ಬುಧವಾರ, ಸೆಪ್ಟೆಂಬರ್ 18, 2019
26 °C
ಹೊಸ ಮೋಟರು ವಾಹನ ಕಾಯ್ದೆ ಸಾಧಕ-ಬಾಧಕಗಳ ಬಗ್ಗೆ ಚರ್ಚಾ ಸಭೆ

ದಂಡದ ಮೊತ್ತ ಕಡಿಮೆ ಮಾಡಲು ಆಗ್ರಹ

Published:
Updated:
Prajavani

ದಾವಣಗೆರೆ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೋಟರ್‌ ವಾಹನ ಹೊಸ ಕಾಯ್ದೆಯ ಪ್ರಕಾರ ವಿಧಿಸಲಾಗುತ್ತಿರುವ ದಂಡ ಅಧಿಕವಾಗಿದ್ದು, ದಂಡ ಕಡಿಮೆಗೊಳಿಸಬೇಕು.

ಇಲ್ಲಿನ ವನಿತಾ ಸಮಾಜದಲ್ಲಿ ಸೋಮವಾರ ನಡೆದ ‘ಹೊಸ ಮೋಟರ್‌ ವಾಹನ ಕಾಯ್ದೆ’ ಬಗ್ಗೆ ನಡೆದ ಸಾಧಕ-ಬಾಧಕಗಳ ಚರ್ಚೆಯ ಸಭೆಯಲ್ಲಿ ಮೂಡಿದ ಒಕ್ಕೊರಲ ಅಭಿಪ್ರಾಯ ಇದು.

ದಂಡ ಮರು ಪರಿಶೀಲನೆಗೆ ಸರ್ಕಾರಕ್ಕೆ ಮನವಿ ಸಲ್ಲಿಸುವುದು, ಪ್ರತಿಭಟನೆ ನಡೆಸುವುದು, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದು ಸೇರಿ ಹೋರಾಟದ ಹಲವು ಮಜಲುಗಳು ಚರ್ಚೆಯಾದವು.

ಯಾವುದೇ ಪಕ್ಷದ, ಸಂಘಟನೆಗಳ ವಿರುದ್ಧದ ಹೋರಾಟ ಇದಲ್ಲ. ಕಾನೂನಿನ ಹೆಸರಲ್ಲಿ ನಡೆಯುವ ದಬ್ಬಾಳಿಕೆಯ ವಿರುದ್ಧದ ಹೋರಾಟ ಎಂಬ ಅಭಿಪ್ರಾಯ ಮೂಡಿಬಂದವು.

ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ ಮಾತನಾಡಿ, ‘ಹೊಸ ಮೋಟರ್ ವಾಹನ ಕಾಯ್ದೆಯಲ್ಲಿರುವ ಹಲವು ಅಂಶಗಳಿಗೆ ವಿರೋಧವಿಲ್ಲ. ಕಾನೂನು ಪಾಲನೆ ಎಲ್ಲರೂ ಮಾಡಲೇಬೇಕು. ದುಬಾರಿ ದಂಡ ವಿಧಿಸುವುದೇ ಅವೈಜ್ಞಾನಿಕ. ಅದನ್ನೇ ನಾವು ವಿರೊಧೀಸುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಜನರಿಗೆ ತಿಳಿವಳಿಕೆ ನೀಡಿ ಕಾಯ್ದೆ ಜಾರಿಗೆ ತರುವ ಬದಲು ಒಮ್ಮಿಂದೊಮ್ಮೆಗೆ ಜಾರಿಗೊಳಿಸಿರುವುದು ಸರಿಯಲ್ಲ. ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಜಾರಿಗೊಂಡಿದೆ. ಉಳಿದ ರಾಜ್ಯಗಳಲ್ಲಿ ಜಾರಿಗೊಳಿಸಲು ಅಲ್ಲಿನ ಸರ್ಕಾರಗಳು ವಿರೋಧಿಸಿವೆ ಎಂದು ಮಾಹಿತಿ ನೀಡಿದರು.

‘ಈ ಕಾನೂನಿಂದಾಗಿ ಸಂಚಾರ ಪೊಲೀಸರನ್ನು ಕಂಡರೆ ಜನರ ಭಯಪಡುವಂತಾಗಿದೆ. ಈಗಿನ ಕಾನೂನು ತಿದ್ದುಪಡಿ ಮಾಡಿ, ದಂಡದ ಪ್ರಮಾಣ ಹೊರೆಯಾಗದಂತೆ ರೂಪಿಸಬೇಕು. ಸೌಹಾರ್ದಯುತ ಕಾನೂನು ಜಾರಿಗೆ ತರಬೇಕು. ಭಯಪಡಿಸುವ ಕಾಯ್ದೆ ಉಳಿಯರಾಲದು’ ಎಂದು ಜಿಲ್ಲಾ ವರದಿಗಾರರ ಒಕ್ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್ ಹೇಳಿದರು.

ಯಾವುದೇ ಕಾನೂನು ಜನಸಾಮಾನ್ಯರಿಗೆ ಬಾಧಕ ಆಗಬಾರದು. ಹೊಸ ಮೋಟಾರು ವಾಹನ ಕಾಯ್ದೆ ಒಳಗೊಂಡಂತೆ 30 ಕಾಯ್ದೆಗಳನ್ನು ಕೇಂದ್ರ ಸರ್ಕಾರ ಯಾವುದೇ ಚರ್ಚೆ ಮಾಡದೆ ತರಾತುರಿಯಲ್ಲಿ ಜಾರಿಗೆ ತಂದಿದೆ. ಇದರ ವಿರುದ್ಧ ದಾವಣಗೆರೆಯಿಂದಲೇ ಹೋರಾಟ ಆರಂಭಗೊಳ್ಳಬೇಕು ಎಂದು ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಸಲಹೆ ನೀಡಿದರು.

ಹೆಲ್ಮೆಟ್‌ ಇಲ್ಲದೇ ಬೈಕ್‌ ಚಲಾಯಿಸಿದರೆ ಅವರಿಂದ ಹೆಲ್ಮೆಟ್‌ ದರವನ್ನು ವಸೂಲಿ ಮಾಡಿ ಹೆಲ್ಮೆಟ್‌ ತೆಗೆಸಿಕೊಡಿ. ಸ್ವಲ್ಪ ದಂಡವನ್ನೂ ವಿಧಿಸಿ. ಅದೇ ರೀತಿ ವಿಮೆ ಇಲ್ಲಾಂದರೆ ವಸೂಲಿ ಮಾಡಿ ಕಟ್ಟಿಸಿ, ಡಿಎಲ್‌ ಇಲ್ಲಾಂದರೆ ಅಲ್ಲೇ ಮಾಡಿಸಿಕೊಡಿ. ಎಲ್ಲದಕ್ಕೂ ದಂಡ ವಿಧಿಸುವ ಜತೆಗೆ ಈ ಕೆಲಸಗಳನ್ನೂ ಮಾಡಿದರೆ ಒಳ್ಳೆಯದು ಎಂದು ಅವರು ಪೊಲಿಸರಿಗೆ ತಿಳಿಸಿದರು.

ರೋಟರ‍್ಯಾಕ್ಟ್‌ನ ಶ್ರೀಕಾಂತ್ ಬಗಾರೆ ಸ್ವಾಗತಿಸಿದರು. ನಗರಸಭೆ ಮಾಜಿ ಉಪಾಧ್ಯಕ್ಷ ಎ. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

ನಿಯಮ ಪಾಲಿಸಿದರೆ ದಂಡವಿಲ್ಲ: ಪಿಎಸ್‌ಐ

ನಿಯಮ ಮೀರಿದರಷ್ಟೇ ದಂಡ ಇರುವುದು. ಹಾಗಾಗಿ ಯಾರೂ ಸಂಚಾರ ನಿಯಮ ಉಲ್ಲಂಘಿಸದಿದ್ದರೆ ದಂಡ ಕಟ್ಟುವ ಪ್ರಮೇಯವೇ ಇರುವುದಿಲ್ಲ ಎಂದು ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಮಂಜುನಾಥ್ ಅರ್ಜುನ ಲಿಂಗಾರೆಡ್ಡಿ ತಿಳಿಸಿದರು.

‘ದಂಡ ಜಾಸ್ತಿ ಇದೆ ಎಂಬುದು ಮುಖ್ಯವಲ್ಲ. ದಂಡ ಕಟ್ಟದಂತೆ ನಿಯಮ ಪಾಲಿಸುವುದು ಮುಖ್ಯ. ಅಪಘಾತದಲ್ಲಿ ಜೀವ ಕಳೆದುಕೊಂಡವರು ನಮ್ಮ ಮನೆಯ ಮಕ್ಕಳಾಗಿದ್ದರೆ, ಕುಟುಂಬದ ಸದಸ್ಯರಾಗಿದ್ದರೆ ಅದರ ನೋವು ಅರ್ಥವಾಗುತ್ತಿತ್ತು. ₹ 1,000 ದಂಡ ಕಟ್ಟುವ ಬದಲು ಹೆಲ್ಮೆಟ್‌ ತೆಗೆದುಕೊಳ್ಳಿ. ಬೈಕ್‌ಗಳಿವೆ ವಿಮೆ ವರ್ಷಕ್ಕೆ ₹ 1,000ದಿಂದ ₹ 1,800 ಕಟ್ಟಿದರೆ ದಂಡ ಇರುವುದಿಲ್ಲ. ಏನಾದರೂ ಅಪಘಾತ ಉಂಟಾದರೆ ನಿಮ್ಮನ್ನು ನಂಬಿದವರಿಗೆ ಕನಿಷ್ಠ ಆರ್ಥಿಕ ಬಲವಾದರೂ ಸಿಗುತ್ತದೆ’ ಎಂದು ವಿವರ ನೀಡಿದರು.

‘ಜನರಲ್ಲಿ ತಿಳಿವಳಿಕೆ ಮೂಡಿಸಲು ಸಮಯವಕಾಶ ಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ. ಭಾರತದಲ್ಲಿ 1914ರಲ್ಲಿ ಮೊದಲ ಬಾರಿಗೆ ಸಂಚಾರ ನಿಯಮ ಕಾಯ್ದೆ ಜಾರಿಗೊಳಿಸಲಾಯಿತು. ಅದಾಗಿ ಒಂದು ಶತಮಾನ ದಾಟಿದೆ. ಇದರ ನಡುವೆ 1939, 1988 ಮತ್ತು ಈಗ 2019ರಲ್ಲಿ ತಿದ್ದುಪಡಿ ಆಗಿದೆ. ಇನ್ನೂ ಅರಿವು ಮೂಡಿಲ್ಲ ಅಂದರೆ ಹೇಗೆ’ ಎಂದು ಪ್ರಶ್ನಿಸಿದರು.

ಬಡವರಿಗೆ ಹೊರೆ ಎನ್ನುವುದು ಕೂಡ ಸರಿಯಲ್ಲ. ಬೈಕ್‌ ತೆಗೆದುಕೊಳ್ಳಲು, ಅದಕ್ಕೆ ಪೆಟ್ರೋಲ್‌ ಹಾಕಲು ದುಡ್ಡಿದ್ದರೆ, ವಿಮೆ ಕಟ್ಟಲು, ಹೆಲ್ಮೆಟ್‌ ಖರೀದಿಸಲೂ ದುಡ್ಡು ಇರುತ್ತದೆ ಎಂದರು.

ಸರ್ಕಾರವೇ ಲೈಸೆನ್ಸ್‌ ನೀಡಿದ ಬಾರ್‌ ಪಕ್ಕದಲ್ಲಿಯೇ ನಿಂತು ದಂಡ ವಿಧಿಸುತ್ತಿರುವ ಬಗ್ಗೆ ಬಂದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಮದ್ಯ ನಿಷೇಧ ಹೋರಾಟ ಮಾಡುವುದಿದ್ದರೆ ನಮ್ಮದೂ ಸಹಕಾರ ಇದೆ’ ಎಂದರು.

ಯಾರು.. ಏನಂದರು...?

* ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಬೇಕು

– ನ್ಯಾಯವಾದಿ ಮುಷ್ತಾಕ್ ಅಹಮ್ಮದ್ ಮೌಲ್ವಿ

* ಗೋಕಾಕ್‌ ಮಾದರಿ ಹೋರಾಟವಾಗಬೇಕು.

– ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಕೆ.ಜಿ. ಯಲ್ಲಪ್ಪ 

* ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ. ಜನರಲ್ಲಿ ಅರಿವು ಮೂಡಿಸಿ ಕಾಯ್ದೆ ಜಾರಿ ಮಾಡಿ.

–ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಪುಲ್ಲಾ

* ಜನರಿಗೆ ಬಿಸಿತಟ್ಟು ಜನಪ್ರತಿನಿಧಿಗಳ ಕೊರಳಪಟ್ಟಿ ಹಿಡಿಯುವ ವರೆಗೆ ಹೋರಾಟ ವಿಳಂಬ ಮಾಡಬೇಕಿತ್ತು.

–ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಎಂ.ಎಸ್. ರಾಮೇಗೌಡ

* ಅವೈಜ್ಞಾನಿಕ ದಂಡದ ವಿರುದ್ಧ ಹೋರಾಟ ಅಗತ್ಯ.

–ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ವಿ. ಮಂಜುನಾಥಸ್ವಾಮಿ

* ಇದರ ವಿರುದ್ಧ ಹೈಕೋರ್ಟ್‌, ಸುಪ್ರೀಂಕೋರ್ಟ್‌ಗೂ ಹೋಗಲು ತಯಾರಾಗೋಣ.

–ಚಾರ್ಟಡ್ ಅಕೌಂಟೆಂಟ್ ಸಿ. ಉಮೇಶ್‌ ಶೆಟ್ಟಿ

Post Comments (+)