ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ರವೀಂದ್ರ ಎಚ್. ಅರಳಗುಪ್ಪಿ ಚಿತ್ರಕಲಾ ಪ್ರದರ್ಶನ

ಕಲಾವಿದರನ್ನು ಪ್ರೋತ್ಸಾಹಿಸಲು ಸಲಹೆ
Last Updated 25 ಜನವರಿ 2020, 14:28 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಸಂಕಲನ ಆರ್ಟ್‌ ಗ್ಯಾಲರಿಯಲ್ಲಿ (ಚಿತ್ರಕುಟೀರ) ಆರಂಭವಾದ ಕಲಾವಿದ ರವೀಂದ್ರ ಎಚ್. ಅರಳಗುಪ್ಪಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

25 ಚಿತ್ರಕಲಾ ಕೃತಿಗಳು ಪ್ರದರ್ಶನಗೊಂಡಿದ್ದು, ಇದೇ 29ರವರೆಗೆ ಪ್ರದರ್ಶನ ನಡೆಯಲಿದೆ. ಅಲ್ಲಿನ ಕಲಾಕೃತಿಗಳಲ್ಲಿ ‘ಫ್ಲೋ ಟು ಫ್ಲಡ್’ ಪ್ರತಿಷ್ಠಾಪನಾ ಕಲೆ ಗಮನ ಸೆಳೆಯಿತು. ಮನುಷ್ಯ ಪ್ರಕೃತಿಯಲ್ಲಿ ಕಸವನ್ನು ಹಾಕುವುದರಿಂದ ನಾವು ಇರುವ ಸ್ಥಳವನ್ನೇ ಆಕ್ರಮಿಸಿಕೊಂಡು ಕೊನೆಗೆ ಅದು ಪ್ರವಾಹವಾಗಿ ಹರಿದು ಮನುಷ್ಯನಿಗೆ ಜಾಗವಿಲ್ಲದಂತೆ ಮಾಡುತ್ತದೆ’ ಎಂಬುದು ಇದರ ಕಲ್ಪನೆ.

‘ನಮ್ಮ ನಮ್ಮ ನಗರಗಳನ್ನು ಚೆನ್ನಾಗಿ ಇಟ್ಟುಕೊಳ್ಳುವಂತೆ ವಿಶ್ವವನ್ನೇ ಚೆನ್ನಾಗಿಟ್ಟುಕೊಂಡರೆ ಬದುಕಲು ಅವಕಾಶವಿದೆ’ ಎಂದು ಕಲಾವಿದ ಅರಳಗುಪ್ಪಿ ಹೇಳಿದರು.

ಜೀವನದ ರೀತಿಯನ್ನು ಬಿಂಬಿಸುವ ‘ಆನ್‌ ಅಂಡ್ ಆಫ್’ ಚಿತ್ರ ಗಮನ ಸೆಳೆಯಿತು. ತಾಯಿ ಗರ್ಭದಿಂದ ಬರುವುದು ಆನ್ ಆದಂತೆ, ಸಾಯುವುದು ಆಫ್ ಇದ್ದಂತೆ ಎಂಬುದನ್ನು ನಿರೂಪಿಸಿತು. ‘ವರ್ಲ್ಡ್‌ ಈಸ್ ನಾಟ್ ಎನಫ್’ ಚಿತ್ರ ಒಸಮಾ ಬಿನ್ ಲ್ಯಾಡೆನ್ ವಲ್ಡ್‌ ಟ್ರೇಡ್ ಸೆಂಟರ್ ಸ್ಫೋಟಿಸಿದ ಬಗೆಯನ್ನು ವಿವರಿಸಿತು. ಧ್ವಂಸ ಮಾಡಿದಕ್ಕೆ ಇರುವ ಗಮನ ಒಳ್ಳೆಯದರ ಮೇಲೆ ಇದ್ದರೆ ಜಗತ್ತನ್ನೇ ಬೆಳಗಬಹುದಿತ್ತು’ ಎಂಬುದು ಕಲಾವಿದರ ಅಭಿಪ್ರಾಯ.

ಮನುಷ್ಯ ಮೇಲೆ ಹೋಗಲು ಪ್ರಯತ್ನ ಮಾಡುತ್ತಾನೆ. ಆದರೆ ಅವನೇ ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಾನೆ ‘ಗೋಲ್ಡನ್ ಸೀಲಿಂಗ್’ ಚಿತ್ರ, ಹರಿಷಡ್ವರ್ಗಗಳು ಮನುಷ್ಯನನ್ನು ಹೇಗೆ ಹಾಳು ಮಾಡುತ್ತವೆ ಎಂಬುದನ್ನು ನಿರೂಪಿಸುವ ಚಿತ್ರ ಗಮನ ಸೆಳೆಯಿತು.

ಬೇಡರ ಕಣ್ಣ‍ಪ್ಪನ ಚಿತ್ರ ಆಕರ್ಷಕವಾಗಿತ್ತು. ದರೋಡೆಕೋರನಾಗಿದ್ದ ಆತ ಬದಲಾಗಲು ಏಕಾಗ್ರತೆ ಕಾರಣ. ಬೇಡರ ಕಣ್ಣಪ್ಪ ಹಾಗೂ ಶಿವಲಿಂಗದ ಸಂಬಂಧ ಕರುಳಬಳ್ಳಿಯ ಸಂಬಂಧ ಅದಕ್ಕಾಗಿಯೇ ಕರುಳ ಬಳ್ಳಿಯನ್ನು ಕಲಾವಿದರು ಚಿತ್ರಿಸಿದರು. ಭಕ್ತಿ ಏಕಾಗ್ರತೆಗೆ ಬೇಲಿ ಇಲ್ಲ. ಸಹಜವಾಗಿ ಹರಿದುಹೋಗುತ್ತದೆ ಎಂಬುದು ಕಲಾವಿದನ ಅಭಿಪ್ರಾಯ.

ಕೋಲೆ ಬಸವ, ಯೋಗ, ಗಾಂಧಾರಿ, ಗೋಲ್ಡನ್ ಟಂಗ್ ಚಿತ್ರಗಳು ಗಮನ ಸೆಳೆದವು.

ಕಾರ್ಯಕ್ರಮ ಉದ್ಘಾಟಿಸಿದ ಲಲಿತಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ರವೀಂದ್ರ ಎಸ್‌.ಕಮ್ಮಾರ್ ಮಾತನಾಡಿ, ‘ಈ ಕೃತಿಗಳಲ್ಲಿ ಕಲಾವಿದನ ಶ್ರಮ ಅಡಗಿದ್ದು, ಇಂತಹ ಕಲಾವಿದರಿಗೆ ಇಲಾಖೆಯಿಂದ ಹೆಚ್ಚಿನ ಪ್ರೋತ್ಸಾಹ ಬೇಕು. ಇಂದಿನ ಜಾಗತಿಕ ಯುಗದಲ್ಲಿ ಡಿಜಿಟಲ್ ಆರ್ಟ್‌ಗೆ ತಕ್ಕಂತೆ ಬದಲಾಗಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ‘ಚಿತ್ರಕಲೆ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಲು ಒಂದು ಮಾಧ್ಯಮ. ಚಿತ್ರಕಲೆಯ ಕಲ್ಪನೆಗೆ ಬೆಲೆ ಕಟ್ಟಲು ಆಗುವುದಿಲ್ಲ. ಮನಸ್ಸಿದ್ದವರಿಗೆ ಮಾತ್ರ ಕಲೆ ಅರ್ಥವಾಗುತ್ತದೆ’ ಎಂದು ಹೇಳಿದರು.

‘ಇಲಾಖೆಯಿಂದ ವಿಶೇಷ ಘಟಕ ಉಪಯೋಜನೆಯಡಿ ಅನೇಕ ಸೌಲಭ್ಯಗಳಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕಲೆ ಪ್ರದರ್ಶನ ಮಾಡಬಹುದಾಗಿದ್ದು, ಇಲಾಖೆಯ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಲಾವಿದ ಚಂದ್ರಶೇಖರ ಸಂಗಾ ಅವರನ್ನು ಸನ್ಮಾನಿಸಲಾಯಿತು. ಚಿತ್ರಕಲಾ ಅಕಾಡೆಮಿ ಮಾಜಿ ಸದಸ್ಯ ಮಹಾಲಿಂಗಪ್ಪ, ಕಲಾವಿದೆ ಉಷಾ ಎಂ.ಬಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT