ವೇಟ್‌ಲಿಫ್ಟಿಂಗ್‌: ಸಾಧನೆಗೆ ತೊಡಕಾಗದ ಅಂಗ ವೈಕಲ್ಯ

ಗುರುವಾರ , ಏಪ್ರಿಲ್ 25, 2019
32 °C
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿಯಾದ ಸದ್ದಾಂ ಹುಸೇನ್‌

ವೇಟ್‌ಲಿಫ್ಟಿಂಗ್‌: ಸಾಧನೆಗೆ ತೊಡಕಾಗದ ಅಂಗ ವೈಕಲ್ಯ

Published:
Updated:
Prajavani

ದಾವಣಗೆರೆ: ಸಾಧನೆ ಮಾಡುವ ಮನಸ್ಸು ಮತ್ತು ನಿರಂತರ ಪ್ರಯತ್ನ ಇದ್ದರೆ ಎಲ್ಲ ಅಡೆತಡೆಗಳನ್ನು ಮೀರಬಹುದು ಎಂಬುದಕ್ಕೆ ಇಲ್ಲಿನ ಸದ್ದಾಂ ಹುಸೇನ್‌ ಸಾಕ್ಷಿ. ಅಂಗವಿಕಲನಾದರೂ ಅಂಗವಿಕಲರಲ್ಲದವರ ಜತೆಗೆ ಸ್ಪರ್ಧೆ ಮಾಡಿ ವೇಟ್‌ಲಿಫ್ಟಿಂಗ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇಲ್ಲಿನ ಬೂದಾಳ್‌ ರಸ್ತೆ ಎಸ್‌ಪಿಎಸ್‌ ನಗರದ ಕೂಲಿ ಕೆಲಸ ಮಾಡುವ ಅಬ್ದುಲ್‌ ಮುನಾಪ್‌ ಸಾಬ್‌ ಮತ್ತು ಫಾತಿಮಾಬಿ ದಂಪತಿಯ ಮಗನಾದ ಸದ್ದಾಂ ಹುಸೇನ್‌ ನಗರದ ಹೋಟೆಲ್‌ ಒಂದರಲ್ಲಿ ಕೆಲಸ ಮಾಡುತ್ತಲೇ ಈ ಸಾಧನೆ ಮಾಡಿದ್ದಾರೆ.

ಕರ್ನಾಟಕ ಸ್ಟೇಟ್‌ ಸ್ಟ್ರೆಂತ್‌ ಲಿಫ್ಟಿಂಗ್‌ ಅಸೋಸಿಯೇಶನ್‌ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬೆಂಚ್‌ಪ್ರೆಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಪಂಜಾಬಿನಲ್ಲಿ ವಾರದ ಹಿಂದೆ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಇತರ 21 ಮಂದಿ ಜತೆಗೆ ಪ್ರತಿನಿಧಿಸಿದ್ದರು. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸದ್ದಾಂ ಒಬ್ಬರೇ ಅಂಗವಿಕಲರಾಗಿದ್ದರು. ಅದರೂ ಛಲ ಬಿಡದೇ ಸ್ಪರ್ಧಿಸಿ 60 ಕೆ.ಜಿ. ಒಳಗಿನ ಬೆಂಚ್‌ಪ್ರೆಸ್‌ನಲ್ಲಿ 67.5 ಕೆ.ಜಿ. ಎತ್ತಿ ದ್ವಿತೀಯ ಸ್ಥಾನ ಪಡೆದು, ಅಂತರರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಪಂಜಕುಸ್ತಿಯಲ್ಲೂ ಸಾಧನೆ: ಸದ್ದಾಂ ಹುಸೇನ್‌ ಪಂಜ ಕುಸ್ತಿಯಲ್ಲಿ ಕೂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆದರೆ, ಇದು ಅಂಗವಿಕಲರ ನಡುವಿನ ಸ್ಪರ್ಧೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ರಾಜ್ಯಮಟ್ಟದ ಏಳನೇ ಆರ್ಮ್‌ ರೆಸ್ಲಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಅಂಗವಿಕಲರ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಜೂನ್‌ 13ರಂದು ಚಂಡಿಗಢದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಿಸ್ಮಿಲ್ಲಾ ಪ್ರೇರಣೆ: ‘ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹಾವೇರಿಗೆ ತೆರೆಳಿದ್ದೆ. ಅಲ್ಲಿ ಬಿಸ್ಮಿಲ್ಲಾ ಎಂಬ ಅಂಗವಿಕಲ ಮಹಿಳೆ ಸಿಕ್ಕಿದ್ದರು. ಅವರೂ ಕ್ರೀಡಾಪಟು. ಅಲ್ಲದೇ ಅಲ್ಲಿನ ಅಂಗವಿಕಲರ ಸಂಘದ ಅಧ್ಯಕ್ಷರೂ ಆಗಿದ್ದರು. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು. ಆನಂತರ ಹರಿಹರದ ಬ್ರದರ್ಸ್‌ ಜಿಮ್‌ನಲ್ಲಿ ಅಭ್ಯಾಸ ಆರಂಭಿಸಿದರು. ಮಹಮ್ಮದ್‌ ರಫೀಕ್‌ ತರಬೇತುದಾರರಾಗಿದ್ದಾರೆ’ ಎಂದು ಸದ್ದಾಂ ಹುಸೇನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹೋಟೆಲ್‌ ಉದ್ಯೋಗಿ: ಹರಿಹರ ಲಿಂಗೇಶ್ವರ ಸರ್ಕಾರಿ ವಸತಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ, ಹೈಸ್ಕೂಲ್‌ ಫೀಲ್ಡ್‌ನಲ್ಲಿ ಪಿಯು ಹಾಗೂ ಎಂಎಸ್‌ಬಿ ಕಾಲೇಜಿನಲ್ಲಿ ಬಿ.ಎ. ಮುಗಿಸಿದ ಬಳಿಕ ಸದ್ದಾಂ ಸ್ವಲ್ಪ ಸಮಯ ಬೆಂಗಳೂರು ರಾಜಾಜೀನಗರದಲ್ಲಿ ಕಾಲ್‌ಸೆಂಟರ್‌ ಒಂದರಲ್ಲಿ ಕೆಲಸ ಮಾಡಿದ್ದರು. ಬಳಿಕ ದಾವಣಗೆರೆಗೆ ಮರಳಿದ ಅವರು ಪೂಜಾ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಸಂಜೆ 1 ಗಂಟೆ ವೇಟ್‌ಲಿಫ್ಟಿಂಗ್‌ ಮತ್ತು ಪಂಜಕುಸ್ತಿ ಅಭ್ಯಾಸ ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !