ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗಟ್ಟಿದ ಶಾಲೆ; ಕಲಿಕಾ ಅಂತರ ತುಂಬಿಸಲು ಶತಪ್ರಯತ್ನ

ಅಂಗನವಾಡಿ ಕೇಂದ್ರ, ಎಲ್‌ಕೆಜಿ, ಯುಕೆಜಿ, 1ರಿಂದ 5ನೇ ತರಗತಿಗಳಲ್ಲಿ ಮಕ್ಕಳ ಸಂಪೂರ್ಣ ಹಾಜರಾತಿ
Last Updated 15 ನವೆಂಬರ್ 2021, 5:11 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಕಾರಣ ಒಂದೂವರೆ ವರ್ಷದಿಂದಹಾಳುಸುರಿಯುತ್ತಿದ್ದ ಶಾಲೆಗಳು ಮಕ್ಕಳ ಸಂಪೂರ್ಣ ಹಾಜರಾತಿಯಿಂದ ಕಳೆಗಟ್ಟಿವೆ. ಮಕ್ಕಳೇನೋ ಖುಷಿಯಿಂದ ಶಾಲೆಗೆ ಬರುತ್ತಿದ್ದಾರೆ. ಆದರೆ, ಕಲಿಕೆಯಲ್ಲಿ ಹಿಂದುಳಿದಿದ್ದು, ಕಲಿಕಾ ಅಂತರವನ್ನು ತುಂಬಲು ಶಿಕ್ಷಕರು ಮತ್ತು ಪೋಷಕರು ಇನ್ನಿಲ್ಲದ ಪ್ರಯತ್ನಗಳನ್ನುನಡೆಸಿದ್ದಾರೆ.

ಕೊರೊನಾ ಕಾರಣ ಶಾಲೆಗಳು ಬಂದ್ ಆಗಿದ್ದರಿಂದ ಮಕ್ಕಳು ಮನೆಯಲ್ಲಿಯೇ ಇರಬೇಕಾಯಿತು. ಈ ಅವಧಿಯಲ್ಲಿ ಮಕ್ಕಳು ಕಲಿಕೆಗಿಂತ ಆಟ, ಟಿ.ವಿ, ಮೊಬೈಲ್ ನೋಡಿಕೊಂಡು ಕಾಲ ಕಳೆದಿದ್ದೇ ಹೆಚ್ಚು. ಆನ್‌ಲೈನ್ ತರಗತಿ, ವಿದ್ಯಾಗಮ, ದೂರದರ್ಶನದ ಮೂಲಕ ಪಾಠಗಳು ನಡೆದವಾದರೂ, ಈ ವ್ಯವಸ್ಥೆಗಳಿಗೆ 1ರಿಂದ 5ನೇ ತರಗತಿವರೆಗಿನ ಮಕ್ಕಳನ್ನು ಹಿಡಿದು ಕೂರಿಸುವುದೇ ಸವಾಲಾಗಿತ್ತು. ಪರಿಣಾಮವಾಗಿ ಬಹುತೇಕ ಮಕ್ಕಳು ಮೂಲ ಶಿಕ್ಷಣವನ್ನೇ ಮರೆತಿದ್ದಾರೆ. ಮಕ್ಕಳ ಕಲಿಕಾಮಟ್ಟವನ್ನು ಹೆಚ್ಚಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದ್ದು, ಶಿಕ್ಷಕರು ಹಲವು ಪ್ರಯೋಗಗಳನ್ನು ನಡೆಸಿದ್ದಾರೆ.

‘ಮಕ್ಕಳು ಶಾಲೆಗೆ ಬರುತ್ತಿರುವುದನ್ನು ನೋಡಿ ತುಂಬಾ ಖುಷಿಯಾಗಿದೆ. ಆದರೆ, ಬಹಳಷ್ಟು ಮಕ್ಕಳು ಮೂಲ ಶಿಕ್ಷಣವನ್ನೇ ಮರೆತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ವರ್ಣಮಾಲೆ, ಮಗ್ಗಿ, ಕೂಡುವುದು, ಕಳೆಯುವುದು, ಗುಣಾಕಾರ, ಭಾಗಾಕಾರ ಗಣಿತ ಲೆಕ್ಕವನ್ನು ಸಂಪೂರ್ಣ ಮರೆತಿದ್ದಾರೆ. ಹಾಕಿಕೊಟ್ಟಿದ್ದನ್ನು ಬರೆಯುತ್ತಾರೆ. ಆದರೆ, ಗುರುತಿಸಲು ಕಷ್ಟಪಡುತ್ತಾರೆ. ಅದಕ್ಕಾಗಿ ಅಭ್ಯಾಸ ಹಾಳೆಗಳನ್ನು ಸಿದ್ಧಪಡಿಸಿದ್ದೇವೆ’ ಎನ್ನುತ್ತಾರೆ ಕುಂಟಪಾಲನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಕಲ್ಪನಾ.

‘ಅಭ್ಯಾಸ ಹಾಳೆಗಳ ಮೂಲಕ ಶಾಲೆಯಲ್ಲಿ ಕಲಿಸುವುದರ ಜತೆಗೆ ಪೋಷಕರಿಗೂ ನೀಡಿ ಮನೆಯಲ್ಲೂ ಕಲಿಸುವಂತೆ ತಿಳಿಸಿದ್ದೇವೆ. ಅಲ್ಲದೇ ಆಟದ ಮೂಲಕವೂ ಪಾಠ ಹೇಳಿಕೊಡುತ್ತಿದ್ದೇವೆ. ಮಕ್ಕಳೂ ಕಲಿಯಲು ಆಸಕ್ತಿ ತೋರುತ್ತಿದ್ದಾರೆ. ಒಂದೆರಡು ತಿಂಗಳೊಳಗೆ ಕಲಿಕಾ ಅಂತರ ತುಂಬಿ ಮೊದಲ ಸ್ಥಿತಿಗೆ ಮಕ್ಕಳನ್ನು ತರುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಅವರು.

‘ಒಂದೂವರೆ ವರ್ಷದ ಬಳಿಕ ಶಾಲೆ ಆರಂಭವಾಗಿರುವುದರಿಂದ ಮಕ್ಕಳು ಪಾಠವನ್ನು ಮರೆತಿದ್ದಾರೆ. ಆರಂಭದಿಂದ ಎಲ್ಲವನ್ನೂ ಕಲಿಸಬೇಕಾಗಿದೆ. ಆನ್‌ಲೈನ್ ಮೂಲಕ ಪಾಠ ಮಾಡಿದರೂ, ಮೊಬೈಲ್‌ನಲ್ಲಿ ಗೇಮ್ ಆಡಿಕೊಂಡು ಕೂತವರೇ ಹೆಚ್ಚು. ಬಹಳಷ್ಟು ಪೋಷಕರ ಬಳಿ ಸ್ಮಾರ್ಟ್ ಫೋನ್ ಕೂಡ ಇದ್ದಿರಲಿಲ್ಲ. ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳು ಆಟವಾಡಲು ಹೋಗಿರುತ್ತಿದ್ದರು. ಶಾಲೆ ಇಲ್ಲದೆ ಖಿನ್ನರಾಗಿದ್ದರು. ಶೇಕಡ 50ರಷ್ಟು ಮಂದಿ ಪೋಷಕರು ಶಾಲೆಗಳು ಆರಂಭವಾಗುವುದನ್ನೇ ಕಾಯುತ್ತಿದ್ದರು. ಈಗ ಮಕ್ಕಳಲ್ಲಿ ಲವಲವಿಕೆ ಮೂಡಿದೆ’ ಎನ್ನುತ್ತಾರೆ ನಿಟುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಎ.ಕೆ. ಚಂದ್ರಪ್ಪ.

ಐಸೋಲೇಶನ್ ಕೊಠಡಿ: ‘ಬೆರಳೆಣಿಕೆ ಪೋಷಕರಲ್ಲಿ ಇನ್ನೂ ಕೊರೊನಾ ಭಯವಿರುವುದರಿಂದ ಮಕ್ಕಳನ್ನು ಕಳುಹಿಸುತ್ತಿಲ್ಲ. ಅಂತಹ ಮಕ್ಕಳಿಗೆ ಮಕ್ಕಳಿಗೆ ಆನ್‌ಲೈನ್ ಮೂಲಕ ಹೇಳಿಕೊಡುತ್ತಿದ್ದೇವೆ. ಶಾಲೆಯಲ್ಲಿ ಕೊರೊನಾ ಮಾರ್ಗಸೂಚಿ ಅನುಸಾರ ಮಕ್ಕಳ ನಡುವೆ ಅಂತರ, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಕೈಗಳನ್ನು ತೊಳೆದುಕೊಳ್ಳುವಂತೆ, ಸ್ಯಾನಿಟೈಸರ್ ಬಳಸುವಂತೆ ಸೂಚಿಸುತ್ತೇವೆ. ನಿತ್ಯವೂ ಮಕ್ಕಳ ಜ್ವರ ತಪಾಸಣೆ ನಡೆಸುತ್ತೇವೆ. ಶೀತ, ಜ್ವರ, ಕೆಮ್ಮು ಕಂಡುಬಂದರೆ ಐಸೋಲೇಶನ್ ಕೊಠಡಿಯಲ್ಲಿ ಇರಿಸಿ ಪೋಷಕರಿಗೆ ಮಾಹಿತಿ ನೀಡುತ್ತೇವೆ. ಸೂಕ್ತ ಔಷಧೋಪಚಾರ ಮಾಡುವಂತೆ ಸಲಹೆ ನೀಡುತ್ತೇವೆ’ ಎನ್ನುತ್ತಾರೆ ಅವರು.

ರಾಜ್ಯದಲ್ಲಿಕೋವಿಡ್ ದೃಢ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದ್ದರಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1ರಿಂದ 5ರವರೆಗಿನ ತರಗತಿಗಳು ಅ.25ರಿಂದ ಆರಂಭವಾಗಿದ್ದು, ಮೊದಲ ಒಂದು ವಾರ ಅರ್ಧ ದಿನ, ನ. 2ರಿಂದ ಪೂರ್ಣ ಪ್ರಮಾಣದಲ್ಲಿ ನಡೆಸಲಾಗುತ್ತಿದೆ.

ಅಂಗನವಾಡಿ ಕೇಂದ್ರಗಳಲ್ಲಿ ಚಿಣ್ಣರ ಚಿಲಿಪಿಲಿ

ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿನ ಎಲ್‌ಕೆಜಿ, ಯುಕೆಜಿ ತರಗತಿಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಪುಟಾಣಿ ಮಕ್ಕಳು ಉತ್ಸಾಹದಿಂದ ಬರುತ್ತಿದ್ದಾರೆ. ಪೋಷಕರೂ ನಿರ್ಭೀತಿಯಿಂದ ಮಕ್ಕಳನ್ನು ಕಳುಹಿಸುತ್ತಿದ್ದಾರೆ.

‘ಕೇಂದ್ರದಲ್ಲಿ 20 ಮಕ್ಕಳನ್ನು ಮಾತ್ರ ಕೂರಿಸಿಕೊಳ್ಳುವಂತೆ ಆದೇಶವಿದೆ. ಇಂದು ಬಂದವರು ನಾಳೆ ಬರುವಂತಿಲ್ಲ. ಇದರಿಂದ ಹಲವು ಪೋಷಕರು ಬೇಸರಪಟ್ಟುಕೊಂಡಿದ್ದಾರೆ. ಬಂದ ಮಕ್ಕಳನ್ನು ವಾಪಸ್‌ ಕಳುಹಿಸಲೂ ಆಗದ, ಇಟ್ಟುಕೊಳ್ಳಲೂ ಆಗದ ಉಭಯ ಸಂಕಟದಲ್ಲಿ ನಾವಿದ್ದೇವೆ. ಇಷ್ಟು ದಿನಗಳ
ಮನೆಯಲ್ಲಿಯೇ ಇದ್ದ ಮಕ್ಕಳು ಶಾಲೆಗೆ ಹೋದರೆ ಸಾಕು ಎನ್ನುವ ಮನಸ್ಥಿತಿಯಲ್ಲಿ ಪೋಷಕರಿದ್ದಾರೆ’
ಎನ್ನುತ್ತಾರೆ ಲೇಬರ್‌ ಕಾಲೊನಿ ಅಂಗನವಾಡಿ ಕಾರ್ಯಕರ್ತೆ ಎಚ್‌.ಎಂ. ಸುಮಂಗಲ.

‘ಅಂಗನವಾಡಿ ಕೇಂದ್ರಕ್ಕೆ ಮಗುವನ್ನು ಕರೆದುಕೊಳ್ಳಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ. ಸದ್ಯ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಕ್ಕಳನ್ನು ಕೂರಿಸಿಕೊಳ್ಳುತ್ತಿದ್ದೇವೆ. ಕೊರೊನಾ ಮುನ್ನೆಚ್ಚರಿಕೆ ಅನುಸಾರ ಮಕ್ಕಳಿಗೆ ಕಲಿಸುತ್ತಿದ್ದೇವೆ. ಮಕ್ಕಳಲ್ಲಿ ಶೀತ, ಕೆಮ್ಮು, ಜ್ವರ ಕಾಣಿಸಿಕೊಂಡರೆ ಒಂದು ವಾರ ಮನೆಯಲ್ಲಿಯೇ ಇರಿಸಿಕೊಳ್ಳುವಂತೆ ಸೂಚಿಸುತ್ತೇವೆ. ಕೇಂದ್ರಗಳ ಮಕ್ಕಳಿಗೂ ಸಮವಸ್ತ್ರ, ಶೂ, ಕೂರಲು ಕುರ್ಚಿ, ಸ್ಲೇಟ್‌ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು. ಇದರಿಂದ ಹೆಚ್ಚಿನ ಸಂಖ್ಯೆಯ ಪೋಷಕರು ಮಕ್ಕಳನ್ನು ಅಂಗನವಾಡಿಕೇಂದ್ರಗಳಿಗೆ ಕಳುಹಿಸಲು ಮುಂದಾಗುತ್ತಾರೆ’ ಎನ್ನುತ್ತಾರೆ ಆನಗೋಡು ಕೇಂದ್ರದ ಕಾರ್ಯಕರ್ತೆ ಮಲ್ಲಮ್ಮಮತ್ತು ಕೆ.ಟಿ.ಜೆ. ನಗರದ ಉಮಾ ಮತ್ತು ಮಂಜುಳಾ.

ಅಂಗನವಾಡಿ, ಪ್ರಾಥಮಿಕ ಶಾಲೆಗಳಲ್ಲಿ ಚಿಣ್ಣರ ಸಂಭ್ರಮ

ವಿಶ್ವನಾಥ ಡಿ.

ಹರಪನಹಳ್ಳಿ: ಶಾಲೆಗಳು ತೆರೆಯುವುದನ್ನೇ ಚಾತಕ ಪಕ್ಷಿಗಳಂತೆ ಕಾದಿದ್ದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಖುಷಿಯಾಗಿ ಕಳಿಹಿಸುತ್ತಿದ್ದು, ಲವಲವಿಕೆಯಿಂದ ಆಗಮಿಸುವ ಚಿಣ್ಣರಿಂದ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳು ಕಳೆಗಟ್ಟಿವೆ.

ಆರಂಭದಲ್ಲಿ ಶೇ 50ರಷ್ಟಿದ್ದ ಹಾಜರಾತಿ ಈಗ ಶೇ 90ಕ್ಕೆ ತಲುಪಿರುವುದು ಶಿಕ್ಷಕರಲ್ಲಿ ಸಂಭ್ರಮ ತಂದಿದೆ. ಕೊರೊನಾ ಮೂರನೇ ಅಲೆ ಕಾರಣಕ್ಕೆ ಶೇ 10ರಷ್ಟು ಪೋಷಕರು ಈವರೆಗೂ ಮಕ್ಕಳನ್ನು ಶಾಲೆಗೆ ದಾಖಲಿಸಲು ಹಿಂದೇಟು ಹಾಕಿರುವುದು ಕಂಡುಬರುತ್ತದೆ. 1ರಿಂದ 5ನೇ ತರಗತಿವರೆಗಿನ ಮಕ್ಕಳ ಸಂಖ್ಯೆ 28,827 ಇದೆ.

ತಾಲ್ಲೂಕಿನ ಹಲುವಾಗಲು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗೆ ಸೇರಿಸಲು ಪೋಷಕರು ನಾ ಮುಂದು ತಾ ಮುಂದು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ, ಸರ್ಕಾರದ ನಿಯಮಾನುಸಾರ 30 ಮಕ್ಕಳಿಗೆ ಮಾತ್ರ ಅವಕಾಶ ದೊರೆತಿದೆ.

ತಾಲ್ಲೂಕಿನಲ್ಲಿ ಒಟ್ಟು 391 ಅಂಗನವಾಡಿ ಕೇಂದ್ರಗಳಿವೆ. ಒಟ್ಟು 28 ಸಾವಿರ ಚಿಣ್ಣರು ಇಲ್ಲಿ ದಾಖಲಾತಿ ಪಡೆದಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕಳುಹಿಸುವ ಬಣ್ಣಗಳು, ಸ್ವರಾಕ್ಷರ, ಆಂಗ್ಲ ಅಕ್ಷರವನ್ನು ಆಟದ ಮೂಲಕ ಕಲಿಸುತ್ತಾರೆ. ಕೇಂದ್ರದಲ್ಲಿ ವಿವಿಧ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿಕೆಯಿಂದ ಮಕ್ಕಳ ಆಸಕ್ತಿ ದ್ವಿಗುಣವಾಗಿದೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಅನಿಸಿಕೆಗಳು...

ನನ್ನ ಮಗ ಲೇಬರ್‌ ಕಾಲೊನಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಶಾಲೆಯಲ್ಲಿ ಶಿಕ್ಷಕರು ಹೇಳಿ ಕೊಡುವುದಕ್ಕೂ, ಮನೆಯಲ್ಲಿ ನಾವು ಹೇಳಿ ಕೊಡುವುದಕ್ಕೂ ವ್ಯತ್ಯಾಸವಿದೆ. ಈಗ ಶಿಸ್ತಿನಿಂದ ಶಾಲೆಗೆ ಹೋಗಿಬರುತ್ತಾರೆ. ಹೋಂವರ್ಕ್‌ ಮುಗಿಸುತ್ತಾರೆ. ಶಾಲೆ ಮತ್ತೆ ತೆರೆದಿದ್ದರಿಂದ ಸಂತೋಷವಾಗಿದೆ.

ಉಷಾ, ಪೋಷಕರು, ದಾವಣಗೆರೆ

***

ಮಕ್ಕಳು ಬರದಿದ್ದ ಸಂದರ್ಭದಲ್ಲಿ ತುಂಬಾ ಬೇಸರವಾಗಿತ್ತು. ಶಾಲೆ ಬಿಕೋ ಎನ್ನುತ್ತಿತ್ತು. ಈಗ ಒಂದೆರಡು ಹೊರತುಪಡಿಸಿ ಪೂರ್ಣ ಹಾಜರಾತಿ ಇದೆ. ಮೈದಾನದಲ್ಲಿ ಮಕ್ಕಳ ಆಟೋಟದಿಂದಾಗಿ ಶಾಲೆಗೆ ಮರುಜೀವ ಬಂದಂತಾಗಿದೆ.

ಪುಷ್ಪಾವತಿ, ಮುಖ್ಯಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಲೇಬರ್ ಕಾಲೊನಿ

***


ಕೊರೊನಾ ನಂತರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಆರ್ಥಿಕ ಸಂಕಷ್ಟ ಹಾಗೂ ಕೊರೊನಾ ಮೂರನೇ ಅಲೆಯಿಂದಾಗಿ ಮತ್ತೆ ಎಲ್ಲಿ ಶಾಲೆ ಬಂದ್‌ ಆಗುವುದೋ ಎಂದು ಪೋಷಕರು ಮಕ್ಕಳನ್ನುಸರ್ಕಾರಿ ಶಾಲೆಗಳಿಗೆ ಸೇರಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿನ ಸೌಲಭ್ಯಗಳೂ ಪಾಲಕರನ್ನು ಪ್ರೇರೇಪಿಸಿವೆ.

ಆರ್‌. ಲೀಲಾವತಿ, ದೈಹಿಕ ಶಿಕ್ಷಣ ಶಿಕ್ಷಕಿ, ಸರ್ಕಾರಿ ಪ್ರಾಥಮಿಕ ಶಾಲೆ, ನಿಟುವಳ್ಳಿ

***

ಮಕ್ಕಳು ಮೊದಲು ಕಾನ್ವೆಂಟ್‌ನಲ್ಲಿ ಓದುತ್ತಿದ್ದರು. ಲಾಕ್‌ಡೌನ್‌ ಸಂದರ್ಭ ಆನ್‌ಲೈನ್‌ ಕ್ಲಾಸ್‌ ನಡೆದರೂ ಕೂರುತ್ತಿರಲಿಲ್ಲ. ಪರಿಣಾಮವಾಗಿ ಕಲಿಕೆಯಲ್ಲಿ ಹಿಂದುಳಿದರು. ನಂತರ ಗ್ರಾಮದ ಸರ್ಕಾರಿ ಶಾಲೆಗೆ 3ನೇ ತರಗತಿಗೆ ಸೇರಿಸಿದೆ. ಶಿಕ್ಷಕರ ಪ್ರಯತ್ನದಿಂದಾಗಿ ಕಲಿಕೆಯಲ್ಲಿ ಸ್ವಲ್ಪ ಅಭಿವೃದ್ಧಿ ಕಂಡುಬಂದಿದೆ.

ಶಿವಕುಮಾರ್‌, ಪೋಷಕರು, ಕುಂಟಪಾಲನಹಳ್ಳಿ

***

ಆನ್‌ಲೈನ್‌ ಕ್ಲಾಸ್‌ಗೆ ಪುಟ್ಟ ಮಕ್ಕಳನ್ನು ಕೂರಿಸುವುದ ಕಷ್ಟ. 6, 7ನೇ ತರಗತಿ ಮಕ್ಕಳಾದರೆ ಹೇಳಿದರೆ ಅರ್ಥ ಮಾಡಿಕೊಳ್ಳುತ್ತವೆ. ನನ್ನ ಮಗನೀಗ 3ನೇ ತರಗತಿಯಲ್ಲಿದ್ದು, ಕಲಿಕೆಯಲ್ಲಿ ಸ್ವಲ್ಪ ಹಿಂದೆ ಉಳಿದಿದ್ದಾನೆ. ಶಾಲೆ ಮತ್ತು ಮನೆ ಎರಡೂ ಕಡೆ ಹೇಳಿಕೊಡುತ್ತಿದ್ದೇವೆ. ಮಗಳು ಎಲ್‌ಕೆಜಿಗೆ ಖುಷಿಯಿಂದ ಹೋಗುತ್ತಿದ್ದಾಳೆ.

ಮೆಹಬೂಬಿ, ಪೋಷಕಿ, ದೊಡ್ಡಬಾತಿ

***

ಅಂಗನವಾಡಿ ಕಾರ್ಯಕರ್ತೆಯರ ಮೇಲಿನ ಅಪಾರ ನಂಬಿಕೆಯಿಂದಾಗಿ ಮಕ್ಕಳನ್ನು ಧೈರ್ಯವಾಗಿ ಕೇಂದ್ರಕ್ಕೆ ಕಳುಹಿಸುತ್ತಿದ್ದೇವೆ. ತುಂಬಾ ಜವಾಬ್ದಾರಿಯಿಂದ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಏನೇ ಇದ್ದರೂ ಫೋನ್‌ ಮಾಡಿ ಕರೆಯಿಸುತ್ತಾರೆ. ಹಾಗಾಗಿ ನಿಶ್ಚಿಂತರಾಗಿದ್ದೇವೆ.

ಜಬೀವುಲ್ಲಾ, ಕೆ.ಟಿ.ಜೆ. ನಗರ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT