ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಆರ್‌ಯುಬಿ ನಿರ್ಮಾಣಕ್ಕೆ ನಿರ್ಧಾರ: ಸಚಿವ ಸುರೇಶ ಅಂಗಡಿ

ದಾವಣಗೆರೆಯ ಅಶೋಕ ರೈಲ್ವೆ ಗೇಟ್‌ ಸಮಸ್ಯೆಗೆ ಪರಿಶೀಲನೆ
Last Updated 26 ಜೂನ್ 2020, 14:25 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಅಶೋಕ ರೈಲ್ವೆ ಗೇಟ್‌ನ ದಶಕಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪುಷ್ಪಾಂಜಲಿ ಥಿಯೇಟರ್‌ ಬಳಿ ರೈಲ್ವೆ ಕೆಳ ಸೇತುವೆ (ಆರ್‌ಯುಬಿ) ನಿರ್ಮಿಸಲು ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಸಭೆಗೆ ಮೊದಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಅಶೋಕ ರೈಲ್ವೆ ಗೇಟ್‌ಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಆರ್‌ಯುಬಿ ನಿರ್ಮಿಸಲು ಉದ್ದೇಶಿಸಿರುವ ಸ್ಥಳವನ್ನೂ ವೀಕ್ಷಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಅಶೋಕ ರೈಲ್ವೆ ಗೇಟ್‌ ಬಳಿ ಮೇಲ್ಸೇತುವೆ ನಿರ್ಮಿಸುವುದು ಕಾರ್ಯಸಾಧುವಲ್ಲ. ಹೀಗಾಗಿ ಪುಷ್ಪಾಂಜಲಿ ಥಿಯೇಟರ್‌ ಬಳಿ ಭಾರಿ ವಾಹನಗಳೂ ಸಂಚರಿಸಲು ಸಾಧ್ಯವಿರುವಂತೆ ಆರ್‌ಯುಬಿ ನಿರ್ಮಿಸಲು ಯೋಜನೆ ಸಿದ್ಧಪಡಿಸಿದ್ದೇವೆ. ರೈಲ್ವೆ ಹಳಿಯ ಪಕ್ಕದ ಸ್ವಲ್ಪ ಭಾಗವನ್ನು ಭೂಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ಹಳಿಯ ಪಕ್ಕದ ರಸ್ತೆಯಲ್ಲಿನ ಒತ್ತುವರಿ ತೆರವುಗೊಳಿಸಿದರೆ ವಾಹನಗಳಿಗೆ ಸಂಚರಿಸಲು 60 ಅಡಿ ರಸ್ತೆಯೂ ಸಿಗಲಿದೆ’ ಎಂದು ಮಾಹಿತಿ ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ‘ಅಶೋಕ ರೈಲ್ವೆ ಗೇಟ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲು ಹಣ ಮಂಜೂರಾಗಿದೆ. ಪುಷ್ಪಾಂಜಲಿ ಬಳಿ ಆರ್‌ಯುಬಿ ನಿರ್ಮಿಸಿದರೆ ತಳ್ಳುವ ಗಾಡಿಯವರಿಗೆ ತೊಂದರೆಯಾಗಲಿದೆ. ಜನರೂ ಸುತ್ತು ಬಳಸಿ ಬರುವಂತಾಗಲಿದೆ’ ಎಂದು ಆಕ್ಷೇಪಿಸಿದರು. ಆಗ ಸಚಿವರು ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಆರ್‌ಯುಬಿ ನಿರ್ಮಿಸಲು ಉದ್ದೇಶಿಸಿರುವ ಸ್ಥಳವನ್ನು ಪರಿಶೀಲಿಸಿದರು.

ಅಧಿಕಾರಿಗಳ ಹಾಗೂ ಸಂಸದರ ಬೇಡಿಕೆಗೆ ಸ್ಪಂದಿಸಿದ ಸಚಿವರು, ‘ಭಾರಿ ವಾಹನಗಳು ಸಂಚರಿಸಲು ಅವಕಾಶವಾಗುವಂತೆ ಆರ್‌ಯುಬಿ ನಿರ್ಮಿಸಬೇಕು. ಬೈಕ್‌ ಹಾಗೂ ಜನರಿಗೆ ಸಂಚರಿಸಲು ಅನುಕೂಲವಾಗುವಂತೆ ಅಶೋಕ ರೈಲ್ವೆ ಗೇಟ್‌ ಬಳಿ ಸಣ್ಣ ಕಿಂಡಿಯನ್ನು ಮಾಡಿಕೊಡಬೇಕು’ ಎಂದು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.

ಮೂಲಸೌಲಭ್ಯಕ್ಕೆ ಮನವಿ: ‘ರೈಲು ನಿಲ್ದಾಣದ ಒಂದು ಮತ್ತು ಎರಡನೇ ಪ್ಲಾಟ್‌ಫಾರ್ಮ್‌ ಕಾಮಗಾರಿಯನ್ನು ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಎರಡೂ ಕಡೆ ಎಕ್ಸಲೇಟರ್‌ ಅಳವಡಿಸಬೇಕು. ಹರಿಹರ ರೈಲುನಿಲ್ದಾಣ, ಹನುಮನಹಳ್ಳಿ ರೈಲುನಿಲ್ದಾಣ ಅಭಿವೃದ್ಧಿಗೊಳಿಸಬೇಕು. ಹರಪನಹಳ್ಳಿ ರೈಲು ನಿಲ್ದಾಣದಲ್ಲಿ ನೀರಿನ ಸೌಲಭ್ಯ ಹಾಗೂ ಬೀದಿ ದೀಪ ಕಲ್ಪಿಸಬೇಕು’ ಎಂದು ಸಿದ್ದೇಶ್ವರ ಅವರು ಸಭೆಯಲ್ಲಿ ರೈಲ್ವೆ ಸಚಿವರಿಗೆ ಮನವಿ ಮಾಡಿದರು.

ಶಾಸಕರಾದ ಎಸ್‌.ಎ. ರವೀಂದ್ರನಾಥ, ಎಸ್‌.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್‌, ಮೈಸೂರು ವಿಭಾಗದ ಡಿ.ಆರ್‌.ಎಂ ಅಪರ್ಣ ಗಾರ್ಗ್‌, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಭೂಸ್ವಾಧೀನಕ್ಕೆ ತಿಂಗಳೊಳಗೆ ಅಂತಿಮ ಅಧಿಸೂಚನೆ

‘ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗಕ್ಕೆ ಅಗತ್ಯವಿರುವ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲು ಒಂದು ತಿಂಗಳ ಒಳಗೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭರವಸೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ‘ರೈತರನ್ನು 15 ದಿನಗಳ ಒಳಗೆ ಖುದ್ದಾಗಿ ಭೇಟಿ ಮಾಡಿ ಮನವೊಲಿಸುತ್ತೇನೆ. ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಮೊದಲು ರೈತರಿಗೆ ಯೋಗ್ಯ ಪರಿಹಾರವನ್ನೂ ನೀಡಬೇಕಾಗುತ್ತದೆ’ ಎಂದು ಹೇಳಿದರು.

ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್‌, ‘ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿ 32 ಕಿ.ಮೀ ರೈಲ್ವೆ ಹಳಿ ಬರಲಿದೆ. 17 ಹಳ್ಳಿಗಳ ನಡುವೆ ಮಾರ್ಗ ಹಾಯ್ದು ಹೋಗಲಿದೆ. 209 ಎಕರೆ ಜಮೀನಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಹೆಚ್ಚುವರಿಯಾಗಿ ಇನ್ನೂ 32 ಎಕರೆ ಜಮೀನು ಅಗತ್ಯವಿದ್ದು, ಅದಕ್ಕೂ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಶಿವಮೊಗ್ಗ–ಹರಿಹರ ರೈಲು ಮಾರ್ಗ ನಿರ್ಮಾಣಕ್ಕೆ ಇನ್ನೂ ಹಣ ಮಂಜೂರಾಗದೇ ಇರುವುದರಿಂದ ಇನ್ನೂ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸಚಿವರಿಗೆ ವಿವರಿಸಿದರು.

‘ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಮಾರ್ಗಕ್ಕೆ 1,349 ಎಕರೆ ಅಗತ್ಯವಿದೆ. ಮೊದಲನೇ ಹಂತದಲ್ಲಿ 27 ಹಳ್ಳಿಗಳಲ್ಲಿನ 534 ಎಕರೆ ಭೂಸ್ವಾಧೀನ ಪಡಿಸಿಕೊಳ್ಳಲಾಗುವುದು. ಈಗಾಗಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ’ ಎಂದು ಭೂಸ್ವಾಧೀನಾಧಿಕಾರಿ ಸರೋಜ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ನಾಲ್ಕು ತಿಂಗಳ ಒಳಗೆ ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಮಾರ್ಗಕ್ಕೆ ಅಗತ್ಯವಿರುವ ಜಮೀನನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕು. ಈ ವರ್ಷವೇ ಕಾಮಗಾರಿ ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ರೈಲ್ವೆ ಮಾರ್ಗಕ್ಕೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ಬೇಗನೆ ಹಸ್ತಾಂತರಿಸಬೇಕು. ಇದಕ್ಕೆ ಪೂರಕವಾಗಿ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆಯನ್ನು ಬೇಗನೆ ಪೂರ್ಣಗೊಳಿಸಬೇಕು’ ಎಂದು ಸುರೇಶ ಅಂಗಡಿ ಹೇಳಿದರು.

‘ಪ್ರಧಾನಿ ಮೋದಿ ನೇತೃತ್ವದಲ್ಲಿ ರೈಲ್ವೆ ಇಲಾಖೆಯು ಪ್ರಯಾಣಿಕರ ಸುರಕ್ಷತೆ, ಸಮಯ ಪರಿಪಾಲನೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುತ್ತಿದೆ. ಪ್ರಯಾಣಿಕರೂ ರೈಲು ನಿಲ್ದಾಣ ಹಾಗೂ ರೈಲು ಬೋಗಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT