ದಾವಣಗೆರೆ: ‘ರಾಮ ರಾಮ ಎಂದು ನುಡಿದೀತಲೆ
ಮುತ್ತೈದೆಯರಿಗೆ ಮಹಾತಾಯಿ ಉಡಿ ತುಂಬಿಯಾಳಲೆ
ನರಲೋಕದ ಜನಕೆ ಆನೆ ಕಿರೀಟ ಇಟ್ಟೀತಲೆ
ಮಹಾತಾಯಿ ಬೇರುಸೊಪ್ಪು ಬೀಸಿತ್ತಲೆ ಎಚ್ಚರ...
ಶ್ರಾವಣ ಮಾಸದ ಕಡೇ ಸೋಮವಾರ ನಗರದ ಇತಿಹಾಸ ಪ್ರಸಿದ್ಧ ಆನೆಕೊಂಡದ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಕಾರ್ಣೀಕ ನುಡಿಯುತ್ತಿದ್ದಂತೆ ಜನರು ಸಂಭ್ರಮಿಸಿದರು. ಕಾರ್ಣೀಕ ನುಡಿಯುತ್ತಿದ್ದಂತೆ ಅಲ್ಲಿ ನೆರೆದಿದ್ದ ಭಕ್ತರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡರು. ಮುಂದಿನ ದಿನಗಳಲ್ಲಿ ಇದು ಶುಭದ ಸಂಕೇತ ಎಂದು ವಿಶ್ಲೇಷಿಸಲಾಗುತ್ತಿದೆ.
ಹೂಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಬಾತಿ ನೀಲಾನಹಳ್ಳಿಯ ಆಂಜನೇಯಸ್ವಾಮಿ, ಆನೆಕೊಂಡದ ಬಸವೇಶ್ವರಸ್ವಾಮಿ, ನಿಟುವಳ್ಳಿಯ ದುರ್ಗಾಂಬಿಕಾದೇವಿ ಸೇರಿದಂತೆ ಮತ್ತಿತರ ದೇವಾಲಯಗಳ ದೇವರ ಉತ್ಸವಮೂರ್ತಿಗಳು ಆಗಮಿಸಿದ ಬಳಿಕ ಅಪಾರ ಭಕ್ತ ಸಮೂಹದ ನಡುವೆ ಕಾರ್ಣೀಕ ನಡೆಯಿತು.
ದೇವಸ್ಥಾನಕ್ಕೆ ಕುಟುಂಬ ಸಮೇತ ಆಗಮಿಸಿದ ಭಕ್ತರು ದೇವರಿಗೆ ಹಣ್ಣು-ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು. ಕಾರ್ಣೀಕ ಮಹೋತ್ಸವಕ್ಕೆ ಬಂದ ದೇವರುಗಳಿಗೆ ಕೈಮುಗಿದು ಭಕ್ತಿಯಿಂದ ಪ್ರಾರ್ಥಿಸಿದರು. ಕುಟುಂಬದವರು ಮಕ್ಕಳೊಂದಿಗೆ ಜಾತ್ರೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಜಾತ್ರೆ ಪ್ರಯುಕ್ತ ಬಂಬೂಬಜಾರ್ ರಸ್ತೆಯಲ್ಲಿ ಇರಿಸಲಾಗಿದ್ದ ಅಂಗಡಿಗಳಲ್ಲಿ ಖಾರ ಮಂಡಕ್ಕಿ, ಬೆಂಡು ಬತ್ತಾಸು, ಜಿಲೇಬಿ ಮೈಸೂರು ಪಾಕ್ ಮೊದಲಾದ ತಿನಿಸುಗಳು ಹಾಗೂ ಬಳೆ, ಸರ, ಕಿವಿಯೋಲೆ ಮೊದಲಾದ ವಸ್ತುಗಳು, ಚಿಕ್ಕಮಕ್ಕಳ ಆಟಿಕೆಗಳ ಖರೀದಿಯೂ ಜೋರಾಗಿತ್ತು.
ಆನೆಕೊಂಡದ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಮೂರು ದಿನಗಳಿಂದಲೇ ಸಿದ್ಧತೆ ನಡೆದಿದ್ದವು. ಸೆ.9ರಂದು ಶನಿದೇವರ ಪುರಾಣ, ಸೆ.10ರಂದು ಅನ್ನ ಸಂತರ್ಪಣೆ ಹಾಗೂ ರಾತ್ರಿ ಭಜನಾ ಕಾರ್ಯಕ್ರಮಗಳು ನಡೆದವು.
ವೆಂಕಾಭೋವಿ ಕಾಲೊನಿಯ ಕನಕದುರ್ಗದೇವಿ, ಕೊರಮರ ಕಾಲೊನಿಯ ವೆಂಕಟೇಶ್ವರ ದೇವರು, ಕೊರಚರಹಟ್ಟಿಯ ಬಸವಪಟ್ಟಣದ ದುರುಗಮ್ಮ, ಎಸ್.ಎಂ. ಕೃಷ್ಣ ನಗರದ ಗಾಳಿ ದುರ್ಗಮ್ಮ, ಕುರುಬರಕೇರಿಯ ಅರಿಕೇರಮ್ಮ, ಗಾಂಧಿನಗರದ ಮಲ್ಲಾಡಿ ಚೌಡೇಶ್ವರಿ ದೇವರು, ಮುದ್ದಾಭೋವಿ ಕಾಲೊನಿಯ ನೀರುಮನೆ ಎಲ್ಲಮ್ಮದೇವರು, ಎಸ್‌ಪಿಎಸ್ ನಗರದ ಕುಕ್ಕವಾಡೇಶ್ವರಿದೇವಿ, ಹುಲಿಗೆಮ್ಮ ದೇವಿ, ಎಸ್.ಎಸ್.ಬಡಾವಣೆಯ ಭೂತಪ್ಪ ದೇವರು. ಎಲೆಬೇತೂರಿನ ದೇವಿದುರ್ಗಮ್ಮ, ಮುದ್ಧಾಭೋವಿ ಕಾಲೊನಿಯ ವೆಂಕಟೇಶ್ವರ ದೇವರು, ಬಸಾಪುರದ ಗೋಚಂದ್ರ ಮಾರೆಮ್ಮ ದೇವರುಗಳು ಭಾಗವಹಿಸಿದ್ದವು.
Cut-off box - ಸಂಕ್ಲೀಪುರದಲ್ಲಿ ಕಾರ್ಣಿಕೋತ್ಸವ ಹರಿಹರ ತಾಲ್ಲೂಕಿನ ಸಂಕ್ಲೀಪುರದಲ್ಲಿ ಸೋಮವಾರ ನಡೆದ ಕಾರ್ಣೀಕೋತ್ಸವದಲ್ಲಿ ಮಲ್ಲನಾಯಕನಹಳ್ಳಿ ಬಸವೇಶ್ವರ ದೇವರ ಕಾರ್ಣಿಕೋತ್ಸವ ಸಂಭ್ರಮದಿಂದ ಜರುಗಿತು. ಲಿಂಗಕ್ಕೆ ಮುತ್ತಿನ ಗಿಣಿ ಕುಕ್ಕಿತಲೆ.. ಅನ್ನ ನೀಡು ಸಂತೃಪ್ತಿ’ ಎಂದು ಕಾರ್ಣಿಕ ನುಡಿಯಿತು. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬೆಳೆಯಾಗುವ ನಿರೀಕ್ಷೆ ಇದೆ’ ಎಂದು ವಿಶ್ಲೇಷಿಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.