ಗುರುವಾರ , ನವೆಂಬರ್ 21, 2019
25 °C

ಬದುಕು ಪರೇಡ್‌ನಂತೆ ಅರಿತು ಬಾಳಿ: ಸುಪ್ರೀಂ ನ್ಯಾಯಮೂರ್ತಿ ಶಾಂತನಗೌಡರ್

Published:
Updated:

ದಾವಣಗೆರೆ: ಸತ್ತ ಮೇಲೆ ಸ್ವರ್ಗಕ್ಕೆ ಹೋಗುವ ಬಗ್ಗೆ ಚಿಂತಿಸುವ ಬದಲು ಭೂಮಿಯಲ್ಲಿ ಇರುವಾಗಲೇ ಸ್ವರ್ಗ ಸೃಷ್ಟಿಸಿ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮೋಹನ್‌ ಎಂ. ಶಾಂತನಗೌಡರ್‌ ಹೇಳಿದರು.

ನಗರದ ಆರ್‌.ಎಲ್‌. ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ತರಗತಿಯಲ್ಲಿ ಪಾಠ ಕೇಳುವುದು ಬೌದ್ಧಿಕ ಆರೋಗ್ಯಕ್ಕೆ ಒಳ್ಳೆಯದು. ಪರಿಶ್ರಮ ಎಂದಿಗೂ ಮೋಸ ಮಾಡುವುದಿಲ್ಲ. ವಿದ್ಯಾರ್ಥಿಗಳು ಪರಿಶ್ರಮ, ವಿನಯ, ಪ್ರಾಮಾಣಿಕತೆ ರೂಢಿಸಿಕೊಂಡರೆ ಸಾಧನೆ ಮಾಡಬಹುದು. ನೀವು ಒಳ್ಳೆಯದನ್ನು ಮಾಡಿದರೆ ಜನ ನಿಮ್ಮನ್ನು ಸ್ಮರಿಸುತ್ತಾರೆ. ಮೋಸ ಮಾಡದೆ ಉತ್ತಮವಾಗಿ ಬದುಕಿ’ ಎಂದು ಕಿವಿಮಾತು ಹೇಳಿದರು.

ಜೀವನದಲ್ಲಿ ಸಂತೋಷದಿಂದ ಇರಲು ದ್ವೇಷ ಬಿಡಿ. ದುಃಖದಿಂದ ಹೊರಬನ್ನಿ, ಅಸೂಯೆ ಪಡಬೇಡಿ. ಸರಳವಾಗಿ ಬದುಕಿ. ಜೀವನದಲ್ಲಿ ಹೆಚ್ಚು ನಿರೀಕ್ಷೆ ಬೇಡ. ಬದುಕು ಪರೇಡ್‌ನಂತೆ. ಯೂ ಟರ್ನ್‌ ಯಾವಾಗ ಬೇಕಾದರೂ ಆಗಬಹುದು. ಮೊದಲು ಬಂದವರು, ಕೊನೆಗೆ ಬರುತ್ತಾರೆ. ಕೊನೆಗೆ ಬಂದವರು ಮೊದಲು ಬರುತ್ತಾರೆ ಎಂದು ಅಭಿಪ್ರಾಯಪಟ್ಟರು.

ಕಾನೂನು ವಿದ್ಯಾರ್ಥಿಗಳು ಜೀವನದಲ್ಲಿ ಕಾನೂನನ್ನು ಹೊರತುಪಡಿಸಿ ಸಮಾಜದ ಬಗ್ಗೆ ತಿಳಿದುಕೊಳ್ಳಬೇಕು. ವಕೀಲರು ಸಮಾಜದ ನಾಯಕರು. ಹಿಂದೆ ದೇಶದ ನಾಯಕರರಾಗಿದ್ದವರು ವೃತ್ತಿಯಲ್ಲಿ ವಕೀಲರೇ ಆಗಿರುತ್ತಿದ್ದರು. ಈ ವೃತ್ತಿಯಲ್ಲಿ ಉತ್ತಮ ಅವಕಾಶ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಶಿಕ್ಷಣವನ್ನು ವ್ಯಾಪಾರ ಎಂದು ಪರಿಗಣಿಸಿರುವ ಇಂದಿನ ದಿನಗಳಲ್ಲಿ ಒಂದು ಕಾಲೇಜು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವುದು ದೊಡ್ಡ ಸಾಧನೆ ಎಂದರು.

ಹೈಕೋರ್ಟ್‌ ನ್ಯಾಯಮೂರ್ತಿ ಡಾ.ಎಚ್‌.ಬಿ. ಪ್ರಭಾಕರಶಾಸ್ತ್ರಿ, ‘ದಾವಣಗೆರೆಗೆ ಅಸ್ಮಿತೆ ತಂದುಕೊಟ್ಟದ್ದು ಎರಡು ಅಂಶಗಳು. ಒಂದು ಕೈಗಾರೀಕರಣ, ಇನ್ನೊಂದು ಶೈಕ್ಷಣೀಕರಣ. ಇಲ್ಲಿನ ಶಿಕ್ಷಣ ಕ್ಷೇತ್ರದಲ್ಲಿ ರಾಜನಹಳ್ಳಿ ಕುಟುಂಬ, ಶಾಮನೂರು ಶಿವಶಂಕರಪ್ಪ ಕುಟುಂಬದ ಕೊಡುಗೆ ಅಪಾರ. ರಾಜ್ಯದಲ್ಲಿ ಬಾಪೂಜಿ ವಿದ್ಯಾಸಂಸ್ಥೆಗೆ ಉತ್ತಮ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆ ಇದೆ’ ಎಂದು ಹೇಳಿದರು.

ಒಂದು ಸಂಸ್ಥೆಯ ಉನ್ನತಿಗೆ ಧ್ಯೇಯ ಮತ್ತು ಹೊಣೆಗಾರಿಕೆ, ಮೌಲ್ಯಮಾಪನ ಮುಖ್ಯ. ಸಂವಿಧಾನದ ಧ್ಯೇಯೋದ್ದೇಶ ಈಡೇರಿಸುವ ಜವಾಬ್ದಾರಿ ಕಾನೂನು ವಿದ್ಯಾಸಂಸ್ಥೆಗಳ ಮೇಲಿದೆ. ನ್ಯಾಯದಾನ ವಿಳಂಬವಾಗುತ್ತಿದೆ ಎಂಬ ಇಂದಿನ ದಿನಗಳಲ್ಲಿ ಸಂಸ್ಥೆ ಯಾವ ರೀತಿಯ ಜವಾಬ್ದಾರಿ ನಿರ್ವಹಿಸಬಹುದು ಎಂಬ ಬಗ್ಗೆ ಯೋಚಿಸಬೇಕು ಎಂದು ಸಲಹೆ ನೀಡಿದರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌. ಬಿಲ್ಲಪ್ಪ, ‘ಓದುವುದರಿಂದ ಕಲಿಯಲಾರದನ್ನು ಬೋಧನೆಯಿಂದ ಕಲಿಯಬಹುದು. ಕಾಲೇಜಿನ ವಾತಾವರಣ ನಮ್ಮ ನಡವಳಿಕೆಯನ್ನು ಸರಿಪಡಿಸುತ್ತದೆ. ವಕೀಲರು ಜಾಗೃತರಾಗಿ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯಬೇಕು’ ಎಂದು ಹೇಳಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಆಡಳಿತ ಮಂಡಳಿ ಅಧ್ಯಕ್ಷ ಡಾ.ಆರ್.ಎಲ್‌. ಉಮಾಶಂಕರ್‌, ಪ್ರಾಚಾರ್ಯ ಪ್ರೊ.ಡಾ.ಬಿ.ಎಸ್‌.ರೆಡ್ಡಿ, ರಾಜನಹಳ್ಳಿ ರಮಾನಂದ, ಇರುವಾಡಿ ಗಿರಿಜಮ್ಮ, ಎಂ.ಜಿ. ಈಶ್ವರಪ್ಪ, ವೈ. ವೃಷಭೇಂದ್ರಪ್ಪ,

ಪ್ರತಿಕ್ರಿಯಿಸಿ (+)