ಬುಧವಾರ, ಅಕ್ಟೋಬರ್ 16, 2019
21 °C
ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ರಂಭಾಪುರಿ ಸ್ವಾಮೀಜಿ

ಉತ್ತಮ ಜೀವನಕ್ಕೆ ಧರ್ಮ, ಸಂಸ್ಕಾರ ಅಗತ್ಯ

Published:
Updated:
Prajavani

ದಾವಣಗೆರೆ: ಪರಿಶುದ್ಧ ಪವಿತ್ರ ಜೀವನ ರೂಪುಗೊಳ್ಳಲು ಧರ್ಮಪ್ರಜ್ಞೆ, ಸಂಸ್ಕಾರ ಅವಶ್ಯಕ. ಸಮರ ಜೀವನವನ್ನು ಅಮರ ಜೀವನದತ್ತ ಕೊಂಡೊಯ್ಯುವುದೇ ಧರ್ಮದ ಗುರಿ. ಸತ್ಯ ಶುದ್ಧ ಸನ್ಮಾರ್ಗದಲ್ಲಿ ನಡೆದು ಬದುಕನ್ನು ಕಟ್ಟಿಕೊಳ್ಳುವುದೇ ಎಲ್ಲರ ಗುರಿ ಆಗಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಹೈಸ್ಕೂಲ್‌ ಮೈದಾನದಲ್ಲಿ ಜರುಗುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಶನಿವಾರ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆಯಿಂದ ಮುದ್ರಣಗೊಂಡ 2020ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಮಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಮಾತನಾಡಿ, ‘ಧರ್ಮ ಅಂದರೆ ಪೂಜೆ ಅಲ್ಲ. ಅದನ್ನು ಮಿಗಿಲಾದುದು ಎಂದು ತೋರಿಸಿದ ಸಂಸ್ಕೃತಿ ಭಾರತೀಯರದ್ದು. ಕೃಷಿ ಕೆಲಸ ಮುಗಿದ ಬಳಿಕ ಸ್ವಲ್ಪ ಸಮಯ ದೇವರ ನಾಮಸ್ಮರಣೆಯಲ್ಲಿ ಇರಬೇಕು ಅನ್ನುವ ಕಾರಣಕ್ಕೆ ದಸರಾ ಆರಂಭಗೊಂಡಿತು’ ಎಂದರು.

ರಾವಣನನ್ನು ಕೊಲ್ಲುವುದು ಅಷ್ಟು ಸುಲಭವಾಗಿರಲಿಲ್ಲ. ಯಾಕೆಂದರೆ ಆತ ಶಿವಭಕ್ತ. ಅದಕ್ಕಾಗಿ 9 ದಿನಗಳ ಕಾಲ ಉಪವಾಸ ಇದ್ದು, ದೇವರಿಯನ್ನು ಆರಾಧಿಸಿ 10ನೇ ದಿನ ರಾಮ ವಧೆ ಮಾಡಿದ್ದು. ಅದಕ್ಕಾಗಿ ಹಲವೆಡೆ ರಾಮಲೀಲಾ ಆಚರಿಸುತ್ತಾರೆ ಎಂದು ವಿವರಿಸಿದರು.

ದುಡ್ಡಿಲ್ಲದಿದ್ದರೂ ನೆಮ್ಮದಿಯಿಂದ ಇರುವ ಸಂಸ್ಕೃತಿ ನಮ್ಮದು. ಹಣವಿದ್ದರೂ ನೆಮ್ಮದಿ ಇಲ್ಲದ ಸಮಾಜ ವಿದೇಶದ್ದು. ಅವರನ್ನು ನೋಡಿ ನಮ್ಮಲ್ಲೂ ವೃದ್ಧಾಶ್ರಮಗಳು ಜಾಸ್ತಿಯಾಗಿವೆ ಎಂದು ವಿಷಾದಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಜೆಡಿಯು ಮುಖಂಡ ಮಹಿಮ ಪಟೇಲ್‌, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸಹಕಾರಿ ಧುರೀಣ ಎಸ್. ಎ. ಮುರುಗೇಶ್ ಆರಾಧ್ಯ, ದೇವರಮನೆ ಶಿವಕುಮಾರ್‌, ಬಂಕಾಪುರ ರೇವಣಸಿದ್ಧ ಸ್ವಾಮೀಜಿ, ಕಡಕೋಳ ರುದ್ರಮುನಿ ಸ್ವಾಮೀಜಿ, ಪಾಳಾ ಗುರುಮೂರ್ತಿ ಸ್ವಾಮೀಜಿ, ಬೆಂಗಳೂರಿನ ಶಿವಾನಂದ ಸ್ವಾಮೀಜಿ ಇದ್ದರು.

ಶಿವಮೊಗ್ಗದ ಬಿ. ಎಸ್. ನಟೇಶ್ ಅವರು ‘ಎಲ್ಲರೊಳಗೊಂದಾಗು’ ಎಂಬ ವಿಷಯದ ವಿಶೇಷ ಉಪನ್ಯಾಸವನ್ನಿತ್ತರು. ಕೊಟ್ಟೂರು ಚಾನುಕೋಟಿಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿ ತೋರಣ ಕಟ್ಟಿದರು.. ಗದಗ ರುದ್ರಬಳಗದ ಮಹಿಳಾ ಸದಸ್ಯರು ಭಕ್ತಿಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ಎಮ್ಮಿಗನೂರಿನ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಜಿ.ಜಿ. ರಕ್ಷಿತಾ ಅವರಿಂದ ಭರತನಾಟ್ಯ ಜರುಗಿತು. ಕೆ.ಎಂ. ಸುರೇಶ್ ಸ್ವಾಗತಿಸಿದರು. ಗದುಗಿನ ಶಾರದಾ ಶಿವಾನಂದಯ್ಯ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

‘ಯಡಿಯೂರಪ್ಪಗೆ ವಿಭೂತಿ ಹಚ್ಚಲು ಸಲಹೆ ನೀಡಿ’

ರಾಜಕೀಯವನ್ನು ಬದಲಾಯಿಸಲು, ಸುಧಾರಿಸಲು ಧರ್ಮಗುರುಗಳು ಮುಂದಾಗಬೇಕು. ರಾಜಕಾರಣಿಗಳು ಸರಿಯಾದರೆ ಅಧಿಕಾರಿಗಳು ಸರಿಯಾಗುವರು. ಸಮಾಜ ಸರಿಯಾಗುವುದು. ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮೊದಲು ಕುಂಕುಮ ಬಿಟ್ಟು ವಿಭೂತಿ ಹಚ್ಚಲು ಸಲಹೆ ನೀಡಬೇಕು ಎಂದು ಕಾಂಗ್ರೆಸ್‌ ಮುಖಂಡ ಎಂ.ಟಿ. ಸುಭಾಸ್‌ಚಂದ್ರ ಮನವಿ ಮಾಡಿದರು.

‘ಧರ್ಮಗಳ ವಿಷಯವನ್ನು ಆಯ ಧರ್ಮದವರು ನೋಡಿಕೊಳ್ಳುತ್ತಾರೆ. ರಾಜಕೀಯದಲ್ಲಿರುವ ನಮಗೆ ಬೇಡ ಎಂದು ಸಿದ್ದರಾಮಯ್ಯಗೆ ಹೇಳಿದ್ದೆ. ಅವರು ಕೇಳಿದ್ದರೆ ಇವತ್ತು ಮನೆಯಲ್ಲಿ ಕೂರುವ ಬದಲು ಅಧಿಕಾರದಲ್ಲಿರುತ್ತಿದ್ದರು’ ಎಂದರು.

ಗೌಡರು ಜೆಡಿಎಸ್‌ಗೆ, ವೀರಶೈವ– ಲಿಂಗಾಯತರು ಬಿಜೆಪಿಗೆ, ಅಲ್ಪಸಂಖ್ಯಾತರು ಇತರರು ಕಾಂಗ್ರೆಸ್‌ಗೆ ಮತ ಹಾಕುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಇವತ್ತು ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಿದ್ದರೆ ಜಾತಿ ಯಾವುದು? ಹಣ ಎಷ್ಟಿದೆ? ಎಂಬುದನ್ನು ಕೇಳುತ್ತಾರೆ. ಜಾತಿ ಮತ್ತು ಹಣವೇ ಮುಖ್ಯವಾಗಿ ಬಿಟ್ಟಿದೆ. ಇದು ಬದಲಾಗಬೇಕು ಎಂದರು.

Post Comments (+)