ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಿತ ಜಾಗದಲ್ಲಿ ಮನೆ ನಿರ್ಮಾಣ ನಿಲ್ಲಿಸಲಿ: ಆಗ್ರಹ

ಶಾಸಕ ರೇಣುಕಾಚಾರ್ಯ ಅವರಿಗೆ ಉಪನ್ಯಾಸಕಿ ವನಜಾಕ್ಷಮ್ಮ ವೀರೇಶ್ ಆಗ್ರಹ
Last Updated 9 ಏಪ್ರಿಲ್ 2022, 4:25 IST
ಅಕ್ಷರ ಗಾತ್ರ

ಹೊನ್ನಾಳಿ: ‘ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ನಗರದ ಗಡಿಚೌಡಮ್ಮ ದೇವಸ್ಥಾನದ ಬಳಿ (ಈ ಹಿಂದೆ ಅದು ಎಚ್. ಕಡದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮಠ ಗ್ರಾಮಕ್ಕೆ ಸೇರಿತ್ತು) ಮನೆ ನಿರ್ಮಿಸುತ್ತಿರುವ ಜಾಗದ ವಿವಾದವು ಕೋರ್ಟ್‌ನಲ್ಲಿದೆ. ಅದು ಇತ್ಯರ್ಥ ಆಗುವವರೆಗೂ ಮನೆ ನಿರ್ಮಾಣ ಕಾಮಗಾರಿ ನಿಲ್ಲಿಸಬೇಕು’ ಎಂದು ಸಾಸ್ವೆಹಳ್ಳಿ ಎಡಿವಿಎಸ್ ಕಾಲೇಜು ಉಪನ್ಯಾಸಕಿ ವನಜಾಕ್ಷಮ್ಮ ವೀರೇಶ್ ಆಗ್ರಹಿಸಿದ್ದಾರೆ.

‘ನನ್ನ ತಂದೆ ಅಡಕವ್ವಾರ ನಿಂಗಪ್ಪ ಅವರಿಗೆ ಮೂವರು ಪತ್ನಿಯರಿದ್ದರು. ಆಸ್ತಿ ವಿಚಾರವಾಗಿ 1995ರಲ್ಲಿ ತಂದೆಯ ವಿರುದ್ಧ ಮೊದಲ ಪತ್ನಿ, ಎರಡನೇ ಪತ್ನಿಯಾಗಿರುವ ನಮ್ಮ ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳು ದೂರು ದಾಖಲಿಸಿದ್ದೆವು. ಅದು 2003ರಲ್ಲಿ ಎಫ್‍ಡಿಪಿ ಆಗಿದೆ. 2008ರಲ್ಲಿ ತಂದೆಯ ಮೂರನೇ ಹೆಂಡತಿ ಸಣ್ಣಕೆಂಚಮ್ಮ ಅವರು ಸುಳ್ಳು ವಂಶವೃಕ್ಷ ನೀಡಿ ಸರ್ವೆ ನಂ. 14ರ ಹಿರೇಮಠದ ಜಮೀನನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಂಡರು. 2010ರಲ್ಲಿ ಈ ಜಮೀನನ್ನು ಶಿವಮೊಗ್ಗದ ಸರಸ್ವತಿ ಅವರಿಗೆ ಕ್ರಯಪತ್ರ ಮಾಡಿ ಕೊಟ್ಟರು. ತಂದೆಯ ಆಸ್ತಿಯನ್ನು ಮಾರಾಟ ಮಾಡಲು ಮೂರನೇ ಪತ್ನಿಗೆ ಯಾವುದೇ ಹಕ್ಕು ಇಲ್ಲ. ಸರಸ್ವತಿ ಅವರು ನಂತರ ಇದನ್ನು 2016ರಲ್ಲಿ ಶಿಕಾರಿಪುರದ ಶೆಟ್ಟಿಹಳ್ಳಿ ರಾಘವೇಂದ್ರ ಅವರಿಗೆ 10 ಗುಂಟೆ ಕರಾಬು ಸೇರಿ ಒಟ್ಟು 35 ಗುಂಟೆ ಮಾರಾಟ ಮಾಡಿದ್ದಾರೆ. ಇದೇ 35 ಗುಂಟೆ ಜಾಗದಲ್ಲಿ ರೇಣುಕಾಚಾರ್ಯ ಮನೆ ನಿರ್ಮಿಸುತ್ತಿದ್ದು, ಅದು ತಂದೆಯವರ ಮೊದಲ ಪತ್ನಿ ದ್ಯಾಮಮ್ಮ ಅವರಿಗೆ ಸೇರಿದ ಜಾಗವಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ರೇಣುಕಾಚಾರ್ಯ ಅವರು ಕೋರ್ಟ್ ಆದೇಶಾನುಸಾರ ಜಮೀನು ಖರೀದಿಸಿ ಮನೆ ನಿರ್ಮಿಸಿರುವುದಾಗಿ ಹೇಳಿದ್ದಾರೆ. ಆದರೆ, ನಾವು ಅದರ ವಿರುದ್ಧ 2001ರಲ್ಲಿ ಪ್ರಕರಣ ದಾಖಲಿಸಿದ್ದೆವು. ಅದಕ್ಕೆ ತಡೆಯಾಜ್ಞೆ ಸಿಗದ ಕಾರಣ ಈಕ್ವಿಟಿ ಕ್ಲೈಮ್ ಮಾಡಿಸಿದ್ದೇವೆ’ ಎಂದು ವಿವರಿಸಿದರು.

‘ತಂದೆಯವರ 14ನೇ ಸ.ನಂ.ನಲ್ಲಿರುವ ಆಸ್ತಿಯು 6 ಭಾಗಗಳಾಗಿ ಸಮ ಹಂಚಿಕೆಯಾಗಿದೆ. ಒಂದು ಷೇರನ್ನು (ಸ.ನಂ. 14/4 ) ರೇಣುಕಾಚಾರ್ಯ ಖರೀದಿಸಿದ್ದು, ಉಳಿದ 5 ಭಾಗವು 14/3 ಮತ್ತು 14/5, 14/1 ಗೀತಾ, ವನಜಾಕ್ಷಮ್ಮ ಮತ್ತು ವಾಣಿಶ್ರೀ ಅವರಿಗೆ ಸೇರಿದೆ. ಆದರೆ, ಶಾಸಕರು ಅದನ್ನೂ ತಮ್ಮ ಹೆಸರಿನಲ್ಲಿ ಖಾತೆ ಮಾಡಿಸಿಕೊಂಡಿದ್ದಾರೆ. ಈ ಸಂಬಂಧ ನಮಗೆ ಯಾರೂ ನೋಟಿಸ್ ನೀಡಿರಲಿಲ್ಲ’ ಎಂದು ಆರೋಪಿಸಿದರು.

‘ಕೆಲ ದಿನಗಳ ಹಿಂದೆ 14/3 ಮತ್ತು 14/5ಕ್ಕೆ ಜಾಗಕ್ಕೆ ತಡೆಯಾಜ್ಞೆ ಸಿಕ್ಕಿದ್ದರೂ ಗುಂಡಿ ತೆಗೆದು ಪಿಲ್ಲರ್‌ಗಳನ್ನು ಹಾಕಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರೂ ಕಟ್ಟಡದ ಕೆಲಸವನ್ನು ಮುಂದುವರಿಸುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ’ ಎಂದು ದೂರಿದರು.

‘ಆಸ್ತಿ ವಿವಾದ ಕೋರ್ಟ್‌ನಲ್ಲಿ ತಿರ್ಮಾನ ಆಗುವವರೆಗೂ ಶಾಸಕರು ಸುಮ್ಮನಿರಬೇಕು’ ಎಂದು ಅವರು ಮನವಿ ಮಾಡಿದರು.

ಅಡಕವ್ವಾರ ನಿಂಗಪ್ಪ ಅವರ ಎರಡನೇ ಹೆಂಡತಿ ದೊಡ್ಡಕೆಂಚಮ್ಮ, ಅವರ ಮಗಳು ಉದಯಚನ್ನಮ್ಮ, ಮೂರನೇ ಹೆಂಡತಿಯ ಮಕ್ಕಳಾದ ಅನ್ನಪೂರ್ಣ, ವಾಣಿಶ್ರೀ ಇದ್ದರು.

‘ಸಹೋದರಿಯರ ಆರೋಪದಲ್ಲಿ ಹುರುಳಿಲ್ಲ’

‘ನಗರದ ಹಿರೇಮಠ ಗ್ರಾಮದ ನಿವೇಶನಗಳನ್ನು ಕಾನೂನು ಪ್ರಕಾರ ಮನೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಖರೀದಿಸಿದ್ದೇನೆ. ವನಜಾಕ್ಷಮ್ಮ ಮತ್ತು ಅವರ ಸಹೋದರಿಯರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿರೇಮಠ ವ್ಯಾಪ್ತಿಯ ಸರ್ವೇ ನಂ 14/4ರಲ್ಲಿನ ನಿವೇಶನವನ್ನು ರಾಘವೇಂದ್ರ ನಾಯ್ಡು ಅವರಿಂದ ಕಾನೂನು ಪ್ರಕಾರ ಶುದ್ಧ ಕ್ರಯಕ್ಕೆ ಪಡೆದು ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಿಕೊಂಡಿದ್ದೇನೆ. ಆದರೂ ನ್ಯಾಯಾಲಯದ ಡಿಕ್ರಿಯಲ್ಲಿ ನಿವೇಶನವನ್ನು ವಜಾಗೊಳಿಸಲಾಗಿತ್ತು’ ಎಂದು ತಿಳಿಸಿದರು.

‘ನಂತರ 2013ರಲ್ಲಿ ಸರಸ್ಪತಿ ಅವರು ಸರ್ವೆ ನಂಬರ್ 14/1ರಿಂದ 14/5 ರವರೆಗಿನ ಎಲ್ಲಾ ನಿವೇಶನಗಳು ನಮಗೆ ಸೇರಿದ್ದು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜಮೀನನ್ನು ಸರಸ್ವತಿ ಅವರ ಪರವಾಗಿ ₹ 60 ಲಕ್ಷಕ್ಕೆ ಡಿಕ್ರಿ ಮಾಡಿ ಆದೇಶಿಸಿದರು. ಆ ನಂತರ ಸರಸ್ವತಿ ಹಾಗೂ ಕುಟುಂಬದವರ ಒಪ್ಪಿಗೆ ಮೇರೆಗೆ
₹ 60 ಲಕ್ಷ ಪಾವತಿಸಿ, ಕಾನೂನು ಪ್ರಕಾರವಾಗಿ ಜಮೀನು ನೋಂದಣಿ ಮಾಡಿಸಿಕೊಂಡಿದ್ದೇನೆ’ ಎಂದು ಹೇಳಿದರು.

‘ಕ್ಷೇತ್ರದ ಅಭಿವೃದ್ಧಿ ಮತ್ತು ನನ್ನ ಏಳಿಗೆಯನ್ನು ಸಹಿಸದ ಪಟ್ಟಭದ್ರಹಿತಾಸಕ್ತಿಯುಳ್ಳವರು ನನ್ನ ವಿರುದ್ಧ ಈ ಹಿಂದಿನಿಂದಲೂ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT