ಸೋಮವಾರ, ಮಾರ್ಚ್ 1, 2021
25 °C
ಮಧ್ಯಾಹ್ನದವರೆಗೆ ಹೆಚ್ಚಿದ ಸಂದಣಿ, ಮಧ್ಯಾಹ್ನ ಬಳಿಕ ಬಿಕೋ ಎನ್ನುತ್ತಿದ್ದ ರಸ್ತೆಗಳು

ಹೆದರಿದ ಜನ: ಕಂಡು ಬಂದ ನೈಜ ಲಾಕ್‌ಡೌನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಾರ್ಚ್‌ 23ರಿಂದಲೇ ಲಾಕ್‌ಡೌನ್‌ ಇದ್ದರೂ ಪೊಲೀಸರು ಲಾಠಿ ಬೀಸಿದ್ದರೂ ನಗರ ಪೂರ್ತಿ ಬಂದ್‌ ಆಗಿರಲಿಲ್ಲ. ಮಂಗಳವಾರ ಮಧ್ಯಾಹ್ನದ ಬಳಿಕ ರಸ್ತೆಗಳು ಅಕ್ಷರಶಃ ಬಿಕೋ ಎನ್ನುತ್ತಿದ್ದವು. ಲಾಕ್‌ಡೌನ್‌ನ ನೈಜ ಚಿತ್ರಣಗಳು ಕಂಡು ಬಂದವು.

ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ದಿನಸಿ, ತರಕಾರಿ, ಹಣ್ಣು, ಹಾಲು, ಔಷಧ ಮತ್ತಿತರ ಅಗತ್ಯ ವಸ್ತುಗಳನ್ನು ಒದಗಿಸಬೇಕು. ಬಳಿಕ ಎಲ್ಲ ಅಂಗಡಿಗಳನ್ನು ಬಂದ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೋಮವಾರ ಆದೇಶ ಹೊರಡಿಸಿದ್ದರು.

ಹಾಗಾಗಿ ಮಧ್ಯಾಹ್ನದ ವರೆಗೆ ಜನಸಂದಣಿ ಕಂಟೈನ್‌ಮೆಂಟ್‌ ವಲಯಗಳನ್ನು ಹೊರತುಪಡಿಸಿ ಪಾಲಿಕೆ ವ್ಯಾಪ್ತಿಯ ಎಲ್ಲೆಡೆ ಕಂಡು ಬಂತು. ಬೆಳಿಗ್ಗೆ 8 ಗಂಟೆಯ ಒಳಗೇ ನಂದಿನಿ ಹಾಲು ಖಾಲಿಯಾಗಿತ್ತು. ಹಾಗಾಗಿ ತಡವಾಗಿ ಹಾಲು ಖರೀದಿ ಮಾಡಲು ಹೋದವರು ಬರಿಗೈಯಲ್ಲಿ ವಾಪಸ್ಸಾದರು.

‘ಅಂತರ ಕಾಯ್ದುಕೊಂಡು ಖರೀದಿ ಮಾಡಿ, ಮಧ್ಯಾಹ್ನದ 1ರ ಬಳಿಕ ಯಾರೂ ಹೊರಗೆ ಬರಬೇಡಿ. ಅಂಗಡಿಗಳನ್ನು ತೆರೆಯಬೇಡಿ’ ಎಂದು ಪೊಲೀಸರು ಧ್ವನಿವರ್ಧಕದ ಮೂಲಕ ತಿಳಿಸಿದರು. ಮಧ್ಯಾಹ್ನವಾಗುತ್ತಿದ್ದಂತೆ ವ್ಯಾಪಾರಿಗಳೇ ಅಂಗಡಿಗಳ ಬಾಗಿಲು ಮುಚ್ಚಿದರು.

ಮೀನು, ಕೋಳಿ, ಮಾಂಸದ ಅಂಗಡಿಗಳಿಗೂ ಮಧ್ಯಾಹ್ನದ ವರೆಗೆ ತೆರೆಯಲು ಅವಕಾಶ ನೀಡಲಾಗಿತ್ತಾದರೂ ಎಲ್ಲಿಯೂ ತೆರೆದಿರಲಿಲ್ಲ. ಆರ್‌ಎಂಸಿ ಲಿಂಕ್‌ ರೋಡ್‌ನಲ್ಲಿ ಕೋಳಿ ಅಂಗಡಿಯವರೊಬ್ಬರಿಗೆ ಕೊರೊನಾ ಬಂದಿದೆ ಎಂಬ ಸುದ್ದಿ ಹರಿದಾಡಿದ್ದರಿಂದ ಜನರೂ ಕೋಳಿ ಅಂಗಡಿಗಳತ್ತ ತೆರೆಳಲಿಲ್ಲ.

ಅನಧಿಕೃತ ಸೀಲ್‌ಡೌನ್‌ 

ಕೊರೊನಾ ವೈರಸ್‌ ಸೋಂಕು ಪತ್ತೆಯಾದವರ ಮನೆಯ ಸುತ್ತಮುತ್ತಲಿನ 100 ಮೀಟರ್‌ ದೂರವನ್ನು ಕಂಟೈನ್‌ಮೆಂಟ್‌ ಝೋನ್‌ ಎಂದು ಗುರುತಿಸಿ ಸೀಲ್‌ಡೌನ್‌ ಮಾಡಲಾಗುತ್ತದೆ. ಅಲ್ಲಿಯ ರಸ್ತೆಗಳನ್ನು ಬಂದ್‌ ಮಾಡಲಾಗುತ್ತದೆ. ಆದರೆ ಬಹುತೇಕ ಕಡೆಗಳಲ್ಲಿ ಜನರೇ ರಸ್ತೆಗಳನ್ನು ಬಂದ್‌ ಮಾಡಿದ್ದಾರೆ. ಇದರಿಂದ ಕೆಲವು ಕಡೆ ಅದೇ ರಸ್ತೆ ನಿವಾಸಿಗಳಿಗೆ ತೊಂದೆರೆಯೂ ಆಗಿ ವಾಗ್ವಾದಗಳು ನಡೆದಿದೆ.

ಕೃಷಿ, ತೋಟಗಾರಿಕೆ ಚಟುವಟಿಕೆ ಸರಾಗ: ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗೆ ಯಾವುದೇ ನಿರ್ಬಂಧ ಹೇರಿಲ್ಲ. ಆದರೂ ಎಪಿಎಂಸಿ ಯಾರ್ಡ್‌ಗೆ ಬರುವ ರೈತರ ಸಂಖ್ಯೆ ಕಡಿಮೆಯಾಗಿದೆ.

ಕಂಟೈನ್‌ಮೆಂಟ್‌ ವಲಯಗಳಲ್ಲಿ ಅಲ್ಲಿನ ಯಾರೂ ಅಡ್ಡಾಡದಂತೆ ಅಲ್ಲಿನ ಕೆಲವು ಯುವಕರೇ ಪಹರೆ ಕಾಯುತ್ತಿರುವುದು ಕಂಡುಬಂತು. ಕ್ವಾರಂಟೈನ್‌ನಲ್ಲಿ ಇರುವವರಿಗೆ ಆಹಾರ ಒದಗಿಸುವ ಕೆಲಸವನ್ನು ಕೂಡ ಇದೇ ಯುವಕರ ತಂಡ ಮಾಡುತ್ತಿದೆ.

ಪೇಟೆ ಮಂದಿ ಹಳ್ಳಿಗೆ ದೌಡು

ನಗರ ಪ್ರದೇಶದ ಜನರು ಹಳ್ಳಿ ಕಡೆ ಹೋಗಿ ಬರುತ್ತಿರುವುದು ಹೆಚ್ಚಾಗುತ್ತಿದೆ. ಪಾಲಿಕೆ ವ್ಯಾಪ್ತಿ ಮತ್ತು ಬಫರ್‌ಝೋನ್‌ಗಳಲ್ಲಿ ಮದ್ಯ ಮಾರಾಟ ನಿಷೇಧ ಮಾಡಿರುವುದು ಕಾರಣವಾಗಿದೆ.

ಬೇರೆ ಬೇರೆ ಕಾರಣ ನೀಡಿ ಹಳ್ಳಿಗಳಿಗೆ ಹೋಗಿ ಕೆಲವರು ಮದ್ಯ ತಂದಿದ್ದಾರೆ. ಇನ್ನು ಕೆಲವರು ಹೋಗಿ ಬರುವವರಲ್ಲಿ ತರಿಸುತ್ತಿದ್ದಾರೆ. ಯಾರು ಎಷ್ಟು ತಂದರು ಎನ್ನುವುದರ ಬಗ್ಗೆಯೇ ಹಲವೆಡೆ ಚರ್ಚೆಗಳು ನಡೆಯುತ್ತಿರುವುದು ಕಂಡು ಬಂತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು