ಮಂಗಳವಾರ, ನವೆಂಬರ್ 19, 2019
22 °C

ರಸ್ತೆಯಲ್ಲಿ ದರೋಡೆಗೆ ಯತ್ನ: ಮೂವರ ಬಂಧನ

Published:
Updated:
Prajavani

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ–ಸುಣಗೆರೆ ಮಧ್ಯೆ ನೀಲಗಿರಿ ತೋಪು ಬಳಿ ಸೋಮವಾರ ಮುಂಜಾನೆ ವಾಹನಗಳನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸುತ್ತಿದ್ದ ತಂಡದ ಮೂವರನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಪರಾರಿಯಾಗಿದ್ದಾರೆ.

ಶಿವಮೊಗ್ಗ ತಾಲ್ಲೂಕು ಪಿಳ್ಳಂಗಿರಿ ಗ್ರಾಮದ ಚಿಕ್ಕಪ್ಪ ಅಲಿಯಾಸ್‌ ಪಿಳ್ಳಂಗಿರಿ ಚಿಕ್ಕಣ್ಣ, ಚನ್ನಗಿರಿ ತಾಲ್ಲೂಕು ರಾಜಗೊಂಡನಹಳ್ಳಿ ಗ್ರಾಮದ ನಿಂಗಪ್ಪ ಹಾಗೂ ಚನ್ನಗಿರಿ ತಾಲ್ಲೂಕು ಎರೆಹಳ್ಳಿ ಗ್ರಾಮದ ಮಂಜಪ್ಪ ಬಂಧಿತ ಆರೋಪಿಗಳು.

ಬೈಕಲ್ಲಿ ಬಂದು ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟುತ್ತಿರುವ ತಂಡದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರನ್ನು ಕಂಡು ನಾಲ್ವರು ಬೈಕ್‌ ಹತ್ತಿ ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಮೂವರು ಆರೋಪಿಗಳಿಂದ 2 ಬೈಕು, ಚಾಕು, ಖಾರದಪುಡಿ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ಶ್ರೀಗಂಧ ವಶ: ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಮತ್ತು ಮಾಡಾಳ್ ಗ್ರಾಮಗಳಲ್ಲಿ ಶ್ರೀಗಂಧ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವರಿಂದ ₹ 5.5 ಲಕ್ಷ ಬೆಲೆ ಬಾಳುವ 79 ಕೆ.ಜಿ. ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಚನ್ನಗಿರಿ ವೃತ್ತ ನಿರೀಕ್ಷಕ ಆರ್‌.ಆರ್‌. ಪಾಟೀಲ್‌, ಪಿಎಸ್‌ಐ ಶಿವರುದ್ರಪ್ಪ ಎಸ್‌.ಮೇಟಿ, ಸಿಬ್ಬಂದಿ ವೀರಣ್ಣ, ಎಸ್‌.ಆರ್‌. ರುದ್ರೇಶ್‌, ಎಂ. ರುದ್ರೇಶ್‌, ಧರ್ಮಪ್ಪ, ಮಂಜುನಾಥ ಪ್ರಸಾದ್‌, ಪ್ರವೀಣ ಗೌಡ, ರವೀಂದ್ರ, ರಂಗಸ್ವಾಮಿ, ಹಾಲೇಶ್‌, ರವಿ, ರೇವಣಸಿದ್ದಪ್ಪ ಭಾಗವಹಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಎಎಸ್‌ಪಿ ಎಂ. ರಾಜೀವ್‌, ಡಿವೈಎಸ್‌ಪಿ ಮಂಜುನಾಥ ಕೆ. ಗಂಗಲ್‌ ಇದ್ದರು.

ಪ್ರತಿಕ್ರಿಯಿಸಿ (+)