ಅಪಘಾತ ತಡೆಗೆ ಬಂತು ಅತ್ಯಾಧುನಿಕ ರಿಫ್ಲೆಕ್ಟರ್‌

ಬುಧವಾರ, ಏಪ್ರಿಲ್ 24, 2019
29 °C
ಸ್ಮಾರ್ಟ್‌ ಸಿಟಿ ಯೋಜನೆಯಡಿ ರಸ್ತೆ ಸರುಕ್ಷತೆಗೆ ಕ್ರಮ

ಅಪಘಾತ ತಡೆಗೆ ಬಂತು ಅತ್ಯಾಧುನಿಕ ರಿಫ್ಲೆಕ್ಟರ್‌

Published:
Updated:
Prajavani

ದಾವಣಗೆರೆ: ನಗರದ ಹಳೆ ಪಿ.ಬಿ. ರಸ್ತೆಯಲ್ಲಿ ವಾಹನ ಅಪಘಾತಗಳನ್ನು ತಪ್ಪಿಸಲು ಡಿವೈಡರ್‌ಗಳ ಎರಡೂ ಬದಿಯಲ್ಲಿ ಅತ್ಯಾಧುನಿಕ ರಿಫ್ಲೆಕ್ಟರ್‌ ‘ಫ್ಲೆಕ್ಸಿಬಲ್‌ ಮೀಡಿಯನ್‌ ಮಾರ್ಕರ್‌’ ಅಳವಡಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ರಾತ್ರಿಯ ವೇಳೆ ವಾಹನಗಳು ವೇಗವಾಗಿ ಹೋಗುತ್ತಿರುವಾಗ ಡಿವೈಡರ್‌ನ ಅಂಚು ಹಾಗೂ ರಸ್ತೆ ತಿರುವು ಚಾಲಕರ ಗಮನಕ್ಕೆ ಬಾರದೇ ಆಗಾಗ ಅಪಘಾತಗಳು ಸಂಭವಿಸುತ್ತಿದ್ದವು. ಇದೀಗ ಹಳೆ ಪಿ.ಬಿ. ರಸ್ತೆಯಲ್ಲಿ ಡಿಸಿಎಂ ರೈಲ್ವೆ ಗೇಟ್‌ನಿಂದ ವಿನೋಬನಗರದವರೆಗೂ ಪಿ.ಬಿ. ರಸ್ತೆಯಲ್ಲಿ ಫ್ಲೆಕ್ಸಿಬಲ್‌ ಮೀಡಿಯನ್‌ ಮಾರ್ಕರ್‌ ಅಳವಡಿಸಲಾಗಿದೆ.

ರಸ್ತೆ ಸುರಕ್ಷತೆ ಸಲುವಾಗಿ ‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ರಾತ್ರಿ ವೇಳೆ ಈ ಮಾರ್ಗದಲ್ಲಿ ಸಾಗುವ ವಾಹನ ಚಾಲಕರಿಗೆ ರಿಫ್ಲೆಕ್ಟರ್‌ನಿಂದ ಅನುಕೂಲವಾಗಲಿದೆ.

‘ನಗರದಲ್ಲಿ ರಾತ್ರಿ ವೇಳೆ ಎದುರಿನಿಂದ ಬರುವ ವಾಹನಗಳ ಹೈಬೀಮ್‌ನಿಂದಾಗಿ ಸಣ್ಣ–ಪುಟ್ಟ ವಾಹನಗಳ ಚಾಲಕರಿಗೆ ಮುಂದಕ್ಕೆ ಸಾಗಲು ತೊಂದರೆ ಆಗುತ್ತಿತ್ತು. ಅಪಘಾತ ಸಂಭವಿಸುತ್ತಿದ್ದವು. ಹೀಗಾಗಿ ಅಂದಾಜು ₹ 4.5 ಕೋಟಿ ವೆಚ್ಚದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ‘ರಸ್ತೆ ಸುರಕ್ಷತೆ ಹಾಗೂ ಚಿಹ್ನೆ’ ಶೀರ್ಷಿಕೆಯಡಿ ಫ್ಲೆಕ್ಸಿಬಲ್‌ ಮೀಡಿಯನ್‌ ಮಾರ್ಕರ್‌, ಥರ್ಮೊ ಪ್ಲಾಸ್ಟಿಕ್‌ ಪೇಂಟಿಂಗ್‌, ಸೈನ್‌ ಬೋರ್ಡ್‌ಗಳನ್ನು ಅಳವಡಿಸಲಾಗುತ್ತಿದೆ’ ಎಂದು ‘ಸ್ಮಾರ್ಟ್‌ ಸಿಟಿ’ಯ ಮುಖ್ಯ ಎಂಜಿನಿಯರ್‌ ಎಂ. ಸತೀಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಹಳೆ ಪಿ.ಬಿ. ರಸ್ತೆಯಲ್ಲಿ ಡಿವೈಡರ್‌ಗೆ ಹಚ್ಚಿದ್ದ ಬಣ್ಣ ಮಾಸಿ ಹೋಗಿದ್ದವು. ಮೊದಲ ಹಂತದಲ್ಲಿ ಫ್ಲೆಕ್ಸಿಬಲ್‌ ಮೀಡಿಯನ್‌ ಮಾರ್ಕರ್‌ ಅನ್ನು ಈ ರಸ್ತೆಯಲ್ಲಿ ಅಳವಡಿಸುತ್ತಿದ್ದೇವೆ. ಇವು 10 ವರ್ಷಗಳ ಕಾಲ ಬಾಳಿಕೆಗೆ ಬರುತ್ತವೆ. ಎರಡು ವರ್ಷ ವಾರಂಟಿಯೂ ಇದೆ. ಪೊಲೀಸ್ ಇಲಾಖೆಯ ಮಾರ್ಗದರ್ಶನದಲ್ಲಿ ನಗರದ ಉಳಿದ ರಸ್ತೆಗಳಿಗೂ ರಿಫ್ಲೆಕ್ಟರ್‌, ಸೈನ್‌ ಬೋರ್ಡ್‌, ಮಾಹಿತಿ ಫಲಕ ಸೇರಿ ಸುಮಾರು ಎಂಟು ಬಗೆಯ ರಸ್ತೆ ಸುರಕ್ಷತಾ ಪರಿಕರಗಳನ್ನು ಅಳವಡಿಸಲಾಗುವುದು’ ಎಂದು ತಿಳಿಸಿದರು.

‘ಎರಡನೇ ಹಂತದಲ್ಲಿ ಕೈಗೊಳ್ಳುವ ರಸ್ತೆ ಸುರಕ್ಷತಾ ಕಾಮಗಾರಿಗಳಿಗೆ ಐದು ವರ್ಷಗಳ ನಿರ್ವಹಣಾ ಜವಾಬ್ದಾರಿಯನ್ನೂ ಗುತ್ತಿಗೆದಾರರಿಗೆ ನೀಡಲು ಉದ್ದೇಶಿಸಲಾಗಿದೆ. ಪ್ರತಿ ತಿಂಗಳು ರಿಫ್ಲೆಕ್ಟರ್‌ಗಳನ್ನು ಒರೆಸಿ ಸ್ವಚ್ಛಗೊಳಿಸಬೇಕು. ಹಾಳಾದರೆ ಗುತ್ತಿಗೆದಾರರೇ ಅದನ್ನು ಬದಲಾಯಿಸಬೇಕು ಎಂಬ ಷರತ್ತು ವಿಧಿಸಲಾಗುವುದು’ ಎಂದು ಹೇಳಿದರು.

‘ರಸ್ತೆಯಲ್ಲಿ ಫ್ಲೆಕ್ಸಿಬಲ್‌ ಮೀಡಿಯನ್‌ ಮಾರ್ಕರ್‌ ಅಳವಡಿಸಿರುವುದರಿಂದ ಅಪಘಾತಗಳ ಪ್ರಮಾಣ ತಗ್ಗಲಿದೆ. ನಗರದ ಎಲ್ಲೆಲ್ಲಿ ಯಾವ ರೀತಿಯ ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬ ಸಲಹೆಯನ್ನು ಸ್ಮಾರ್ಟ್‌ ಸಿಟಿ ಅಧಿಕಾರಿಗಳಿಗೆ ನೀಡಲಾಗಿದೆ. ಸಾರ್ವಜನಿಕರು ಫ್ಲೆಕ್ಸಿಬಲ್‌ ಮೀಡಿಯನ್‌ ಮಾರ್ಕರ್‌ಗಳನ್ನು ಕಿತ್ತುಕೊಂಡು ಹೋಗಬಾರದು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !