ಬುಧವಾರ, ಡಿಸೆಂಬರ್ 7, 2022
23 °C
ಹೊನ್ನಾಳಿಯಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಪ

ಚಂದ್ರಶೇಖರ್‌ ಸಾವು ಅಪಘಾತವಲ್ಲ, ವ್ಯವಸ್ಥಿತ ಕೊಲೆ: ರೇಣುಕಾಚಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ‘ಚಂದ್ರಶೇಖರ್‌ ಸಾವು ರಸ್ತೆ ಅಪಘಾತದಿಂದ ಆಗಿದ್ದಲ್ಲ. ಇದೊಂದು ವ್ಯವಸ್ಥಿತ ಕೊಲೆ’ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಶನಿವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಪೊಲೀಸರು ನಾಲ್ಕೈದು ದಿನ ಏನು ಮಾಡಿಯೇ ಇಲ್ಲ. ನಮ್ಮ ಪಕ್ಷದ ಮುಖಂಡರಾದ ಪುರಸಭೆ ಅಧ್ಯಕ್ಷ ರಂಗಪ್ಪ, ಕುಳಗಟ್ಟೆ ರಂಗಪ್ಪ, ಅರಕೆರೆ ನಾಗರಾಜ್ ಇತರರು ಸೇರಿ ಏಳೆಂಟು ಜನ ಡ್ರೋಣ್ ಕ್ಯಾಮೆರಾ ತರಿಸಿ ಪರಿಶೀಲಿಸಿದಾಗ ತುಂಗಾ ನಾಲೆ ಬಳಿಯೇ ಕಾರಿನ ಕೆಲ ಬಿಡಿಭಾಗಗಳು ಪತ್ತೆಯಾಗಿವೆ. ನಂತರ ಕಾರು ಪತ್ತೆಯಾಗಿದೆ. ಇದನ್ನು ಪತ್ತೆ ಹಚ್ಚಿದ್ದು ನಮ್ಮ ಕಾರ್ಯಕರ್ತರು, ಪೊಲೀಸರಲ್ಲ’ ಎಂದು ರೇಣುಕಾಚಾರ್ಯ ಕಿಡಿಕಾರಿದರು.

‘ನನ್ನ ರಾಜಕೀಯ ಏಳಿಗೆ ಕಂಡು ನನ್ನನ್ನು ಎದುರಿಸಲಾಗದೇ ಶಿಖಂಡಿಗಳು ಈ ಕೃತ್ಯ ಎಸಗಿರಬಹುದು. ಪೊಲೀಸರ ಈ ವೈಫಲ್ಯದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ನಮ್ಮ ಕಾರ್ಯಕರ್ತರು ಬಂದಿದ್ದರು. ಆದರೆ ನಾನು ಸರ್ಕಾರದ ಒಂದು ಭಾಗವಾಗಿರುವುದರಿಂದ ನನ್ನ ವಿರುದ್ಧವೂ ಪ್ರತಿಭಟನೆ ಮಾಡಿದಂತಾಗುತ್ತದೆ ಬೇಡ ಎಂದು ಹೇಳಿದ್ದೇನೆ’ ಎಂದು ಹೇಳಿದರು.

‘ಈ ಎಡಿಜಿಪಿ ಅಲೋಕ್ ಕುಮಾರ್ ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಸಸ್ಪೆಂಡ್ ಆಗಿದ್ದ, ಇವನು ಹೇಗೆ ತಾನೇ ನ್ಯಾಯ ಕೊಡಿಸಲು ಸಾಧ್ಯ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಬಗ್ಗೆ ವಿಶ್ವಾಸವಿದೆ’ ಎಂದರು

ಬೆದರಿಕೆ ಕರೆ ಭೇದಿಸಲಿಲ್ಲ: ‘ನನಗೆ ಈ ಹಿಂದೆ ಬೆದರಿಕೆ ಕರೆ ಬಂದಾಗ ಪೊಲೀಸರು ವಿಚಾರಣೆ ಮಾಡಲಿಲ್ಲ. ಮೊಬೈಲ್ ಕರೆ ಮಾಡಿ ಅಪರಿಚಿತರು ನಿನ್ನನ್ನು, ನಿಮ್ಮ ಮಗನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು’ ಎಂದು ಹಳೆಯ ಘಟನೆಯನ್ನು ಮೆಲುಕು
ಹಾಕಿದರು.

ಚಂದ್ರಶೇಖರ್‌ ಅವರ ತಂದೆ ಎಂ.ಪಿ. ರಮೇಶ್, ದೊಡ್ಡಪ್ಪ ಎಂ. ಶಿವಶಂಕರಯ್ಯ, ಚಿಕ್ಕಪ್ಪ ಎಂ.ಪಿ. ಬಸವರಾಜಯ್ಯ ಅವರು ಕೂಡ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು