ಧಾರ್ಮಿಕ ಪ್ರಭುತ್ವ ಆತಂಕಕಾರಿ: ಹನೀಫ್‌

7
‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ’ ಪುಸ್ತಕ ಕುರಿತ ಸಂವಾದ

ಧಾರ್ಮಿಕ ಪ್ರಭುತ್ವ ಆತಂಕಕಾರಿ: ಹನೀಫ್‌

Published:
Updated:
Deccan Herald

ದಾವಣಗೆರೆ: ಇಂದು ರಾಜಕೀಯ ಪ್ರಭುತ್ವಕ್ಕಿಂತ ಧಾರ್ಮಿಕ ಪ್ರಭುತ್ವದ ವಿಕೃತ ಸಮಾಜದಲ್ಲಿ ಹೆಚ್ಚು ಭಯ ಹುಟ್ಟಿಸುತ್ತಿದೆ ಎಂದು ‘ಸುಧಾ’ ವಾರಪತ್ರಿಕೆಯ ಸಹಾಯಕ ಸಂಪಾದಕ ಬಿ.ಎಂ. ಹನೀಫ್‌ ಹೇಳಿದರು.

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ ಶನಿವಾರ ಹಮ್ಮಿಕೊಂಡಿದ್ದ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ’ ಪುಸ್ತಕದ ಸಂವಾದದಲ್ಲಿ ಅವರು ಮಾತನಾಡಿದರು.

ಧಾರ್ಮಿಕ ಕೇಂದ್ರಗಳಲ್ಲಿ ಕೋಟ್ಯಂತರ ರೂಪಾಯಿ ಕೊಳೆಯುತ್ತಿದೆ. ಈ ಹಣ ಸಮಾಜದ ಒಳಿತಿಗಾಗಿ ಬಳಕೆಯಾಗುವುದರ ಬದಲು ಸೌಹಾರ್ದ ಪರಂಪರೆಯನ್ನು ವಿರೋಧಿಸಲು ಬಳಕೆಯಾಗುತ್ತಿದೆ. ದೇಶದ ಇತಿಹಾಸವನ್ನು ವಿಕೃತಗೊಳಿಸಲಾಗುತ್ತಿದೆ ಎಂದು ಅಭಿಪ್ರಾಯಪ್ಟಟರು.

ಇಂದು ಕೈಗಾರಿಕಾ ಬಂಡವಾಳಕ್ಕಿಂತ ಧಾರ್ಮಿಕ ಬಂಡವಾಳ ಹೆಚ್ಚು ಅಪಾಯಕಾರಿಯಾಗಿದೆ. ಈ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕು. ದೇಶಕ್ಕೆ ಬಹುತ್ವದ ಪರಿಕಲ್ಪನೆ ಅಗತ್ಯವಾಗಿದೆ. ಏಕರೂಪದ ಕಾನೂನು ಜಾರಿಗೊಳಿಸಬೇಕು ಎಂಬ ಬೇಡಿಕೆಯನ್ನು ವಿರೋಧಿಸಿ ಬಹುತ್ವವನ್ನು ರಕ್ಷಿಸಬೇಕು ಎಂದು ಪ್ರತಿಪಾದಿಸಿದರು. 

ಬಸವಣ್ಣ, ಸಂತ ಶಿಶುನಾಳ ಶರೀಫ್, ರೆವರೆಂಡ್ ಫರ್ಡಿನ್ಯಾಂಡ್ ಕಿಟೆಲ್‌, ಕುವೆಂಪು ಹಾಗೂ ಡಾ. ರಾಜ್‌ಕುಮಾರ್‌ ಬಹುತ್ವವನ್ನು ಪ್ರತಿನಿಧಿಸಿದ ರಾಜ್ಯದ ಐದು ಮುಂಚೂಣಿಯ ಮಹನಿಯರು ಎಂದು ಹೇಳಿದರು.

ಲೇಖಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ‘ಸಾಂಸ್ಕೃತಿಕ ಬಂಡವಾಳ ದಿವಾಳಿತನದಿಂದ ದೇಶ ಬಳಲುತ್ತಿದೆ. ಧಾರ್ಮಿಕ, ಕೈಗಾರಿಕಾ ಬಂಡವಾಳಕ್ಕಿಂತ ಸಾಂಸ್ಕೃತಿಕ ಬಂಡವಾಳ ಮುಖ್ಯವಾಗಿದೆ’ ಎಂದು ಹನೀಫ್‌ ಪ್ರಸ್ತಾಪಿಸಿದ ವಿಷಯದ ಹರವನ್ನು ಇನ್ನಷ್ಟು ವಿಸ್ತರಿಸಿದರು.

‘ಬಸವಣ್ಣ ಬಂದು ಹೋದ ಬಳಿಕವೂ ಜಾತೀಯತೆ ಇರುವುದು ದುರ್ದೈವದ ಸಂಗತಿ. ಹೀಗಾಗಿ ಇಂದು ಮಕ್ಕಳ ಮನಸ್ಸನ್ನು ಸರಿಯಾಗಿ ರೂಪಿಸಬೇಕಾಗಿದೆ. ಜಾತಿ ಪದ್ಧತಿ, ಸಮಾನತೆ ಬಗ್ಗೆ ಶಾಲಾ– ಕಾಲೇಜು ಹಂತದಲ್ಲೇ ಮಕ್ಕಳಿಗೆ ತಿಳಿ ಹೇಳಬೇಕು. ನಮ್ಮ ಶಿಕ್ಷಣ ನೀತಿ, ಸಾಂಸ್ಕೃತಿಕ ನೀತಿಯನ್ನು ಪರಿಷ್ಕರಿಸಬೇಕಾಗಿದೆ’ ಎಂದು ಪ್ರತಿಪಾದಿಸಿದರು.

ವಿವಾಹಿತ ಪುರುಷ ಪತ್ನಿಯ ಜೊತೆ ಲೈಂಗಿಕತೆ ಹೊಂದುವುದು ಅಪರಾಧವಲ್ಲ ಎಂಬ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಕುರಿತು ವೀರಭದ್ರಪ್ಪ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೂಡ್ನಾಕೂಡು ಚಿನ್ನಸ್ವಾಮಿ, ‘ವ್ಯಕ್ತಿಯ ಮಾನಸಿಕತೆ, ಸಮಸ್ಯೆ ಉಂಟಾಗುವುದನ್ನು ಗಮನದಲ್ಲಿಟ್ಟುಕೊಂಡು ನ್ಯಾಯಿಕ ದೃಷ್ಟಿಕೋನದಿಂದ ಆ ರೀತಿ ತೀರ್ಪು ನೀಡಿರಬಹುದು. ಅದನ್ನು ಸಮಾಜ ಯಥಾವತ್ತಾಗಿ ಸ್ವೀಕರಿಸಲೇಬೇಕು ಎಂದೇನಿಲ್ಲ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಾಣೆಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಸ್ವಾಮೀಜಿ, ‘ಈ ಕೃತಿಯಲ್ಲಿನ ಪ್ರತಿ ಲೇಖನವೂ ಮನಸ್ಸಿನ ಚಿಂತನೆಗೆ ಹಚ್ಚಿಸುತ್ತಿದೆ. ಮೂಡ್ನಾಕೂಡು ಚಿನ್ನಸ್ವಾಮಿ ಅವರು ಸಕಾರಾತ್ಮಕವಾಗಿಯೇ ಸಮಾಜದ ಹುಳುಕುಗಳನ್ನು ಬಿಚ್ಚಿಟ್ಟಿದ್ದಾರೆ. ಮತ್ತೆ ಮತ್ತೆ ಓದಿಸುವ ಗುಣವಿದೆ’ ಎಂದು ಹೇಳಿದರು.‌

‘ಇಂದು ಯುವ ಪೀಳಿಗೆ ದುಡ್ಡಿನ ಕಡೆಗೆ ಓಡುತ್ತಿದೆ. ಸಾಹಿತ್ಯ, ಸಂಸ್ಕೃತಿ ಬಗ್ಗೆ ಮಕ್ಕಳಲ್ಲಿ ಹಿರಿಯರು ಅಭಿರುಚಿ ಬೆಳೆಸಬೇಕು. ದುರಭ್ಯಾಸಗಳಿಗೆ ಹಣ ದುಂದುವೆಚ್ಚ ಮಾಡುವುದರ ಬದಲು ಪ್ರತಿ ತಿಂಗಳು ಪುಸ್ತಕ ಖರೀದಿಸಲು ನಿಮ್ಮ ಆದಾಯದಲ್ಲಿ ಕನಿಷ್ಠ ₹ 100 ಆದರೂ ಮೀಸಲಿಡಬೇಕು’ ಎಂದು ಸಲಹೆ ನೀಡಿದರು.‌

ಕೃತಿಯ ಪರಿಚಯಿಸಿದ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ‘ದೇಶದಲ್ಲಿ ವಿವಿಧತೆ ಇದೆ. ಆದರೆ, ಇಂದು ಏಕತಾನತೆ ಹೆಚ್ಚಾಗುತ್ತಿದೆ. ಅಸಹಿಷ್ಣುತೆ, ಅಸ್ಪೃಶ್ಯತೆ ಸೇರಿ ಹಲವು ವಿಚಾರಗಳ ಬಗ್ಗೆ ಲೇಖಕರು ಧ್ವನಿ ಎತ್ತಿದ್ದಾರೆ’ ಎಂದು ಹೇಳಿದರು. ‌

ಪ್ರಾಸ್ತಾವಿಕವಾಗಿ ಮಾತನಾಡಿದ ಚಿಂತಕ ಎಂ.ಟಿ. ಸುಭಾಷ್‌ಚಂದ್ರ, ‘ಸುಧಾ ವಾರಪತ್ರಿಕೆಯಲ್ಲಿ ಎರಡು ವರ್ಷಗಳ ಕಾಲ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಬರಹಗಳು ಪ್ರಕಟಗೊಂಡಿದ್ದವು. ಆ ಬರಹಗಳನ್ನೇ ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ ಕೃತಿಯನ್ನಾಗಿ ಪ್ರಕಟಿಸಲಾಗಿದೆ’ ಎಂದು ಹೇಳಿದರು. ಟ್ರಸ್ಟ್‌ನ ಒಡನಾಡಿಗಳು ಪ್ರಾರ್ಥಿಸಿದರು.

ರಾಕ್ಷಸಿ ಪ್ರವೃತ್ತಿ: ಕಳವಳ
‘ಇಂದಿಗೂ ರಾಕ್ಷಸೀಯ ಪ್ರವೃತ್ತಿಯ ಜನ ನಮ್ಮ ನಡುವೆಯೇ ಗೌರವಾನ್ವಿತ ಸ್ಥಿತಿಯಲ್ಲಿ ಬೇರೆ ಬೇರೆ ವೇಷಗಳಲ್ಲಿದ್ದಾರೆ. ಮಾಲೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಸುದ್ದಿ ಓದಿದ ಬಳಿಕ ನನ್ನ ಮನ ಕಲುಕಿದ್ದರಿಂದ ಮೂರು ದಿನಗಳ ಸರಿಯಾಗಿ ಊಟವನ್ನೂ ಮಾಡಲು ಆಗಲಿಲ್ಲ’ ಎಂದು ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಕಳವಳ ವ್ಯಕ್ತಪಡಿಸಿದರು.

‘ಇಂದು ಸಂವೇದನಾಶೀಲತೆ ಇರುವ ಜನಸಾಮಾನ್ಯರ ಮನವೂ ಕಲಕುವಂತಹ ವಾತಾವರಣ ಇದೆ. ಧರ್ಮ, ಸಂಸ್ಕೃತಿ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಕೆಟ್ಟ ಮನಸ್ಥಿತಿಯವರಿಂದ ಜನರ ಮನ ಕಲಕುತ್ತಿವೆ. ಬುದ್ಧನ ತತ್ವದಲ್ಲಿ ರಾಕ್ಷಸಿ ಪ್ರವೃತ್ತಿ ಇಲ್ಲ. ಬುದ್ಧನ ತತ್ವ ಜಗತ್ತಿನಲ್ಲಿ ಪಸರಿಸಬೇಕಾಗಿದೆ’ ಎಂದು ಹೇಳಿದರು.

‘ಸುಧಾ’ ವಾರಪತ್ರಿಕೆಯ ಬಣ್ಣನೆ
‘ಇಂದು ಜನರ ಮನಸ್ಸನ್ನು ಅರಳಿಸುವುದಕ್ಕಿಂತ ಕೆರಳಿಸುವಂತಹ ಬರಹಗಳೇ ಹೆಚ್ಚು ಬರುತ್ತಿವೆ. ಎಷ್ಟೋ ಪತ್ರಿಕೆಗಳಲ್ಲಿ ಬಂಡವಾಳ ಹೆಚ್ಚಿಸುವಂತಹ ಬರಹಗಳೇ ಇರುತ್ತವೆ. ಅಂಥ ಪತ್ರಿಕೆಗಳನ್ನು ಕೊಂಡುಕೊಳ್ಳುವುದೇ ಬೇಡ ಎನಿಸುತ್ತದೆ. ಇದರ ನಡುವೆಯೂ ಸುಧಾ ವಾರಪತ್ರಿಕೆಯ ಹನೀಫ್‌ ಅವರು ಮೂಡ್ನಾಕೂಡು ಚಿನ್ನಸ್ವಾಮಿಯಂತಹ ಯೋಗ್ಯ ವ್ಯಕ್ತಿಯನ್ನು ಗುರುತಿಸಿದ್ದಾರೆ. ಅವರಿಂದ ಇಂಥ ಒಳ್ಳೆಯ ಬರಹಗಳನ್ನು ಬರೆಸಿ ಪ್ರಕಟಿಸುವ ಮೂಲಕ ‘ಸುಧಾ’ ಪತ್ರಿಕೆ ಓದುಗರ ವಿಶ್ವಾಸ ಗಳಿಸಿದೆ’ ಎಂದು ಸ್ವಾಮೀಜಿ ಬಣ್ಣಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !