ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಮಾಫಿಯಾಕ್ಕೆ ರಾಜನಹಳ್ಳಿ ಸ್ಮಶಾನ ಬಲಿ

ಹರಿಹರ: ಶವ ಹೂಳಲು ನೂರೆಂಟು ಸಮಸ್ಯೆ l ಗ್ರಾಮಗಳಲ್ಲಿ ರುದ್ರಭೂಮಿಗಳು ಒತ್ತುವರಿ
Last Updated 3 ಜುಲೈ 2022, 3:01 IST
ಅಕ್ಷರ ಗಾತ್ರ

ಹರಿಹರ: ತಾಲ್ಲೂಕಿನ ಬಿಳಸನೂರು ಗ್ರಾಮದಲ್ಲಿ ರುದ್ರಭೂಮಿ ಇಲ್ಲದೇ ಗ್ರಾಮಸ್ಥರು ಪಡಿಪಾಟಲು ಅನುಭವಿಸುತ್ತಿದ್ದಾರೆ. ಭೂಸ್ವಾದೀನ ಅಥವಾ ನೇರ ಖರೀದಿ ಮೂಲಕ ರುದ್ರಭೂಮಿ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ತಾಲ್ಲೂಕು ಕಚೇರಿಯ ಮೂಲಗಳ ಪ್ರಕಾರ ತಾಲ್ಲೂಕಿನ 86 ಕಂದಾಯ ಗ್ರಾಮಗಳ ಪೈಕಿ 9 ಗ್ರಾಮಗಳು ಬೇಚರಕ್ (ಜನವಸತಿ ಇಲ್ಲದ್ದು), ಜನವಸತಿ ಇರುವ 77 ಗ್ರಾಮಗಳ ಪೈಕಿ 76ರಲ್ಲಿ ರುದ್ರಭೂಮಿಗಳಿವೆ. ಆದರೆ, ಕೆಲವು ಗ್ರಾಮಗಳಲ್ಲಿ ಸ್ಮಶಾನದ ಜಾಗವನ್ನೂ ಕಬಳಿಸಲಾಗಿದೆ.

ತಾಲ್ಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾಗಿರುವ ನದಿ ತೀರದ ಗ್ರಾಮವಾದ ರಾಜನಹಳ್ಳಿಯಲ್ಲಿ ಹಿಂದೂ ಜನಾಂಗದವರಿಗೆ ಸ್ಮಶಾನಕ್ಕಾಗಿ ಒಂದು ಎಕರೆ ಜಾಗವನ್ನು ಕಂದಾಯ ಇಲಾಖೆಯಿಂದ 4ನೇ ಸರ್ವೆ ನಂಬರ್‌ನಲ್ಲಿ ಮಂಜೂರು ಮಾಡಲಾಗಿದೆ. ಈ ಜಾಗ ನದಿ ತೀರದಲ್ಲಿದ್ದು, ಇಟ್ಟಿಗೆ ಭಟ್ಟಿಗೆ ಯೋಗ್ಯ ಮಣ್ಣು ಸಿಗುವುದರಿಂದ ಮಣ್ಣು ಮಾರುವ ಮಾಫಿಯಾದವರು ಈ ಜಾಗದಲ್ಲಿ ಮಣ್ಣು ಲೂಟಿ ಮಾಡಿದ್ದಾರೆ. ಇದು ಎಷ್ಟರಮಟ್ಟಿಗೆ ಇದೆ ಎಂದರೆ ರುದ್ರಭೂಮಿಯಲ್ಲಿ 20ರಿಂದ 30 ಅಡಿ ಆಳದ ಕಂದಕಗಳು ಸೃಷ್ಟಿಯಾಗಿವೆ. ಇಲ್ಲಿ ಹೆಣ ಹೂಳಲು ಹೋದವರೂ ಕೂಡ ಹೆಣವಾಗುವ ಅಪಾಯವಿದೆ.

ಈ ಕಾರಣ ಸ್ಮಶಾನದ ಉಸಾಬರಿಯೇ ಬೇಡ ಎಂದು ಗ್ರಾಮದಲ್ಲಿ ಜಮೀನು ಇರುವವರು ಕುಟುಂಬದ ಸದಸ್ಯರು ಮರಣ ಹೊಂದಿದರೆ ತಮ್ಮ ಜಮೀನುಗಳಲ್ಲಿ ಅಂತ್ಯಸಂಸ್ಕಾರ ನಡೆಸುತ್ತಾರೆ. ಜಮೀನಿಲ್ಲದ ಬಡವರು, ಕೂಲಿ ಕಾರ್ಮಿಕರಿಗೆ ನದಿ ದಡವೇ ಗತಿಯಾಗಿದೆ. ಸರ್ಕಾರ ಜಾಗ ಮಂಜೂರು ಮಾಡಿದರೂ ಮಣ್ಣು ಮಾಫಿಯಾ ತನ್ನ ಕರಾಮತ್ತು ತೋರಿದೆ.

ಬನ್ನಿಕೋಡು ಗ್ರಾಮದ ಜನರಿಗೆ ಹಳ್ಳವೇ ಗತಿ:

ತಾಲ್ಲೂಕಿನ ಇನ್ನೊಂದು ಪ್ರಮುಖ ಗ್ರಾಮವಾದ ಬನ್ನಿಕೋಡು ಗ್ರಾಮದಲ್ಲಿಯೂ ರುದ್ರಭೂಮಿ ಸಮಸ್ಯೆ ಇದೆ. ಖರಾಬು ಜಮೀನಿನಲ್ಲಿ ರುದ್ರಭೂಮಿಗೆಂದು 1932ರಲ್ಲಿ ಜಾಗ ನಿಗದಿಯಾಗಿದೆ. ಸುತ್ತಲಿನ ಕೆಲ ರೈತರು ಈ ಜಾಗದ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಜಮೀನಿಲ್ಲದ, ಬಡ ಜನರು ಅಂತ್ಯಸಂಸ್ಕಾರಕ್ಕೆ ಸಮೀಪದ ಸೂಳೆಕೆರೆ ಹಳ್ಳದ ದಡ ಆಶ್ರಯಿಸಿದ್ದಾರೆ. ಸೂಳೆಕೆರೆಯಲ್ಲಿರುವ ದಡಕ್ಕೂ ಹೋಗಲು ಸರಿಯಾದ ದಾರಿ ಇಲ್ಲ. ಭತ್ತದ ಗದ್ದೆಯಲ್ಲಿ ಶವವನ್ನು ಹೊತ್ತು ಓಲಾಡುತ್ತಾ ಜನ ಸಾಗಬೇಕಿದೆ.

ಉಕ್ಕಡಗಾತ್ರಿಯಲ್ಲಿ ರಸ್ತೆಯಿಲ್ಲ: ತಾಲ್ಲೂಕಿನ ಗಡಿ ಗ್ರಾಮವಾದ ಉಕ್ಕಡಗಾತ್ರಿಯಲ್ಲಿ ರುದ್ರಭೂಮಿಗೆ ಸಾಗಲು ರಸ್ತೆ ಇಲ್ಲ. ಹೇಗೋ ಸರ್ಕಸ್ ಮಾಡಿ ಅಲ್ಲಿಗೆ ತಲುಪಿದರೆ ಅಲ್ಲಿ ಜಾಲಿ ಗಿಡಗಳ ಕಾಟ. ಅಕ್ಕಪಕ್ಕದ ಜಮೀನುಗಳ ಬಸಿ ನೀರು ಹಳ್ಳದ ರೂಪದಲ್ಲಿ ರುದ್ರಭೂಮಿಯಲ್ಲಿ ಹರಿದು ಆ ಜಾಗ ಜೌಗಾಗಿದೆ. ಹೆಣ ಹೂಳಲು ಗುಂಡಿ ತೆಗೆದರೆ ನೀರು ಬಸಿಯುತ್ತದೆ. ಈ ಗ್ರಾಮದವರಿಗೆ ರುದ್ರಭೂಮಿ ಇದ್ದೂ ಇಲ್ಲದಂತಾಗಿದೆ.

ವಾಸನ ಪ್ರಕರಣ ನ್ಯಾಯಾಲಯದಲ್ಲಿ: ವಾಸನ ಗ್ರಾಮದಲ್ಲಿ ಕಂದಾಯ ಇಲಾಖೆಯಿಂದ 5 ಎಕರೆಯನ್ನು ರುದ್ರಭೂಮಿಗೆ ಮೀಸಲಿರಿಸಲಾಗಿದೆ. ಆದರೆ, ಕೆಲವರು ನ್ಯಾಯಾಲದಲ್ಲಿ ದಾವೆ ಹೂಡಿರುವುದರಿಂದ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ಸಮೀಪದ ನದಿ ದಡವನ್ನು ಆಶ್ರಯಿಸಿದ್ದಾರೆ. ಮಳೆಗಾಲದಲ್ಲಿ ನದಿ ಉಕ್ಕುವುದರಿಂದ ಗ್ರಾಮದಲ್ಲಿ ಆ ಸಮಯದಲ್ಲಿ ಏನು ಅಪಾಯ ಸಂಭವಿಸದಿರಲಿ ಎಂದು ಗ್ರಾಮಸ್ಥರು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಮಲೇಬೆನ್ನೂರಿನಲ್ಲಿರುವ ಸ್ಮಶಾನದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ನೀರು, ರಸ್ತೆ, ಸ್ವಚ್ಛತೆ ಕೊರತೆ ಕಾಡುತ್ತಿದೆ. ದೇಹ ಸುಡುವ ಸ್ಥಳದ ಕಟ್ಟೆ ಸೂಕ್ತವಾಗಿಲ್ಲ. ತಾಲ್ಲೂಕು ಕೇಂದ್ರ ಹರಿಹರದ ರುದ್ರಭೂಮಿ ಕಿರಿದಾಗುತ್ತಿದೆ. ಹೆಣ ಹೂಳಲು ಜಾಗದ ಕೊರತೆ ಇದೆ. ಐದು ಎಕರೆ ರುದ್ರಭೂಮಿಗೆ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಮಂದಿರ, ಮಸೀದಿ, ರುದ್ರಭೂಮಿ ಎಂಬ ಭೇದವಿಲ್ಲದೆ ಅಧ್ಯಾತ್ಮಿಕ ಸ್ಥಳ ಎಂಬ ಕನಿಷ್ಠ ಕಾಳಜಿ ಇಲ್ಲದೆ ಒತ್ತುವರಿ ಮಾಡುವವರ ಸಂಖ್ಯೆ ತಾಲ್ಲೂಕಿನಲ್ಲಿ ಅಧಿಕವಾಗಿದೆ. ಗ್ರಾಮ ಪಂಚಾಯಿತಿಗಳು ಸ್ವಚ್ಛ ಮಾಡಬೇಕು. ತಂತಿ ಬೇಲಿ ಹಾಕುವ ಮೂಲಕ ಒತ್ತುವರಿಗೆ ಅವಕಾಶ ನೀಡಬಾರದು.

ಪಿ.ಜೆ.ಮಹಾಂತೇಶ್‌, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ

ರಾಜನಹಳ್ಳಿಯಲ್ಲಿ ಬಡವರು ಮೃತರ ಅಂತ್ಯ ಸಂಸ್ಕಾರಕ್ಕೆ ನದಿ ದಡವನ್ನು ಆಶ್ರಯಿಸಿದ್ದಾರೆ. ಮಳೆಗಾಲದಲ್ಲಿ ದಡವೂ ಸಿಗದೆ, ರಸ್ತೆ ಬದಿ ಎಲ್ಲೋ ಒಂದು ಕಡೆ ಕಾರ್ಯ ಮುಗಿಸುತ್ತಾರೆ. ಹೂಳಿದ ಕೆಲವು ಹೆಣಗಳನ್ನು ಮರಳುಗಾರಿಕೆ ಮಾಡುವವರು ಜೆಸಿಬಿ ಮೂಲಕ ಎತ್ತಿ ಹಾಕಿಕೊಂಡು ಹೋದ ಪ್ರಕರಣಗಳೂ ನಡೆದಿವೆ.

ಗುಡದಯ್ಯ ಎಚ್.ಎಂ., ಯುವ ಮುಖಂಡ, ರಾಜನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT