ಭಾರತ್ ಬಂದ್: ಶಾಲಾ–ಕಾಲೇಜಿಗೆ ಇಂದು ರಜೆ

ದಾವಣಗೆರೆ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್, ಎಡ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಸೋಮವಾರ ‘ಭಾರತ್ ಬಂದ್’ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಶಾಲಾ– ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಆದೇಶ ಹೊರಡಿಸಿದ್ದಾರೆ.
ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಹಲವು ಸಂಘಟನೆಗಳು ಸೋಮವಾರ ಬೀದಿಗಿಳಿದು ಹೋರಾಟ ನಡೆಸಲು ಸಜ್ಜಾಗಿವೆ. ಇದರಿಂದಾಗಿ ಬಸ್, ಆಟೊ ಸಂಚಾರಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಗೌರಿ–ಗಣೇಶ ಹಬ್ಬ ಸಮೀಪಿಸಿದ ಸಂದರ್ಭದಲ್ಲಿ ಬಂದ್ಗೆ ಕರೆ ನೀಡಿರುವುದರಿಂದ ಅಂಗಡಿಗಳು ಮುಚ್ಚಿದರೆ ನಾಗರಿಕರು ಪರದಾಡುವಂತಾಗಲಿದೆ.
ಬೆಳಿಗ್ಗೆ 7.30ಕ್ಕೆ ಮಹಾನಗರ ಪಾಲಿಕೆಯ ಕಚೇರಿ ಎದುರು ಬಂದು ಸೇರುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇನ್ನೊಂದೆಡೆ ಸಿಪಿಐ– ಸಿಪಿಎಂ– ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಗಾಂಧಿ ಸರ್ಕಲ್ನಲ್ಲಿ ಬೆಳಿಗ್ಗೆ 8ರಿಂದ ಬಹಿರಂಗ ಸಭೆ ನಡೆಸುವುದಾಗಿ ತಿಳಿಸಿವೆ. ಬಂದ್ಗೆ ಬೆಂಬಲ ನೀಡುವಂತೆ ರೈತ ಸಂಘಟನೆಗಳು, ಬಸ್ ಮಾಲೀಕರ ಸಂಘ, ಲಾರಿ ಮಾಲೀಕರ ಸಂಘ, ಆಟೊ ಚಾಲಕರ ಸಂಘ, ಹೋಟೆಲ್ ಮಾಲೀಕರ ಹಾಗೂ ವರ್ತಕರ ಸಂಘಗಳಿಗೆ ಮನವಿ ಮಾಡಿವೆ.
ದಾವಣಗೆರೆ ಲೋಕಲ್ ಮತ್ತು ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘವು ಬಂದ್ಗೆ ಬೆಂಬಲ ವ್ಯಕ್ತಪಡಿಸಿದೆ ಎಂದು ಸಂಘದ ಎಂ. ಅಧ್ಯಕ್ಷ ದಾದಾಪೀರ್ ತಿಳಿಸಿದ್ದಾರೆ.
‘ಆಟೊ ಸಂಚಾರ ಸ್ಥಗಿತಗೊಳಿಸುವ ಮೂಲಕ ಬಂದ್ಗೆ ಬೆಂಬಲ ವ್ಯಕ್ತಪಡಿಸುವಂತೆ ಚಾಲಕರನ್ನು ಕೋರಿದ್ದೇವೆ. ದುಡಿಮೆಯೂ ಕಡಿಮೆಯಾಗಿದ್ದು, ಹಬ್ಬದ ಸಂದರ್ಭ ಆಗಿರುವುದರಿಂದ ಹಲವರು ಆಟೊ ಸಂಚಾರ ಸ್ಥಗಿತಗೊಳಿಸುವುದಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಹೀಗಾಗಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಬಹುದು’ ಎಂದು ಫೆಡರೇಷನ್ ಆಫ್ ಕರ್ನಾಟಕ ಆಟೊರಿಕ್ಷಾ ಡ್ರೈವರ್ಸ್ ಯೂನಿಯನ್ನ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಶ್ರೀನಿವಾಸ್ಮೂರ್ತಿ ಹೇಳಿದರು.
ಪರಿಸ್ಥಿತಿ ನೋಡಿ ಸಂಚಾರ: ‘ಸೋಮವಾರ ನಮ್ಮ ಚಾಲಕರು ಹಾಗೂ ನಿರ್ವಾಹಕರು ಕೆಲಸಕ್ಕೆ ಬರಲಿದ್ದಾರೆ. ಬಸ್ ಸಂಚಾರಕ್ಕೆ ನಮ್ಮ ಕಡೆಯಿಂದ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ಬೆಳಿಗ್ಗೆ ಪರಿಸ್ಥಿತಿ ನೋಡಿಕೊಂಡು ಬಸ್ ಸಂಚಾರ ಮಾಡಲಾಗುವುದು’ ಎಂದು ಕೆ.ಎಸ್.ಆರ್.ಟಿ.ಸಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಅಬ್ದುಲ್ ಖುದ್ದುಸ್ ತಿಳಿಸಿದರು.
ಹೊನ್ನಾಳಿ ವರದಿ:
ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಯ ಏರಿಕೆ ವಿರೋಧಿಸಿ ಸೆ.10ರಂದು ಭಾರತ್ ಬಂದ್ ಬೆಂಬಲಿಸಲು ಪಟ್ಟಣದಲ್ಲಿ ಬಂದ್ಗೆ ಮಾಡಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಿಗ್ಗೆ 7 ಗಂಟೆಗೆ ಟಿ.ಬಿ. ವೃತ್ತದಿಂದ ಹೊರಟು ಪಟ್ಟಣದ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವಂತೆ ಮನವಿ ಮಾಡುತ್ತೇವೆ’ ಎಂದರು.
ಜೆಡಿಎಸ್ ಬೆಂಬಲ: ಸೋಮವಾರ ಕರೆ ಕೊಟ್ಟಿರುವ ಬಂದ್ಗೆ ಜೆಡಿಎಸ್ ಬೆಂಬಲ ಸೂಚಿಸಿದೆ ಎಂದು ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ವೆಂಕಟೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಾಲ್ಲೂಕು ಕಚೇರಿ ಬಳಿ ಸಾರ್ವಜನಿಕ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಪೊಲೀಸ್ ಬಿಗಿ ಬಂದೋಬಸ್ತ್
‘ಬಂದ್ ಕರೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೆ.ಎಸ್.ಆರ್.ಪಿ, ಡಿ.ಎ.ಆರ್ ತುಕಡಿಗಳ ಜೊತೆಗೆ ಹೋಮ್ ಗಾರ್ಡ್ಗಳನ್ನು ಬಂದೋಬಸ್ತ್ಗೆ ನಿಯೋಜಿಸಿದ್ದೇವೆ. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಬಲವಂತವಾಗಿ ಬಂದ್ ಮಾಡುವಂತೆ ಜನರ ಮೇಲೆ ಒತ್ತಡ ಹಾಕಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಈಗಾಗಲೇ ವಿವಿಧ ಸಂಘಟನೆಗಳ ಮುಖಂಡರನ್ನು ಕರೆದು ಸೂಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.