ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಯೋಗದಿಂದ ಒತ್ತಡ ನಿರ್ವಹಣೆ: ಮುರುಘಶ್ರೀ

Last Updated 18 ಜನವರಿ 2019, 12:26 IST
ಅಕ್ಷರ ಗಾತ್ರ

ದಾವಣಗೆರೆ: ದೇಶದಲ್ಲಿ ಹೆಚ್ಚಿನ ಜನ ಒತ್ತಡದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಈ ಚಕ್ರವ್ಯೂಹದಿಂದ ತಪ್ಪಿಸಿಕೊಳ್ಳಲು ಶಿವಯೋಗ ಸಾಧನೆ ಉತ್ತಮ ಮಾರ್ಗವಾಗಿದೆ ಎಂದು ಚಿತ್ರದುರ್ಗದ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಲಿಂಗೈಕ್ಯ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯ 62ನೇ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ‘ಶರಣ ಸಂಸ್ಕೃತಿ ಉತ್ಸವ’ದ ಮೊದಲನೇ ದಿನವಾದ ಶುಕ್ರವಾರ ‘ಸಹಜ ಶಿವಯೋಗ’ ಕಾರ್ಯಕ್ರಮದಲ್ಲಿ ಅವರು ತ್ಯಾತ್ಯಕ್ಷಿಕೆ ಮೂಲಕ ಆಚರಣೆಯ ವಿಧಿ–ವಿಧಾನಗಳ ಬಗ್ಗೆ ವಿವರಿಸಿದರು.

‘ಒತ್ತಡವು ಕಣ್ಣಿಗೆ ಕಾಣದ ಚಿತಾಗಾರ. ಇದನ್ನು ಎಲ್ಲಾ ರೋಗಗಳ ಪಿತಾಮಹ ಎನ್ನಲಾಗುತ್ತದೆ. ವಿಜ್ಞಾನಿಯಿಂದ ಸ್ವಾಮೀಜಿವರೆಗೆ ಎಲ್ಲಾ ವರ್ಗದ ಜನ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ರೋಗವು ಕುಟುಂಬದ ಜೊತೆಗೆ ಸಮಾಜದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ’ ಎಂದ ಅವರು, ವೈಫಲ್ಯದ ಭೀತಿಯನ್ನು ನಿವಾರಿಸಿದಾಗ ಪ್ರತಿ ದಿನವೂ ಮುಕ್ತಿ ಹೊಂದಬಹುದಾಗಿದೆ’ ಎಂದರು.

‘2020ರ ವೇಳೆಗೆ ಭಾರತವು ಜಗತ್ತಿನಲ್ಲಿ ಅತಿ ಹೆಚ್ಚು ಮಧುಮೇಹಿಗಳ ದೇಶವಾಗುವ ಸಾಧ್ಯತೆ ಇದೆ. ಆಹಾರ ಪದ್ಧತಿ ಹಾಗೂ ಜೀವನ ಶೈಲಿ ಬದಲಾದರೆ ಒತ್ತಡ ಕಡಿಮೆಯಾಗಲಿದೆ. ಸಹನೆ, ಶಾಂತಿಯನ್ನು ಪಡೆಯಲು ಸತ್ಸಂಗ ಅಗತ್ಯವಾಗಿದೆ. ಬಸವಾದಿ ಶರಣರು ಕೊಟ್ಟ ಸಹಜ ಶಿವಯೋಗ ಇದಕ್ಕೆ ಒಳ್ಳೆಯ ಮದ್ದು’ ಎಂದು ಹೇಳಿದರು.

ಗೆಲ್ಲುವೆ ಮತ್ತು ಜಯಿಸುವ ಎಂಬ ಸಕಾರಾತ್ಮಕ ಮನೋಭಾವ ಹೊಂದಿ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಒತ್ತಡ ನಿವಾರಣೆಯಾಗಲಿದೆ ಎಂದರು.

ಬಸವತತ್ವ ಧ್ವಜಾರೋಹಣ ನೆರವೇರಿಸಿದ ಮಂಡ್ಯ ಜಿಲ್ಲೆಯ ಚೆಕ್‌ ಡ್ಯಾಂ ನಿರ್ಮಾತೃ ಕಾಮೇಗೌಡ, ‘ಗುರುವಿನ ದಯೆ ನಮ್ಮ ಮೇಲೆ ಇದ್ದರೆ ಅಸತ್ಯ, ಅಧರ್ಮ ಅಳಿಯುತ್ತದೆ. ಗುರುವಿನ ಸ್ಮರಣೆ ಮಾಡುವುದು ಅಗತ್ಯ’ ಎಂದು ಹೇಳಿದರು.

ಚನ್ನಗಿರಿ ವಿರಕ್ತಮಠದ ಜಯದೇವ ಸ್ವಾಮೀಜಿ, ಖಜೂರಿಯ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ, ಗುರುಮಠಕಲ್‌ನ ಶಾಂತವೀರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಹಾವೇರಿ ಬಸವಕೇಂದ್ರದ ಮುರಿಗೆಪ್ಪ ಕಡೆಕೊಪ್ಪ, ಕವಿ ಮಹ್ಮದ್ ಗೌಸ್ಪೀರ್ ಮಹಮ್ಮದ್‌ ಹಾಜರಿದ್ದರು. ನೂರಾರು ಭಕ್ತರು ಸಹಜ ಶಿವಯೋಗದಲ್ಲಿ ಪಾಲ್ಗೊಂಡಿದ್ದರು. ಜ.ಮು.ರಾ ತಂಡದ ಕಲಾವಿದರು ಸಂಗೀತ ಸೇವೆ ನೀಡಿದರು.

‘ಕೆರೆ ಸಂರಕ್ಷಣೆಗೆ ಸ್ವಾಮೀಜಿಗಳೂ ಕೈಜೋಡಿಸಲಿ’

ಬಸವ ಕೇಂದ್ರ ಹಾಗೂ ವಿರಕ್ತಮಠಗಳ ಸ್ವಾಮೀಜಿಗಳು ಕೆರೆ–ಕಟ್ಟೆಗಳನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ಮಂಡ್ಯ ಜಿಲ್ಲೆಯ ಚೆಕ್‌ ಡ್ಯಾಂ ನಿರ್ಮಾತೃ ಕಲ್ಮನೆ ಕಾಮೇಗೌಡ ಅವರು ಮುರುಘಾ ಶರಣರಿಗೆ ಮನವಿ ಸಲ್ಲಿಸಿದರು.

‘ದೇಶದಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕೆರೆ–ಕಟ್ಟೆಗಳನ್ನು ಮುಚ್ಚುತ್ತಿದ್ದಾನೆ. ಇದರಿಂದಾಗಿ ಪ್ರಾಣಿ–ಪಕ್ಷಿಗಳಿಗೆ ಕುಡಿಯುವ ನೀರು ಸರಿಯಾಗಿ ಸಿಗುತ್ತಿಲ್ಲ. ನಾನೊಬ್ಬನೇ ಚೆಕ್‌ಡ್ಯಾಂ ನಿರ್ಮಿಸಿದರೆ ಸಾಲದು; ಪ್ರತಿಯೊಬ್ಬನೂ ಅಂತರ್ಜಲ ವೃದ್ಧಿಗೆ ಪಣ ತೊಡಬೇಕು. ಕೆರೆ–ಕಟ್ಟೆಗಳನ್ನು ಉಳಿಸಬೇಕು’ ಎಂದು ಅವರು ಪ್ರತಿಪಾದಿಸಿದರು.

‘ವಿರಕ್ತಮಠಗಳ ಸ್ವಾಮೀಜಿಗಳು ಕೆರೆ–ಕಟ್ಟೆಗಳನ್ನು ಸಂರಕ್ಷಿಸಲು ನಮ್ಮೊಂದಿಗೆ ಕೈಜೋಡಿಸಬೇಕು. ‘ಕೆರೆ–ಕಟ್ಟೆ ಉಳಿಸಿ; ಪ್ರಾಣಿ ಪಕ್ಷಿಗಳ ರಕ್ಷಿಸಿ’ ಅಭಿಯಾನಕ್ಕೆ ಸಹಕಾರ ನೀಡಬೇಕು’ ಎಂದು ಕಾಮೇಗೌಡ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT