ಮಂಗಳವಾರ, ಮೇ 17, 2022
26 °C
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಸಮುದಾಯಗಳ ಸಹಬಾಳ್ವೆಯಿಂದ ಸ್ವರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ಸರ್ವ ಸಮುದಾಯಗಳು ಸಾಮರಸ್ಯದ ಮಹತ್ವ ಅರಿತು ಸಹಬಾಳ್ವೆ ನಡೆಸಿದಲ್ಲಿ ಪ್ರತಿಯೊಂದು ಗ್ರಾಮ ಶಾಂತಿ, ನೆಮ್ಮದಿಯ ಸ್ವರ್ಗವಾಗಿ ಪರಿವರ್ತನೆಯಾಗುತ್ತವೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಸವನಕೋಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಹೊಸೂರಮ್ಮ ಹಾಗೂ ಹುಲಗೆಮ್ಮ ದೇವಾಲಯ ಲೋಕಾರ್ಪಣೆ ಹಾಗೂ ಮೂರ್ತಿಗಳ ಪ್ರತಿಷ್ಠಾಪನೆ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಕಾಲಘಟ್ಟದಲ್ಲಿ ಮಾನವ ಸಂಬಂಧಗಳು ಮತ್ತಷ್ಟು ಬಲಗೊಳ್ಳಬೇಕಿದೆ. ಸರ್ವ ಸಮುದಾಯದ ಸಹಬಾಳ್ವೆಯ ಮಹತ್ವ ಅರಿವಾದಾಗ ಅದು ಸ್ವರ್ಗ ಸಮಾನವಾದ ಶ್ರೇಷ್ಠ ಸಮಾಜ ಎನಿಸಿಕೊಳ್ಳುತ್ತದೆ. ಸಾಮರಸ್ಯದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ‘ಶ್ರಮಜೀವಿಗಳಾದ ಭೋವಿ ಸಮಾಜದ ಅಭಿವೃದ್ಧಿಗೆ ಕೈಜೋಡಿಸಲಾಗುವುದು. ಭೋವಿ ಗುರುಗಳ ಆಶಯದಂತೆ ಈ ಹಿಂದೆ ಜಗಳೂರಿನ ಭೋವಿ ಸಮುದಾಯಕ್ಕೆ ₹25 ಲಕ್ಷ ಹಾಗೂ ಚಿತ್ರದುರ್ಗ ಹಾಗೂ ದಾವಣಗೆರೆ ಹಾಸ್ಟೆಲ್ ಕಟ್ಟಡಕ್ಕೆ ತಲಾ ₹ 10 ಲಕ್ಷ ಅನುದಾನ ನೀಡಲಾಗಿದೆ’ ಎಂದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್, ‘ನಾನು ಈ ಹಿಂದೆ ಶಾಸಕನಾಗಿದ್ದಾಗ ಭೋವಿ ಸಮಾಜಕ್ಕೆ ಪ್ರಾತಿನಿಧ್ಯ ನೀಡಿದ್ದೇನೆ. ಮುಂದೆಯೂ ಸಮಾಜಕ್ಕೆ ಒತ್ತು ನೀಡುತ್ತೇನೆ’ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ‘ಭೋವಿ ಜನರು ಬಂಡೆ ಒಡೆದು ಜೀವನ ಸಾಗಿಸುತ್ತಾರೆ ಹೊರತು ಯಾರ ತಲೆ ಒಡೆದು ಬದುಕುವುದಿಲ್ಲ. ಭೋವಿ ಶ್ರೀ ಅವರ ಪರಿಶ್ರಮದಿಂದ ರಾಜ್ಯದಲ್ಲಿ ಅಸಂಘಟಿತವಾಗಿದ್ದ ಭೋವಿ ಸಮಾಜಕ್ಕೆ ಇಂದು ಮಾನ್ಯತೆ ಸಿಕ್ಕಿದೆ. ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಶ್ರೀ ಅವರು ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.

ಮಡಿವಾಳದ ಗುರುಪೀಠದ ಡಾ.ಬಸವ ಮಾಚಿದೇವ ಸ್ವಾಮೀಜಿ, ಹಡಪದ ಗುರುಪೀಠದ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ, ಕುಂಬಾರ ಗುರುಪೀಠದ ಕುಂಬಾರ ಗುಂಡಯ್ಯ ಸ್ವಾಮೀಜಿ, ಹಾವೇರಿಯ ಶಿವಯೋಗಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಮುಖಂಡರಾದ ಕೆ.ಪಿ. ಪಾಲಯ್ಯ, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಜಿಲ್ಲಾ ಭೋವಿ ಸಂಘದ ಜಿಲ್ಲಾ ಅಧ್ಯಕ್ಷ ಜಯಪ್ಪ, ಭೋವಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ದ್ಯಾಮಣ್ಣ , ತಿಮ್ಮರಾಜ್, ಗೋಪಾಲ್, ದೇವರಾಜ್, ರವಿ, ಗಿರೀಶ್ ಒಡೆಯರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.