ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎನ್‌ಎಲ್‌ಗೆ ನಷ್ಟವಾಗಲು ಸರ್ಕಾರದ ನೀತಿ ಕಾರಣ

ಎಐಬಿಡಿಪಿಎ 5ನೇ ವೃತ್ತ ಸಮ್ಮೇಳನವನ್ನು ಉದ್ಘಾಟಿಸಿದ ಕೆ.ಜಿ. ಜಯರಾಜ್‌
Last Updated 21 ಆಗಸ್ಟ್ 2019, 10:14 IST
ಅಕ್ಷರ ಗಾತ್ರ

ದಾವಣಗೆರೆ: ಬಿಎಸ್‌ಎನ್‌ಎಲ್‌ ನಷ್ಟದಲ್ಲಿ ನಡೆಯಲು ನೌಕರರಿಗೆ ನೀಡುವ ವೇತನ ಕಾರಣವಲ್ಲ. ಕೇಂದ್ರ ಸರ್ಕಾರದ ನೀತಿ ಕಾರಣ ಎಂದು ಅಖಿಲ ಭಾರತ ಬಿಎಸ್ಎನ್‌ಎಲ್‌ ಡಿಒಟಿ ಪಿಂಚಣಿದಾರರ ಅಸೋಸಿಯೇಶನ್‌ (ಎಐಬಿಡಿಪಿಎ) ಪ್ರಧಾನ ಕಾರ್ಯದರ್ಶಿ ಕೆ.ಜಿ. ಜಯರಾಜ್‌ ಹೇಳಿದರು.

ಎಐಬಿಡಿಪಿಎ 5ನೇ ವೃತ್ತದ ಸಮ್ಮೇಳನವನ್ನು ಅಕ್ಕಮಹಾದೇವಿ ಸಭಾಂಗಣದಲ್ಲಿ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

1995ರಲ್ಲಿ ಭಾರತದಲ್ಲಿ ಮೊಬೈಲ್‌ ಸೇವೆ ಆರಂಭಗೊಂಡರೂ ಬಿಎಸ್‌ಎನ್‌ಎಲ್‌ಗೆ ಈ ಸೇವೆ ಆರಂಭಿಸಲು ಅವಕಾಶ ನೀಡಲಿಲ್ಲ. ಬಿಎಸ್‌ಎನ್‌ಎಲ್‌ಗೆ ಅದನ್ನು ನಿರ್ವಹಣೆ ಮಾಡುವ ಶಕ್ತಿ ಇಲ್ಲದ ಕಾರಣ ನೀಡುತ್ತಿಲ್ಲ ಎಂದು ಪೊಳ್ಳು ಕಾರಣ ನೀಡಿ ಏಳು ವರ್ಷ ಮುಂದಕ್ಕೆ ಒಯ್ದಿದ್ದರು. 2002ರಲ್ಲಿ ಅನುಮತಿ ಸಿಕ್ಕಿತು. ಅಲ್ಲಿಂದ ಮುಂದಕ್ಕೆ 15 ವರ್ಷಗಳ ಕಾಲ ಮೊಬೈಲ್‌ ಸೇವೆಯಲ್ಲಿ ಬಿಎಸ್‌ಎನ್‌ಎಲ್‌ ಮೊದಲ ಸ್ಥಾನ ಪಡೆಯಿತು ಎಂದು ವಿವರಿಸಿದರು.

ಬಿಎಸ್‌ಎನ್‌ಎಲ್‌ ಸಂಸ್ಥೆ ಲಾಭದಲ್ಲಿಯೇ ಮುಂದುವರಿದಿತ್ತು. 2016–17ನೇ ಸಾಲಿನಲ್ಲಿ ₹ 32 ಸಾವಿರ ಕೋಟಿ ಲಾಭ ಪಡೆದಿತ್ತು. ಆದರೆ, 2017–18ರಲ್ಲಿ ಈ ಲಾಭ ₹ 16 ಸಾವಿರ ಕೋಟಿಗೆ ಇಳಿಯಿತು. ಒಂದೇ ವರ್ಷದಲ್ಲಿ ಇಷ್ಟು ಕಡಿಮೆಯಾಗಲು ಮತ್ತೆ ಸರ್ಕಾರವೇ ಕಾರಣವಾಯಿತು. ಎಲ್ಲ ಖಾಸಗಿ ಸಂಸ್ಥೆಗಳಿಗೆ 4 ಜಿ ಸೇವೆ ನೀಡಲು ಅವಕಾಶ ಮಾಡಿಕೊಟ್ಟು, ಬಿಎಸ್‌ಎನ್‌ಎಲ್‌ಗೆ ಈ ಅವಕಾಶ ನೀಡದೇ ಇದ್ದಿದ್ದರಿಂದ ಗ್ರಾಹಕರು ಖಾಸಗಿಯತ್ತ ವಾಲಿದರು ಎಂದು ವಿಶ್ಲೇಷಿಸಿದರು.

ಬಿಎಸ್‌ಎನ್‌ಎಲ್‌, ಡಿಒಟಿ (ಡಿಪಾರ್ಟ್‌ಮೆಂಟ್‌ ಆಫ್‌ ಟೆಲಿಕಾಂ) ಪಿಂಚಣಿದಾರರ ಸಂಘವು ಪಿಂಚಣಿಗಾಗಿ ಹೋರಾಟ ಮಾತ್ರ ಮಾಡುವುದಲ್ಲ, ಬಿಎಸ್‌ಎನ್‌ಎಲ್‌ ಸಂಸ್ಥೆಯ ಆರ್ಥಿಕ ಅಭಿವೃದ್ಧಿಗಾಗಿಯೂ ಹೋರಾಟ ಮಾಡುತ್ತಾ ಬಂದಿದೆ. ಈ ರೀತಿ ಹೋರಾಟ ಮಾಡುವ ನಿವೃತ್ತರ ಏಕೈಕ ಸಂಘ ಎಂದು ಶ್ಲಾಘಿಸಿದರು.

2017ರಿಂದ ಪಿಂಚಣಿದಾರರ ವೇತನ ಪರಿಷ್ಕರಣೆಗೊಂಡಿಲ್ಲ. ಪರಿಷ್ಕರಣೆ ಮಾಡಬೇಕು. ಬಾಕಿ ಪಿಂಚಣಿ ವೇತನಕ್ಕೆ ಶೇ 15 ಬಡ್ಡಿ ನೀಡಬೇಕು. ಬಿಎಸ್‌ಎನ್‌ಎಲ್‌ನಲ್ಲಿ ಕೆಲಸ ಮಾಡುತ್ತಿರುವವರಿಗೆ ಮೂರನೇ ವೇತನ ಆಯೋಗದ ವರದಿಯನ್ನು ಅನ್ವಯ ಮಾಡಬೇಕು ಎಂದು ಒತ್ತಾಯಿಸಿದರು.

ಬಿಎಸ್‌ಎನ್‌ಎಲ್‌ಇಯು ವೃತ್ತ ಕಾರ್ಯದರ್ಶಿ ಸಿ.ಕೆ. ಗುಂಡಣ್ಣ, ‘ಜಿಯೊ ಅವರು ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಸಿಮ್‌ ಒದಗಿಸಿತು. ಇದರಿಂದ ಬಿಎಸ್‌ಎನ್‌ಎಲ್‌ಗೆ ಮಾತ್ರ ನಷ್ಟವಾಗಿದ್ದಲ್ಲ. ಏರ್‌ಟೆಲ್‌, ಐಡಿಯಾ, ವಡಾ ಹೀಗೆ ಎಲ್ಲ ಸಂಸ್ಥೆಗಳು ನಷ್ಟ ಮಾಡಿಕೊಂಡವು. ಅನಿಲ್‌ ಅಂಬಾನಿಯ ಪರಿಚಯಿಸಿದ್ದ ಸಿಮ್‌ ಹೇಳ ಹೆಸರಿಲ್ಲದಾಯಿತು. ಅಷ್ಟೇ ಅಲ್ಲ ಜಿಯೊ ಕೂಡ ನಷ್ಟದಲ್ಲಿಯೇ ನಡೆಯುತ್ತಿದೆ’ ಎಂದು ಹೇಳಿದರು.

ಬಿಎಸ್‌ಎನ್‌ಎಲ್‌ನಲ್ಲಿ 3.5 ಲಕ್ಷ ಜನರು ದುಡಿಯುತ್ತಿರುವಾಗ ಸಂಸ್ಥೆ ನಷ್ಟದಲ್ಲಿ ನಡೆಯಲಿಲ್ಲ. ಈಗ ಸುಮಾರು 1.5 ಲಕ್ಷ ಜನರಷ್ಟೇ ದುಡಿಯುತ್ತಿದ್ದಾರೆ. ಆದರೂ ನಷ್ಟವಾಗಿದೆ. ಬಿಎಸ್‌ಎನ್‌ಎಲ್‌ ಬೊಕ್ಕಸವನ್ನು ಕೇಂದ್ರ ಸರ್ಕಾರ ಮತ್ತು ಐಟಿಎಸ್‌ ಅಧಿಕಾರಿಗಳು ಬರಿದು ಮಾಡಿದ್ದರಿಂದ ಹೀಗಾಗಿದೆ ಎಂದು ಹೇಳಿದರು.

ಈಗ ಸ್ವಯಂ ನಿವೃತ್ತಿ ಪಡೆದು ನೌಕರರು ಮನೆಗೆ ಹೋಗಲಿ ಎಂಬ ಕಾರಣಕ್ಕೆ ಬೇರೆ ಬೇರೆ ಸ್ಕೀಂಗಳನ್ನು ನೌಕರರ ಮುಂದೆ ಸರ್ಕಾರ ಇಡುತ್ತಿದೆ. ನೌಕರರು ಒಗ್ಗಟ್ಟಾಗಿದ್ದರೆ ಬಿಎಸ್‌ಎನ್‌ಎಲ್‌ ಸಂಸ್ಥೆಯನ್ನು ಮಾರಾಟ ಮಾಡಲಾಗುವುದಿಲ್ಲ ಎಂದು ಈ ರೀತಿ ಕುತಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕ ವೃತ್ತ ಅಧ್ಯಕ್ಷ ಆರ್‌.ಜಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಅಖಿಲಭಾರತ ಸಮಿತಿಯ ಜಿ.ಜಿ. ಪಾಟೀಲ್‌, ಎಚ್‌.ಸಿ. ಪ್ರಕಾಶ್‌, ರಾಜ್ಯ ವೃತ್ತದ ಮುದ್ದಯ್ಯ, ವೀರಣ್ಣ, ಪದಕಿ ಶ್ರೀನಿವಾಸ, ದಾವಣಗೆರೆಯ ವಿ. ಮೋಹನ್‌, ಎಂ.ಎ. ದಾಸರ್‌, ಜಿಲ್ಲಾ ಘಟಕದ ಅಧ್ಯಕ್ಷ ವಾಗೀಶ್‌ ಶರ್ಮ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT