ಶುಕ್ರವಾರ, ಆಗಸ್ಟ್ 6, 2021
22 °C
ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ ಎಚ್ಚರಿಕೆ

ಸಫಾಯಿ ಕರ್ಮಚಾರಿಗೆ ತೊಂದರೆಯಾದರೆ ಅಧಿಕಾರಿಗೆ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಈಗಲೂ ಅಲ್ಲಲ್ಲಿ ಮ್ಯಾನ್‌ಹೋಲ್‌ಗಳಿಗೆ ಸಪಾಯಿ ಕರ್ಮಾಚಾರಿಗಳನ್ನು ಇಳಿಸಿರುವ, ಅದರಿಂದ ಮರಣ ಉಂಟಾಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇನ್ನು ಮುಂದೆ ನಿಯಮ ಮೀರಿದರೆ, ತಪ್ಪು ಮಾಡಿದರೆ ಅಂಥ ಅಧಿಕಾರಿಯ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗುವುದು. ತಪ್ಪು ಮಾಡಿರುವುದು ರುಜುವಾತುಗೊಂಡರೆ ದಂಡ ಮತ್ತು 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಎಚ್ಚರಿಕೆ ನೀಡಿದ್ದಾರೆ.

ಸಫಾಯಿ ಕರ್ಮಚಾರಿಗಳ ಕುಂದು ಕೊರತೆ ಆಲಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮ್ಯಾನ್‌ವಲ್‌ ಸ್ಕ್ಯಾವೆಂಜರ್ಸ್‌ಗೆ ಸಂಬಂಧಿಸಿದ ಕಾಯ್ದೆಯನ್ನು ಮೊದಲು ಎಲ್ಲ ಅಧಿಕಾರಿಗಳು ತಿಳಿದುಕೊಳ್ಳಬೇಕು. ಗ್ರಾಮ ಪಂಚಾಯಿತಿಯಲ್ಲಿ ಇರುವ ಪಿಡಿಒಗಳಿಂದ ಜಿಲ್ಲಾಧಿಕಾರಿ ವರೆಗೆ ಎಲ್ಲರಿಗೂ ಮಾಹಿತಿ ಇದ್ದರೆ ಯಾವುದು ಸರಿ? ಯಾವುದು ತಪ್ಪು ಎಂಬುದು ತಿಳಿಯುತ್ತದೆ ಎಂದು ಹೇಳಿದರು.

ಈಚೆಗೆ ಶೌಚಗುಂಡಿಗೆ ಇಳಿದು ಕಲಬುರ್ಗಿಯಲ್ಲಿ ಇಬ್ಬರು, ರಾಮನಗರದಲ್ಲಿ ಮೂವರು ಮೃತಪಟ್ಟಿದ್ದಾರೆ. ಶೌಚಗುಂಡಿ, ಕೊಳಚೆಗುಂಡಿಗಳಿಗೆ ಇಳಿಸಬೇಕಿದ್ದರೆ 42 ಪರಿಕರಗಳನ್ನು ಒದಗಿಸಿರಬೇಕು ಎಂಬುದು ಅಧಿಕಾರಿಗಳಿಗೆ, ಇಳಿಸುವವರಿಗೆ ತಿಳಿದಿಲ್ಲ. ಈಚೆಗೆ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಕೊಳಚೆಗುಂಡಿ ಸ್ವಚ್ಛತೆಗಾಗಿ ಮಹಿಳೆಯೊಬ್ಬರನ್ನು ಇಳಿಸಲಾಗಿತ್ತು. ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವ ಕೆಲಸ ಆಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 5080 ಮ್ಯಾನುವೆಲ್ ಸ್ಕ್ಯಾವೆಂಜರ್ ಕಾರ್ಮಿಕರನ್ನು ಗುರುತಿಸಲಾಗಿದೆ. ಅವರೆಲ್ಲರೂ 2013ರ ಮುಂಚೆ ಕೆಲಸ ಮಾಡುತ್ತಿದ್ದವರಾಗಿದ್ದಾರೆ. ಎನ್‍ಎಸ್‌ಕೆಎಫ್‌ಡಿಸಿಯಿಂದ ₹ 40 ಸಾವಿರ ಅವರ ಖಾತೆಗಳಿಗೆ ನೇರವಾಗಿ ಜಮಾ ಆಗಲಿದೆ ಎಂದರು.

1972ರಲ್ಲಿ ಬಸವಲಿಂಗಪ್ಪನವರು ರಾಜ್ಯದಲ್ಲಿ ದೇವರಾಜ ಅರಸು ಸರ್ಕಾರದಲ್ಲಿ ಮಲ ಹೋರುವ ಪದ್ದತಿಯನ್ನು ನಿಷೇಧ ಮಾಡಿದರು. ಇಷ್ಟೆಲ್ಲಾ ಆದ ನಂತರ 2013ರಲ್ಲಿ ಸಂಸತ್ತಿನಲ್ಲಿ ಕಾಯಿದೆ ಜಾರಿಗೊಳಿಸಲಾಗಿದೆ. ಅದರ ಪ್ರಕಾರ ಮ್ಯಾನುವೆಲ್ ಸ್ಕ್ಯಾವೆಂಜರ್‌ಗಳನ್ನು ಮಲದ ಗುಂಡಿಯಲ್ಲಿ ಇಳಿಸುವಂತಿಲ್ಲ. ಆದರೂ ಅನೇಕ ಕಡೆಗಳಲ್ಲಿ ಇಳಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೇಯರ್‌ ಎಸ್‌.ಟಿ. ವೀರೇಶ್‌, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ರೂಪಾ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮಾ, ಪಾಲಿಕೆ ಆಯಕ್ತ ವಿಶ್ವನಾಥ ಮುದಜ್ಜಿ ಅವರೂ ಇದ್ದರು.

‘ಜಿಲ್ಲೆಯಲ್ಲಿ ಆಗದ ಪುನರ್ವಸತಿ ವ್ಯವಸ್ಥೆ’

ಜಿಲ್ಲೆಯಲ್ಲಿ 402 ಕಾರ್ಮಿಕರಿದ್ದಾರೆ ಎಂದು ಗುರುತಿಸಲಾಗಿದೆ. ಕಾಯ್ದೆಯಂತೆ ಇವರೆಲ್ಲರಿಗೂ 90 ದಿನದೊಳಗೆ ಪುನರ್ವಸತಿ ಮಾಡಬೇಕಾಗಿತ್ತು. ಆದರೆ ಗುರುತಿಸಿ ಎರಡು ವರ್ಷ ಕಳೆದರೂ ಪುನರ್ವಸತಿ ಕಲ್ಪಿಸಿಲ್ಲ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಕರ್ಮಚಾರಿಗಳು ಮತ್ತೆ ಅದೇ ಕೆಲಸಕ್ಕೆ ಹೋಗದಂತೆ ಮಾಡಬೇಕು. ಅದಕ್ಕಾಗಿ ಕೌಶಲಾಭಿವೃದ್ಧಿ ಅಡಿಯಲ್ಲಿ ಅವರಿಗೆ ಬೇಕಿರುವ ತರಬೇತಿ ನೀಡಬೇಕು. ಮನೆಗಳನ್ನು ನಿರ್ಮಿಸಿಕೊಡಬೇಕು. ಅವರ ಮಕ್ಕಳಿಗೆ ವಿದ್ಯೆ ನೀಡಬೇಕು. ಪ್ರತಿಷ್ಠಿತ ಶಾಲೆಗಳಲ್ಲಿ ಇಂತಿಷ್ಟು ಸೀಟುಗಳನ್ನು ನೀಡಬೇಕೆನ್ನುವ ನಿಯಮ ಇದೆ. ಅವೆಲ್ಲವನ್ನೂ ಪಾಲನೆ ಮಾಡಬೇಕು ಎಂದು ಸೂಚಿಸಿದರು.

‘ದಾವಣಗೆರೆಯಲ್ಲಿ ಪೌರಕಾರ್ಮಿಕರಿಗಾಗಿ 389 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮೂರು ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದ್ದೇನೆ’ ಎಂದು ತಿಳಿಸಿದರು.

‘ಪರಿಕರವಿಲ್ಲದೇ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು’

‘ಹರಿಹರ ಪಟ್ಟಣದಲ್ಲಿ ಕೆಲವು ಪೌರಕಾರ್ಮಿಕರನ್ನು ಭೇಟಿ ಮಾಡಿದೆ. ಅವರು ಕೆಲಸದ ಅವಧಿಯಲ್ಲಿ ಮುಂಜಾಗ್ರತೆ ವಹಿಸದೆ, ಅಗತ್ಯ ಪರಿಕರಗಳನ್ನು ಬಳಸದೆ ಕಾರ್ಯನಿರ್ವಹಿಸುತ್ತಿದ್ದುದು ಕಂಡುಬಂದಿದೆ. ಈ ರೀತಿ ಆಗದಂತೆ ಪೌರಕಾರ್ಮಿಕರಿಗೆ ಅಗತ್ಯ ಪರಿಕರಗಳನ್ನು ನೀಡಿ, ಅದನ್ನು ಬಳಸಿಯೇ ಕರ್ತವ್ಯ ನಿರ್ವಹಿಸುವಂತಾಗಬೇಕು. ನಿಗದಿತ ಅವಧಿಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿ, 6 ತಿಂಗಳಿಗೊಮ್ಮೆ ಮಾಸ್ಟರ್ ಹೆಲ್ತ್ ಚೆಕಪ್ ಮಾಡಿಸಬೇಕು. ಸಮವಸ್ತ್ರ, ಗ್ಲೌಸ್, ಗಮ್ ಬೂಟ್ ಎಲ್ಲವನ್ನೂ ಬಳಸಿಯೇ ಕೆಲಸ ಮಾಡುವ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಸಭೆಯಲ್ಲಿ ತಿಳಿಸಿದರು.

ಎಲ್ಲರಿಗೂ ಕಡ್ಡಾಯವಾಗಿ ಜೀವ ವಿಮೆ ಮಾಡಿಸಬೇಕು. ನಿರಂತರವಾಗಿ ಆರೋಗ್ಯ ತಪಾಸಣೆ ಮಾಡಬೇಕು. ಕೋವಿಡ್‌ ನಿರೋಧಕ ಲಸಿಕೆ ಮೊದಲ ಡೋಸ್‌ ಎಲ್ಲರಿಗೂ ಆಗಿದ್ದು, ಎರಡನೇ ಡೋಸ್‌ ಎಲ್ಲರಿಗೆ ಹಾಕಿಸಬೇಕು. ಪೌರಕಾರ್ಮಿಕರಿಗೆ ವಾರ್ಡ್‌ಗಳಲ್ಲಿ ವಿಶ್ರಾಂತಿ ಕೊಠಡಿ ಇರಬೇಕು. ಬಟ್ಟೆ ಬದಲಾಯಿಸಲು, ಸ್ವಚ್ಛತೆಗೆ ವಿಶ್ರಾಂತಿ ಕೊಠಡಿ ಅಗತ್ಯ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.