ನಾಲ್ಕು ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆ. ಬಿತ್ತನೆ ಮಾಡಿದ ಬಳಿಕ ಮಳೆಯಾಗದೇ ಇರುವುದರಿಂದ ಶೇ 50ರಷ್ಟು ಬೀಜ ಮೊಳಕೆಯೊಡೆದಿಲ್ಲ. ಮೋಡವೂ ಇಲ್ಲದೇ, ಪ್ರತಿ ದಿನವೂ ಬಿಸಿಲು ಬರುತ್ತಿರುವುದರಿಂದ ಮೊಳೆಕೊಡೆದಿರುವ ಸಸಿಗಳು ಸಹ ಒಣಗಲು ಆರಂಭಿಸಿವೆ. ಇನ್ನೂ ನಾಲ್ಕೈದು ದಿನಗಳ ಒಳಗೆ ಮಳೆಯಾಗದೇ ಇದ್ದರೆ ಮತ್ತೆ ಭೂಮಿಯನ್ನು ಹರಗಿ ಮಳೆಯಾದಾಗ ಬಿತ್ತನೆ ಮಾಡಬೇಕಾಗುತ್ತದೆ’ ಎಂದು ನ್ಯಾಮತಿ ತಾಲ್ಲೂಕಿನ ಆರುಂಡಿಯ ರೈತ ಕುಮಾರ್‌ ಟಿ.ಎನ್‌. ಅವರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಕೆಲ ರೈತರು ಈ ಮೊದಲು ಬಿತ್ತನೆ ಮಾಡಿರುವುದು ಸರಿಯಾಗಿ ಮೊಳಕೆಯೊಡೆದಿಲ್ಲ ಎಂದು ಎರಡನೇ ಬಾರಿಗೆ ಬಿತ್ತನೆ ಮಾಡಿದ್ದರು. ಇದೀಗ ಮಳೆ ಮತ್ತೆ ಕೈಕೊಡುವ ಲಕ್ಷಣಗಳು ಕಾಣಿಸಿಕೊಂಡಿರುವುದರಿಂದ ಇನ್ನೊಮ್ಮೆ ಬೆಳೆಯನ್ನು ಹರಗಿ ಬಿತ್ತನೆ ಮಾಡಬೇಕಾದ ಪರಿಸ್ಥಿತಿ ಬರಬಹುದು ಎಂಬ ಆತಂಕ ರೈತರನ್ನು ಕಾಡುತ್ತಿದೆ.

‘ಒಂದೂವರೆ ತಿಂಗಳ ಹಿಂದೆ ಒಂದು ಎಕರೆಯಲ್ಲಿ ಶೇಂಗಾ ಬಿತ್ತನೆ ಮಾಡಿದ್ದೆ. ಇದೀಗ ಕಾಯಿ ಕಟ್ಟುವ ಸಮಯ. ಮಳೆಯಾಗದೇ ಇರುವುದರಿಂದ ಹೂವು ಒಣಗಿ ಉದುರುತ್ತಿವೆ. ಕೊಳವೆಬಾವಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಮಳೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೇವೆ’ ಎನ್ನುತ್ತಾರೆ ಕುಮಾರ್‌.

‘ಸುಮಾರು ₹ 10 ಸಾವಿರ ಖರ್ಚು ಮಾಡಿ ಒಂದು ಎಕರೆಯಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿ ಸರಿಯಾಗಿ ಮೊಳಕೆಯೊಡೆದಿಲ್ಲ. ಟೊಮೆಟೊ ಸೇರಿ ತರಕಾರಿ ಬೆಳೆಗಳು ಮಳೆ ಇಲ್ಲದೇ ಒಣಗಲು ಆರಂಭಿಸಿವೆ. ಮೂರ್ನಾಲ್ಕು ದಿನಗಳಲ್ಲಿ ಮಳೆಯಾಗದೇ ಇದ್ದರೆ ಬೆಳೆ ಕಳೆದುಕೊಳ್ಳುವ ಪರಿಸ್ಥಿತಿ ಬರಲಿದೆ’ ಎಂದು ಆತಂಕ ಪಡುತ್ತಾರೆ ಆರುಂಡಿಯ ರೈತ ಶಿವರಾಜ್‌ ಟಿ.

‘ಐದು ಎಕರೆ ಜಮೀನಿನಲ್ಲಿ ಬೀಜ, ಗೊಬ್ಬರ, ಕೂಲಿಗೆ ಎಂದು ಸುಮಾರು ₹ 40 ಸಾವಿರ ಖರ್ಚು ಮಾಡಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆ. ಬೆಳೆ ಚೆನ್ನಾಗಿ ಬಂದಿತ್ತು. ಆದರೆ, ಬಿತ್ತನೆ ಬಳಿಕ ಮಳೆಯಾಗದೇ ಇರುವುದರಿಂದ ಸಸಿಗಳು ಒಣಗುವ ಭೀತಿ ಕಾಡುತ್ತಿದೆ. ಮಳೆಯ ಕೊರತೆಯಿಂದ ಸುಳಿ ತಿನ್ನುವ ಕೀಟಬಾಧೆ ಕಾಣಿಸಿಕೊಳ್ಳುತ್ತಿದೆ. ಮೂರ್ನಾಲ್ಕು ದಿನಗಳಲ್ಲಿ ಮಳೆಯಾಗದೇ ಇದ್ದರೆ ಬೆಳೆ ಕುಂಠಿತಗೊಳ್ಳಲಿದೆ’ ಎನ್ನುತ್ತಾರೆ ದಾವಣಗೆರೆ ತಾಲ್ಲೂಕಿನ ಹುಲಿಕಟ್ಟೆ ಗ್ರಾಮದ ರೈತ ಶಿವಯೋಗಿ.

**

ವಾರದ ಮಳೆ ವಿವರ (ಮಿ.ಮೀ.ಗಳಲ್ಲಿ)

ತಾಲ್ಲೂಕು ; ವಾಡಿಕೆ ಮಳೆ ; ಬಿದ್ದ ಮಳೆ ; ಕೊರತೆ (%)

ಚನ್ನಗಿರಿ ; 25.1 ; 1.9 ; –92

ದಾವಣಗೆರೆ ; 16.2 ; 2.5 ; –85

ಹರಿಹರ ; 17.2 ; 1.3 ; –92

ಹೊನ್ನಾಳಿ ; 17.5 ; 1.4 ; –92

ಜಗಳೂರು ; 12.4 ; 4.8 ; –61

ನ್ಯಾಮತಿ ; 32.4 ; 2.7 ; –92

ಜಿಲ್ಲೆ ; 18.2 ; 2.5 ; –86

(ಜೂನ್‌ 24ರಿಂದ 30ರವರೆಗಿನ ಮಾಹಿತಿ)

***

ಬೆಳೆಗಳ ಬಿತ್ತನೆ ವಿವರ (ಹೆಕ್ಟೇರ್‌ಗಳಲ್ಲಿ)

ಬೆಳೆ ; ಗುರಿ ; ಸಾಧನೆ

ಮೆಕ್ಕೆಜೋಳ ; 1,26,108 ; 1,00,865

ಶೇಂಗಾ ; 13,820 ; 1,245

ಹತ್ತಿ ; 10,427 ; 1,128

ತೊಗರಿ ; 7,265 ; 9,892

ರಾಗಿ ; 7,295 ; 145

ಸೂರ್ಯಕಾಂತಿ ; 2,190 ; 138

ಬಿಳಿ ಜೋಳ ; 2,400 ; 347

* ಜೂನ್‌ 25ರವರೆಗಿನ ಮಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT