ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಸ್ವೆಹಳ್ಳಿ: ಕೆಸರುಗದ್ದೆಯಂತಾದ ಮೈದಾನ; ಜನರ ಪರದಾಟ

ನೀರಿನ ಘಟಕ, ಕೃಷಿ ಸಹಕಾರ ಸಂಘ, ಹಾಲಿನ ಡೇರಿ, ಕರ್ನಾಟಕ ಪಬ್ಲಿಕ್‌ ಶಾಲೆಗೆ ಇದೇ ದಾರಿ
Last Updated 13 ಜುಲೈ 2022, 2:27 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ಇಲ್ಲಿಯ ಶುದ್ಧ ಕುಡಿಯುವ ನೀರಿನ ಘಟಕ, ಕೃಷಿ ಪತ್ತಿನ ಸಹಕಾರ ಸಂಘ, ಹಾಲಿನ ಡೇರಿ, ಕರ್ನಾಟಕ ಪಬ್ಲಿಕ್‌ ಶಾಲೆಗೆ ದಾರಿ ಇವೆಲ್ಲವುಗಳ ನಡುವೆ ಇರುವ ಮೈದಾನವು ಕೆಸರು ಗದ್ದೆಯಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜನರು ಕುಡಿಯುವ ನೀರು ತರಲು ಕ್ಯಾನ್‌ಗಳೊಂದಿಗೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಹೊದರೆ ಮೈಯೆಲ್ಲ ಕೆಸರುಮಯವಾಗುತ್ತದೆ. ಕ್ಯಾನ್‌ ಹೊತ್ತು ಬರುವಾಗ ನಾವು ಹಲವು ಬಾರಿ ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದೇವೆ’ ಎಂದು ಬಸವರಾಜಪ್ಪದೂರಿದರು.

‘ನಾವು ದಿನನಿತ್ಯ ಇಲ್ಲಿ ಹಾಲು ಹಾಕಲು ಬರುತ್ತೇವೆ. ಹಾಲಿನ ಡೇರಿಯ ಎದುರು ಕೆಸರುಗದ್ದೆಯಂತಾಗಿರುವುದರಿಂದ ಕಾಲು ಜಾರುತ್ತದೆ. ಹಲವು ಮಕ್ಕಳು ಹಾಲು ಹಾಕಲು ಬಂದಾಗ ಬಿದ್ದು ಹಾಲು ಚೆಲ್ಲಿಕೊಂಡು ಬಂದಿದ್ದಾರೆ. ಹಲವು ಬಾರಿ ಗ್ರಾಮ ಪಂಚಾಯಿತಿಗೆ ಈ ಬಗ್ಗೆ ಮನವಿ ಮಾಡಿದ್ದರೂ ಉಪಯೋಗವಾಗಿಲ್ಲ’ ಎನ್ನುತ್ತಾರೆ ಎಚ್. ಸಿದ್ದೇಶ್.‌

‘ಇದೇ ಮೈದಾನದಲ್ಲೇ ಹೋಂದಿಕೊಂಡಂತೆ ಕರ್ನಾಟಕ ಪಬ್ಲಿಕ್‌ ಶಾಲೆಯ ಪ್ರೌಢ ಮತ್ತು ಪದವಿಪೂರ್ವ ಕಾಲೇಜು ಇದೆ. ಸಮವಸ್ತ್ರ ಧರಿಸಿ ಬಂದ ಹಲವು ವಿದ್ಯಾರ್ಥಿಗಳು ಕೆಸರು ಮಾಡಿಕೊಂಡು, ಬಿದ್ದು ಮನೆಗೆ ಹೋದ ಉದಾಹರಣೆಗಳು ಇವೆ. ಈ ಕೆಸರು ಕಡಿಮೆ ಮಾಡಲು ಸೂಕ್ತ ಕ್ರಮ ವಹಿಸಬೇಕು’ ಎಂದು
ಜಿ.ಎಂ. ಕರಿಬಸಪ್ಪಒತ್ತಾಯಿಸಿದ್ದಾರೆ.

‘ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದಿನನಿತ್ಯ ಬರುವ ರೈತರು ಹಿಡಿ ಶಾಪ ಹಾಕುತ್ತ ಬರುತ್ತಾರೆ. ಇಲ್ಲಿಯೇ ನ್ಯಾಯಬೆಲೆ ಅಂಗಡಿ ಇರುವುದರಿಂದ, ಸಾಮಗ್ರಿ ಹೊತ್ತು ಕೊಂಡು ಹೋಗುವಾಗ ಹಲವರು ಬಿದ್ದು, ಸಾಮಗ್ರಿಗಳನ್ನೂ ಕೆಡವಿಕೊಂಡು ಕೆಸರು ಮೆತ್ತಿಸಿಕೊಂಡಿದ್ದಾರೆ’ ಎಂದು ಕೃಷಿ ಪತ್ತಿನ ಸಹಕಾರ ಸಂಘ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸವರಾಜ್‌ ಬಿ.ಬಿ. ತಿಳಿಸಿದರು.

ಸದ್ಯದಲ್ಲೇ ದುರಸ್ತಿ

ತಗ್ಗಾಗಿದ್ದ ಪ್ರದೇಶಕ್ಕೆ ಲ್ಯಾಂಡ್‌ ಆರ್ಮಿ ವತಿಯಿಂದ ಮುಖ್ಯಮಂತ್ರಿ ಗ್ರಾಮ ವಿಕಾಸ್‌ ಯೋಜನೆಯ ಅಡಿಯಲ್ಲಿ ಮಣ್ಣು ಹಾಕಿದ್ದಾರೆ.ಈಗ ಮಳೆ ಬಂದು ಅಲ್ಲಿ ಕೆಸರುಮಯವಾಗಿದೆ. ಗ್ರಾವಲ್‌ ಬದಲು ಮಣ್ಣು ಹಾಕಿರುವುರಿಂದ ಈ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸುವಂತೆ ಅವರಿಗೆ ಸೂಚಿಸಲಾಗಿದೆ. ಸದ್ಯದಲ್ಲಿಯೇ ಜಲ್ಲಿ ಕಲ್ಲಿನ ನುಚ್ಚಿನ ಪುಡಿಯನ್ನು ಹಾಕಿ ಸರಿಪಡಿಸಲಾಗುವುದು.

– ಪರಮೇಶ್‌ ಕೊಳ್ಳುರು, ಪಿಡಿಒ, ಸಾಸ್ವೆಹಳ್ಳಿ ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT