ಶುಕ್ರವಾರ, ಅಕ್ಟೋಬರ್ 7, 2022
28 °C

ಮಳೆಗೆ ಕೊಚ್ಚಿಹೋದ ಸಸಿಮಡಿ: ಸಮುದ್ರದಂತಾದ ಗದ್ದೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಭತ್ತ ನಾಟಿಗೆ ತಯಾರಿ ಮಾಡಿಕೊಂಡಿದ್ದ ಸಸಿ ಮಡಿಗಳು ಕೊಚ್ಚಿಕೊಂಡು ಹೋಗಿವೆ. ಗದ್ದೆಗಳೆಲ್ಲ ಸಮುದ್ರದಂತಾಗಿವೆ.

ಜಿಲ್ಲೆಯಲ್ಲಿ 2.45 ಲಕ್ಷ ಹೆಕ್ಟೇರ್‌ ಭತ್ತದ ಕೃಷಿ ಮಾಡುವ ಗುರಿ ಇಟ್ಟುಕೊಂಡು ರೈತರು ಸಸಿಮಡಿ ಮಾಡಲು ಬಿತ್ತನೆ ಮಾಡಿದ್ದರು. ಕೆಲವು ಕಡೆಗಳಲ್ಲಿ ಈಗಷ್ಟೇ ಮೊಳಕೆಯೊಡೆಯುತ್ತಿದ್ದರೆ, ಇನ್ನು ಕೆಲವು ಕಡೆ ಸಸಿಮಡಿಗಳು ಸ್ವಲ್ಪ ದೊಡ್ಡದಾಗಿದ್ದವು. ಈಗ ಇವೆಲ್ಲ ನೀರುಪಾಲಾಗಿರುವುದರಿಂದ ಮತ್ತೆ ಶುರುವಿಂದ ಸಸಿಮಡಿ ತಯಾರಿಸಬೇಕಾದ ಸ್ಥಿತಿ ಉಂಟಾಗಿದೆ.

ದಾವಣಗೆರೆ ತಾಲ್ಲೂಕಿನ ಜರೆಕಟ್ಟೆ, ಮಿಟ್ಲಕಟ್ಟೆಗಳಲ್ಲಿ ಗದ್ದೆಗಳಲ್ಲಿ ನೀರು ನದಿಯಂತೆ ಹರಿಯುತ್ತಿದೆ.

‘ನಾವು ಎಕರೆಗೆ ₹ 25 ಸಾವಿರ ಖರ್ಚು ಮಾಡಿ ಬೀಜ, ಗೊಬ್ಬರ ಹಾಕಿದ್ದೆವು. ಎಲ್ಲವೂ ಈಗ ನಾಶವಾಗಿದೆ. ಕೂಡಲೇ ತಹಶೀಲ್ದಾರ್‌, ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಬೇಕು. ನಮ್ಮ ಸಂಕಷ್ಟವನ್ನು ಆಲಿಸಬೇಕು. ಪರಿಹಾರವನ್ನು ಒದಗಿಸಬೇಕು’ ಎಂದು ಜರೆಕಟ್ಟೆಯ ರೈತ ಮಂಜುನಾಥ ಒತ್ತಾಯಿಸಿದರು.

‘ಈಗಷ್ಟೇ ಸಸಿಮಡಿಗಳನ್ನು ಮಾಡುತ್ತಿರುವುದರಿಂದ ದೊಡ್ಡಮಟ್ಟದಲ್ಲಿ ನಷ್ಟ ಉಂಟಾಗಿರುವುದಿಲ್ಲ. ಮತ್ತೆ ಸಸಿಮಡಿ ಮಾಡಲು ಅವಕಾಶವೂ ಇದೆ. ಸದ್ಯ ಎಷ್ಟು ನಷ್ಟ ಉಂಟಾಗಿದೆ ಎಂದು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಬಳಿ ಎರಡು ಮನೆಗಳು, ಸಿರಗನಹಳ್ಳಿಯಲ್ಲಿ ಮೂರು ಮನೆಗಳು ಹಾಗೂ ಹೂವಿನಮಡುವಿನಲ್ಲಲಿ ಮೂರು ಮನೆಗಳು ಹಾಗೂ ಒಂದು ದನದ ಕೊಟ್ಟಿಗೆಗೆ ಹಾನಿಯಾಗಿದೆ ಎಂದು ತಹಶೀಲ್ದಾರ್‌ ಬಸವರಾಜ ಕೋಟೂರ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು