ಅಧಿಕಾರಿಗಳ ಕೈಗಂಟಿದ ಅಕ್ರಮದ ಕೆಸರು

ಹರಿಹರ: ತಾಲ್ಲೂಕಿನ ಸಾರಥಿ ಗ್ರಾಮದ ತುಂಗಭದ್ರಾ ನದಿತೀರದ ಇನಾಂ ಜಮೀನಿನಲ್ಲಿ ಅವ್ಯಾಹತವಾಗಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಕಾನೂನು ಕ್ರಮ ಜರುಗಿಸದೆ ಜಾಣ ಕುರುಡು ಪ್ರದರ್ಶಿಸುತ್ತಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರಥಿ ಗ್ರಾಮದ ಸರ್ವೆ ಸರ್ವೆ ನಂ. 49ರ 40 ಎಕರೆ ಜಮೀನಿನಲ್ಲಿ ಹಲವಾರು ವರ್ಷಗಳಿಂದ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆದಿದೆ. ಬಿತ್ತನೆಗೆ ಯೋಗ್ಯವಾದ ಹೊಲಗಳಲ್ಲಿ ಸುಮಾರು 40 ಅಡಿ ತಗ್ಗುಗಳು ಬಿದ್ದಿವೆ. ಈ ಮೂಲಕ ಮಳೆಗಾಲದಲ್ಲಿ ನದಿ ನೀರು ಸುತ್ತಲಿನ ಹೊಲಗಳಿಗೆ ನುಗ್ಗುವ ಜತೆ ಅಕ್ಕಪಕ್ಕದ ರೈತರ ಭೂಮಿ, ಬೆಳೆ ನಾಶಕ್ಕೆ ಕಾರಣವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ಸರ್ಕಾರ ಪರಿಶಿಷ್ಟ ಪಂಗಡದ ಆರ್ಥಿಕ ಅಭಿವೃದ್ಧಿ ಹಾಗೂ ಜೀವನೋಪಾಯಕ್ಕಾಗಿ ಇನಾಂ ಭೂಮಿ ನೀಡಿದೆ. ಸಾರಥಿ ಗ್ರಾಮದ ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಸರ್ವೆ ನಂ. 49ರಲ್ಲಿ 40 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಈ ಜಮೀನ
ನಲ್ಲಿರುವ ಫಲವತ್ತಾದ ಮಣ್ಣನ್ನು ಹಲವು ವರ್ಷಗಳಿಂದ ಇಟ್ಟಿಗೆ ತಯಾರಿಕೆಗೆ ಅಕ್ರಮ ಮಾರಾಟ ಮಾಡಲಾಗುತ್ತಿದೆ’ ಎಂದು ಗ್ರಾಮಸ್ಥ ಗೋವಿಂದಪ್ಪ ದೂರಿದರು.
‘ಅಕ್ರಮ ಮಣ್ಣು ಗಣಿಗಾರಿಕೆ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ತಹಶೀಲ್ದಾರ್ ಅವರಿಗೂ ಮನವಿ ಸಲ್ಲಿಸಲಾಗಿದೆ. ಆದರೂ ಹೊಲದ ಮಾಲೀಕರು ಹಾಗೂ ದಂಧೆಕೋರರು ಮಣ್ಣು ಗಣಿಗಾರಿಕೆ ಮುಂದುವರಿಸಿದ್ದಾರೆ. ಅಧಿಕಾರಿಗಳು ಕೂಡಲೇ, ಕಾನೂನು ಕ್ರಮ ಜರುಗಿಸಬೇಕು’ ಎಂದು ಅವರು ಆಗ್ರಹಿಸಿದರು.
‘ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಭೂಮಿಯನ್ನು ನಮ್ಮ ಮುಂದಿನ ಪೀಳಿಗೆಗೆ ಸುರಕ್ಷತವಾಗಿ ಉಳಿಸಬೇಕಾದುದು ನಮ್ಮ ಹೊಣೆ. ಆದರೆ, ಅಧಿಕಾರಿಗಳು ಅಕ್ರಮ ದಂಧೆಕೋರರೊಂದಿಗೆ ಕೈಜೋಡಿಸಿರುವ ಕಾರಣ ನಮ್ಮ ಜಮೀನು ಜೌಗಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆಗೆ ಆತಂಕ ಮೂಡಿದೆ’ ಎಂದು ಗ್ರಾಮಸ್ಥ ಬಸವಂತಪ್ಪ ಅಳಲು ತೋಡಿಕೊಂಡರು.
‘ನದಿ ತೀರದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆಯಿಂದ ನದಿ ನೀರು ಹೊಲಗಳಿಗೆ ನುಗ್ಗಿ ಬೆಳೆದ ಫಸಲು ಹಾಗೂ ಮೆಕ್ಕಲು ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ಭವಿಷ್ಯದಲ್ಲಿ ಹೊಲಗಳು ಬಂಜರಾಗುವ ಭೀತಿ ಆವರಿಸಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ನದಿಪಾತ್ರದಲ್ಲಿ ಗುರುವಾರ ಮಣ್ಣು ತೆಗೆಯಲು ಬಂದ ಜೆಸಿಬಿ, ಹಿಟಾಚಿ ಹಾಗೂ ಲಾರಿಗಳನ್ನು ಗ್ರಾಮಸ್ಥರ ನೆರವಿನಿಂದ ವಾಪಸ್ ಕಳುಹಿಸಲಾಗಿದೆ. ಅಧಿಕಾರಿಗಳು ಕೂಡಲೇ, ಈ ದಂಧೆಕೋರರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
‘ಯಾವುದೇ ಇನಾಂ ಜಮೀನು ಕೃಷಿ ಚಟುವಟಿಕೆ ಮೀಸಲು ಎಂಬುದು ಸರ್ಕಾರ ನಿಯಮಾವಳಿ. ಇದನ್ನು ಉಲ್ಲಂಘಸಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿದರೆ, ಫಲಾನುಭವಿಗಳಿಂದ ಜಮೀನು ಹಿಂಪಡೆಯುವ ಅಧಿಕಾರ ಸರ್ಕಾರಕ್ಕಿದೆ. ಆದರೆ, ಕೆಲವರು ಅಕ್ರಮ ಮಣ್ಣು ಗಣಿಗಾರಿಕೆಗೆ ಕೈಜೊಡಿಸಿ ಅವರ ಕೈಗಳನ್ನು ಕೆಸರು ಮಾಡಿಕೊಂಡಿದ್ದಾರೆ. ಆಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಕೃಷಿ ಯೋಗ್ಯ ಭೂಮಿಯನ್ನು ರಕ್ಷಿಸಿಬೇಕು’ ಎಂದು ಇನಾಂ ಜಮೀನು ಫಲಾನುಭವಿಗಳು ಮನವಿ ಮಾಡಿದ್ದಾರೆ.
ಕೋಟ್...
ಸಾರಥಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗೆ ಮಣ್ಣು ಗಣಿಗಾರಿಕೆ ನಿಯಂತ್ರಿಸುವಂತೆ ಸೂಚಿಸಲಾಗಿದೆ. ನದಿಪಾತ್ರದ ಇನಾಂ ಜಮೀನಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಮುಂದುವರಿದರೆ ಕಾನೂನು ಕ್ರಮ ಜರುಗಿಸಲಾಗುವುದು.
ಕೆ.ಬಿ. ರಾಮಚಂದ್ರಪ್ಪ, ತಹಶೀಲ್ದಾರ್, ಹರಿಹರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.