ಮಂಗಳವಾರ, ಜನವರಿ 18, 2022
15 °C
ಹರಿಹರ ತಾಲ್ಲೂಕಿನ ಗಂಗನರಸಿಯ ರೈತನಿಗೆ ಕೂಡು ಕುಟುಂಬದ ಬೆಂಬಲ

ಹರಿಹರ: ಸದಾ ಪ್ರಯೋಗಶೀಲ ರೈತ ರೇವಣ ಸಿದ್ದಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನಾಯತ್‌ ಉಲ್ಲಾ ಟಿ.

ಹರಿಹರ: ಆಗದು ಎಂದು ಕೈ ಕಟ್ಟಿ ಕುಳಿತರೆ, ಸಾಗದು ಕೆಲಸವು ಮುಂದೆ, ಸಾಗದು ಕೆಲಸವು ಮುಂದೆ... ‘ಬಂಗಾರದ ಮನುಷ್ಯ’ ಚಲನಚಿತ್ರದ ಈ ಎವರ್ ಗ್ರೀನ್ ಹಾಡು ಪ್ರಗತಿಪರ ರೈತ ಕೆ. ರೇವಣ ಸಿದ್ದಪ್ಪ (50) ಅವರಿಗೆ ಅನ್ವಯವಾಗುತ್ತದೆ.

ತಾಲ್ಲೂಕಿನ ಗಂಗನರಸಿ ಗ್ರಾಮದ ಕೆ. ರೇವಣಸಿದ್ದಪ್ಪ ಮತ್ತು ಅವರ ಸಹೋದರರಾದ ಪರಮೇಶ್ವರಪ್ಪ, ಮೌನೇಶ್ ಅವರ ಕೂಡು ಕುಟುಂಬವು ಕೃಷಿಯಲ್ಲಿ ಹೊಸತನವನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯಿಂದ ಖುಷಿ ಪಡೆಯಲು ಹೊರಟಿದೆ.

ರೇವಣಸಿದ್ದಪ್ಪ ಅವರು ತಮ್ಮ ತಂದೆಯವರ ಮರಣದ ನಂತರ ಹಿರಿಯ ಪುತ್ರನಾಗಿ, ಸಣ್ಣ ವಯಸ್ಸಿನಲ್ಲೇ ಮನೆಯ ಜವಾಬ್ದಾರಿಯನ್ನು ಹೊತ್ತರು. ಇದರಿಂದ ಎಸ್ಸೆಸ್ಸೆಲ್ಸಿವರೆಗೆ ಮಾತ್ರವೇ ವಿದ್ಯಾಭ್ಯಾಸ ಮಾಡಲು ಸಾಧ್ಯವಾಯಿತು. ರೇವಣಸಿದ್ದಪ್ಪ ಮತ್ತು ಕುಟುಂಬದವರಿಗೆ ಒಟ್ಟು 33 ಎಕರೆ ಜಮೀನು ಇದೆ. ಇದರ ಜತೆಗೆ 10 ಎಕರೆ ಭೂಮಿಯನ್ನು ಹೆಚ್ಚುವರಿಯಾಗಿ ಗುತ್ತಿಗೆ ಪಡೆದು ಕೃಷಿಯಲ್ಲಿ ನಿರತರಾಗಿದ್ದಾರೆ.

ಒಟ್ಟು 43 ಎಕರೆ ಜಮೀನಿನ ಪೈಕಿ 10 ಎಕರೆ ಅಡಿಕೆ ತೋಟ, ಒಂದೂವರೆ ಎಕರೆ ಹಣ್ಣು–ಹಂಪಲು, ಉಳಿದ ಜಮೀನಿನಲ್ಲಿ ಭತ್ತ ನಾಟಿ ಮಾಡುತ್ತಾರೆ. ಭತ್ತ ಹೊರತುಪಡಿಸಿ ಅಡಿಕೆ, ಹಣ್ಣು–ಹಂಪಲು ತೋಟದಲ್ಲಿ ಇವರದ್ದು ಜೀರೊ ಕಲ್ಟಿವೇಷನ್. ತೋಟದಲ್ಲಿ ಬಿದ್ದ ಎಲೆ, ಗರಿಗಳನ್ನು ತುಂಡು ಮಾಡಿ ಮಣ್ಣಿನಲ್ಲೇ ಸೇರಿಸಿ ಭೂಮಿಯ ಫಲವತ್ತತೆಯನ್ನು ವೃದ್ಧಿಪಡಿಸುತ್ತಾರೆ. ಕಳೆ ತೆಗೆಯಲು ಮಾತ್ರ ಮೇಲ್ಮೈಗೆ ಯಂತ್ರ ಬಳಸುತ್ತಾರೆ.

ಸಾವಯವ ಪದ್ಧತಿ:
ಭತ್ತ, ಅಡಿಕೆ, ಹಣ್ಣಿನ ಬೆಳೆಗಳಿಗೆ ಇವರು ಗೊಬ್ಬರದ ಬದಲಿಗೆ ಜೀವಾಮೃತ, ಕ್ರಿಮಿನಾಶಕದ ಬದಲಿಗೆ ಬೇವಿನ ಎಣ್ಣೆಯನ್ನು ಅಧಿಕವಾಗಿ ಬಳಸುತ್ತಾರೆ. ತೀರ ಅಗತ್ಯಬಿದ್ದಾಗ ಅಲ್ಪ ಪ್ರಮಾಣದಲ್ಲಿ ರಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸುತ್ತಾರೆ. ಜೀವಾಮೃತ ತಯಾರಿಕೆಗಾಗಿ ತೋಟದಲ್ಲಿ 1500 ಲೀ. ಸಾಮರ್ಥ್ಯದ ಎರಡು ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಇಟ್ಟುಕೊಂಡಿದ್ದಾರೆ. ಅದನ್ನು ಮೋಟಾರಿನ ಸಹಾಯದಿಂದ ಹನಿ ನೀರಾವರಿ ಮೂಲಕ ಪ್ರತಿ ಸಸಿ, ಗಿಡಕ್ಕೆ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ.

ಬೇಡಿಕೆಯ ಹಣ್ಣಿನ ಬೆಳೆ:
ಭತ್ತ, ಅಡಿಕೆಯನ್ನು ಬಹುತೇಕ ರೈತರು ಬೆಳೆಯುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಈ ಪ್ರದೇಶಕ್ಕೆ ಹೊಸತೆನಿಸಿದ ಹಣ್ಣು–ಹಂಪಲುಗಳನ್ನು ಬೆಳೆಯುವ ಪ್ರಯೋಗ ಮಾಡುವವರು ವಿರಳ. ಇವರು ಒಂದೂವರೆ ಎಕರೆ ಜಮೀನಿನಲ್ಲಿ ನಿಂಬೆ ಹಣ್ಣಿನ 350 ಗಿಡ, ಬಾಳೆ 150, ಲಕ್ಷ್ಮಣಫಲ 65, ಬಟರ್ ಫ್ರೂಟ್ 40, ವಾಟರ್ ಫ್ರೂಟ್ 10, ಸಪೋಟಾ 4, ದಾಳಿಂಬೆ 2, ಬೆಟ್ಟದ ನಲ್ಲಿ 4, ಬಾರೆ ಹಣ್ಣು, ನೇರಳೆ ಹಣ್ಣಿನ ತಲಾ 2 ಗಿಡಗಳನ್ನು ಬೆಳೆಸಿದ್ದಾರೆ.

ಸದ್ ನಿಂಬೆಹಣ್ಣಿನ ಬೆಳೆಯಿಂದ ತಿಂಗಳಿಗೆ ₹ 4 ಸಾವಿರ ಆದಾಯ ಸಿಗುತ್ತಿದೆ. ಉಳಿದ ಹಣ್ಣುಗಳಿಂದಲೂ ಆದಾಯ ಬರುತ್ತಿದೆ. ಹೆಚ್ಚು ಆರೋಗ್ಯಕರ ಹಣ್ಣುಗಳೆನಿಸಿದ ಬಟರ್ ಫ್ರೂಟ್, ವಾಟರ್ ಆ್ಯಪಲ್, ಲಕ್ಷ್ಮಣ ಫಲವನ್ನು ಜ್ಯೂಸ್ ಅಂಗಡಿಯವರು ಖರೀದಿಸುತ್ತಾರೆ.

ದೀರ್ಘಾವಧಿ ವಾಣಿಜ್ಯ ಮರಗಳು:
ಜಮೀನಿನ ಅಂಚುಗಳಲ್ಲಿ 400 ಶ್ರೀಗಂಧ, 130 ತೆಂಗು, ಹೆಬ್ಬೇವು, ಮಹಾಗನಿ ತಲಾ 70, ಬೇವು, ಟೀಕ್ ತಲಾ 20 ಮರಗಳನ್ನು ಬೆಳೆಸಿ ಪೋಷಿಸುತ್ತಿದ್ದಾರೆ.

ಹೈನುಗಾರಿಕೆ:
ಸದ್ಯಕ್ಕೆ ತೋಟದ ಮನೆಯಲ್ಲಿ 4 ಆಕಳು, 4 ಕರುಗಳಿವೆ. ಇದರಿಂದ ಇವರ ಕೂಡ ಕುಟುಂಬದವರಿಗೆ ಹಾಲು, ಮೊಸರು, ಬೆಣ್ಣೆಯ ಅಗತ್ಯ ಪೊರೈಕೆಯಾಗುತ್ತದೆ. ಜೀವಾಮೃತಕ್ಕೆ ಸಗಣಿಯೂ ಸಿಗುತ್ತದೆ.

ಯಂತ್ರೋಪಕರಣ:
2 ಭತ್ತದ ಬೆಳೆ ಕಟಾವಿನ ಹಾರ್ವೆಸ್ಟರ್, 2 ಟ್ರ್ಯಾಕ್ಟರ್, ತಲಾ ಒಂದು ಪವರ್ ವೀಡರ್ (ಕಳೆ ಕಟಾವು ಯಂತ್ರ), ಹುಲ್ಲು ಕತ್ತಿರುವ ಯಂತ್ರ, ಸ್ಪ್ರೇಯರ್ ಯಂತ್ರಗಳಿವೆ. ರೇವಣಸಿದ್ದಪ್ಪ ಮತ್ತು ಸಹೋದರರು ಮಾತ್ರವಲ್ಲ ಅವರ ಪತ್ನಿಯರು, ತಾಯಿಯವರೂ ಕೃಷಿ ಕಾರ್ಯದಲ್ಲಿ ತೊಡಗುತ್ತಾರೆ. ಎಲ್ಲರೂ ದಿನದಲ್ಲಿ ಕನಿಷ್ಠ ಐದಾರು ಗಂಟೆ ಹೊಲ, ಗದ್ದೆ, ತೋಟದಲ್ಲಿ ಕೆಲಸ ಮಾಡುತ್ತಾರೆ.

ಕೃಷಿಯಲ್ಲಿ ಖುಷಿ

ಕೃಷಿಯ ಜೊತೆಗೆ ಗ್ರಾಮ ಪಂಚಾಯಿತಿ ಸದಸ್ಯ, ಹರ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದ್ದೇನೆ. 2012-13ರಲ್ಲಿ ಭತ್ತದ ಕೃಷಿ ಸ್ಪರ್ಧೆಯಲ್ಲಿ ತಾಲ್ಲೂಕು ಮಟ್ಟದ ಪ್ರಶಸ್ತಿ ಪಡೆದಿದ್ದೇನೆ. ಈ ಬಾರಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ. ಕೃಷಿಯಲ್ಲಿ ಖುಷಿ ಕಂಡಿದ್ದೇನೆ.

- ಕೆ. ರೇವಣಸಿದ್ದಪ್ಪ, ಪ್ರಗತಿಪರ ರೈತ, ಗಂಗನರಸಿ

***

ಒಗ್ಗಟ್ಟಿನಲ್ಲಿ ಬಲವಿದೆ ಎಂಬುದಕ್ಕೆ ಗಂಗನರಸಿ ಕೆ. ರೇವಣಸಿದ್ದಪ್ಪ ಮತ್ತು ಸಹೋದರರು ಉತ್ತಮ ಉದಾಹರಣೆ. ಕಾಳಜಿಯಿಂದ ಕೃಷಿ ಮಾಡುತ್ತಾರೆ. ಸದಾ ಪ್ರಯೋಗಶೀಲರು. ಉದ್ಯೋಗ ಖಾತ್ರಿ, ಇಲಾಖೆಯ ಇತರೆ ಯೋಜನೆಗಳ ಉಪಯೋಗ ಪಡೆದುಕೊಂಡಿದ್ದಾರೆ.

- ಜಿ.ಪಿ. ರೇಖಾ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ, ಹರಿಹರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು