ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತ್ರಿ ಯೋಜನೆಯಡಿ ₹ 18 ಕೋಟಿ ಲೂಟಿ ಅರೋಪ

ಜಗಳೂರು: ಬರಗಾಲದಲ್ಲಿ ಕೂಲಿಕಾರ್ಮಿಕರಿಗೆ ಬರೆ
Last Updated 18 ಮೇ 2019, 20:26 IST
ಅಕ್ಷರ ಗಾತ್ರ

ಜಗಳೂರು: ನಕಲಿ ಕೂಲಿ ಕಾರ್ಮಿಕರ ಹೆಸರಿನಲ್ಲಿ ಉದ್ಯೋಗ ಚೀಟಿಗಳನ್ನು ಸೃಷ್ಟಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು ₹18 ಕೋಟಿ ಲೂಟಿ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

ತಾಲ್ಲೂಕಿನಲ್ಲಿ ಸಕಾರಣವಿಲ್ಲದೆ 7,500 ಉದ್ಯೋಗ ಚೀಟಿಗಳನ್ನು ರದ್ದು ಮಾಡಲಾಗಿದೆ. ನಿಯಮಾವಳಿಯನ್ನು ಉಲ್ಲಂಘಿಸಿದ ಆರೋಪದಡಿ ಇಬ್ಬರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಐವರು ಪಿಡಿಒಗಳ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಸಹಸ್ರಾರು ಚೀಟಿಗಳನ್ನು ರದ್ದುಪಡಿಸಿರುವ ಅನುಮಾನಾಸ್ಪದ ಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಆಂತರಿಕ ತನಿಖೆ ನಡೆಸಿತ್ತು. ತನಿಖಾ ವರದಿ ಮೇರೆಗೆ ದೊಣೆಹಳ್ಳಿ ಹಾಗೂ ಕ್ಯಾಸೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಬಿ. ಮೂಗಣ್ಣ ಹಾಗೂ ಹಿರೇಮನಲ್ಲನಹೊಳೆ ಪಂಚಾಯಿತಿ ಪಿಡಿಒ ಮಂಜಣ್ಣ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಗೂ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರಿ ಆದೇಶಿಸಿದ್ದಾರೆ.

ಉದ್ಯೋಗ ಚೀಟಿಗಳನ್ನು ರದ್ದುಪಡಿಸಲು ಅವಕಾಶ ನೀಡುವ ಎಂ.ಐ.ಎಸ್ ತಂತ್ರಾಂಶದ ನಿಯಮಾವಳಿಗಳ ಬದಲಿಗೆ ಸಂಬಂಧವಿಲ್ಲದ ಕಾರಣಗಳನ್ನು ನೀಡಿ ಚೀಟಿಗಳನ್ನು ರದ್ದುಪಡಿಸಲಾಗಿದೆ. ಗ್ರಾಮಸಭೆ ಅಥವಾ ವಾರ್ಡ್ ಸಭೆಗಳ ಮೂಲಕ ಈ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತಾರದೆ ಎಲ್ಲಾ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂದು ಉಪ ಕಾರ್ಯದರ್ಶಿ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ತೀವ್ರ ಬರಗಾಲದ ಸಂದರ್ಭದಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡುವ ಬದಲು ಚೀಟಿಗಳನ್ನು ರದ್ದು ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಚೀಟಿ ರದ್ದು ಹಿಂದಿನ ಕರಾಮತ್ತು: ಇದೇ ಮೊದಲ ಬಾರಿಗೆ ಆರೇಳು ಪಂಚಾಯಿತಿಗಳಲ್ಲಿ 7,500 ಉದ್ಯೋಗಚೀಟಿಗಳನ್ನು ರದ್ದುಪಡಿಸಲಾಗಿದೆ. ಆದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಗೋಪ್ಯವಾಗಿ ಸಹಸ್ರಾರು ಸಂಖ್ಯೆಯಲ್ಲಿ ರದ್ದು ಮಾಡಿರುವ ಪ್ರಕ್ರಿಯೆ ಹಿಂದೆ ಕೋಟಿಗಟ್ಟಲೆ ಅವ್ಯವಹಾರದ ಹಗರಣ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.

‘7500 ಉದ್ಯೋಗಚೀಟಿಗಳನ್ನು ರದ್ದುಪಡಿಸಲಾಗಿದೆ. ನಿಯಮಾವಳಿಗಳ ಪಾಲನೆ ಮಾಡದೆ, ನನ್ನ ಅನುಮತಿಯನ್ನೂ ಪಡೆಯದೆ ರದ್ದು ಮಾಡಿರುವ ಪಿಡಿಒಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಜಾನಕಿರಾಮ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪಂಚಾಯಿತಿ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಉದ್ಯೋಗ ಚೀಟಿಗಳನ್ನು ಸೃಷ್ಟಿಸಿಕೊಂಡು, ನಕಲಿ ಕೂಲಿಕಾರರ ಹೆಸರಿನಲ್ಲಿ ಮಾನವ ದಿನಗಳನ್ನು ತೋರಿಸಿ ಕೂಲಿಹಣವನ್ನು ನಕಲಿ ಖಾತೆಗಳಿಗೆ ಜಮಾ ಮಾಡುವ ದೊಡ್ಡ ಜಾಲವೇ ಇದರ ಹಿಂದಿದೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮರೇನಹಳ್ಳಿ ಬಸವರಾಜ್, ಶಂಕರ್ ನಾಯ್ಕ್, ತಿಮ್ಮೇಶ್ ಆರೋಪಿಸಿದ್ದಾರೆ.

ಖಾತ್ರಿ ಕಾಮಗಾರಿಯ ನಕಲಿ ಕೂಲಿಕಾರರ ಹಣ ಖಾತೆಗಳಿಗೆ ಜಮೆ ಆಗುತ್ತಿದ್ದಂತೆ ಹಣ ಬಿಡಿಸಿಕೊಳ್ಳಲಾಗಿದೆ. ಅಕ್ರಮ ಬಯಲಿಗೆ ಬರುವ ಭೀತಿಯ ಹಿನ್ನೆಲೆಯಲ್ಲಿ ನಕಲಿ ಖಾತೆಗಳನ್ನು ಏಕಾಏಕಿ ರದ್ದುಪಡಿಸಿರುವ ಸಾಧ್ಯತೆ ಇದೆ. ಅಧಿಕಾರಿಗಳು, ಹೊರಗುತ್ತಿಗೆಯ ಎಂಜಿನಿಯರ್‌ಗಳು ಮತ್ತು ಇತರರು ಸೇರಿಕೊಂಡು ನಿಜವಾದ ಕೂಲಿಕಾರರಿಗೆ ಸಿಗಬೇಕಾದ ಕೂಲಿ ಹಣವನ್ನು ವಂಚಿಸಿ, ತಮ್ಮ ಆಪ್ತರ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಆರೋಪಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸದಸ್ಯರು ಒತ್ತಾಯಿಸಿದ್ದಾರೆ.

=========

ಅಂಕಿ ಅಂಶ

ಹೆಚ್ಚು ಉದ್ಯೋಗ ಚೀಟಿ ರದ್ದಾಗಿರುವ ಪಂಚಾಯಿತಿಗಳು

ದೊಣೆಹಳ್ಳಿ-1142 ಚೀಟಿ, ಹನುಮಂತಾಪುರ-1255,

ಹಿರೇಮಲ್ಲನಹೊಳೆ-1224, ಕ್ಯಾಸೇನಹಳ್ಳಿ -1140,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT