ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾತೃಭಾಷೆಯಲ್ಲಿ ವಿಜ್ಞಾನ ನೀಡಿದ ಪರಿಷತ್ತು’

Last Updated 11 ನವೆಂಬರ್ 2020, 15:28 IST
ಅಕ್ಷರ ಗಾತ್ರ

ದಾವಣಗೆರೆ: ಈ ನೆಲದ ಭಾಷೆ ಕನ್ನಡದಲ್ಲಿ ವಿಜ್ಞಾನವನ್ನು ಪ್ರಸಾರ ಮಾಡಲು ವಿಜ್ಞಾನ ಪರಿಷತ್ತು ಕಾರಣ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ ತಿಳಿಸಿದರು.

ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯು ಜೀಜಾ ಮಾತಾ ಶಾಲೆಯಲ್ಲಿ ಏರ್ಪಡಿಸಿದ್ದ ಪರಿಷತ್ತಿನ 40ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೌಢ್ಯದ ವಿರುದ್ಧ, ಅನಕ್ಷರತೆಯ ವಿರುದ್ಧ ಹೋರಾಟ ಆರಂಭಿಸಿ ಜನ ವಿಜ್ಞಾನವನ್ನು ಕಟ್ಟಿದ ಪರಿಣಾಮ ಸಮಾಜದಲ್ಲಿ ಬದಲಾವಣೆಗಳನ್ನು ಕಾಣಲು ಸಾಧ್ಯವಾಯಿತು. ಭಾರತೀಯ ವಿಜ್ಞಾನ ಮಂದಿರದ ಸಣ್ಣ ಕೊಠಡಿಯಲ್ಲಿ ಡಾ. ಎಚ್. ನರಸಿಂಹಯ್ಯ, ಪ್ರೊ. ಜೆ.ಆರ್. ಲಕ್ಷ್ಮಣರಾವ್, ಪ್ರೊ. ಎಂ.ಎ. ಸೇತೂರಾವ್ ನಿಂತು ಪ್ರಾರಂಭಿಸಿದ ಈ ಸಂಸ್ಥೆ ಇಂದು ರಾಜ್ಯದಾದ್ಯಂತ ಬಹುದೊಡ್ಡ ಸಂಸ್ಥೆಯಾಗಿ ಬೆಳೆದಿದೆ ಎಂದು ಶ್ಲಾಘಿಸಿದರು.

ಪ್ರಾದೇಶಿಕ ಉಪವಿಜ್ಞಾನ ಕೇಂದ್ರದ ಸ್ಥಾಪನೆ ಮಾಡುವುದು ಪರಿಷತ್ತಿನ ಜಿಲ್ಲಾ ಘಟಕದ ಕನಸಾಗಿತ್ತು. ನಿರಂತರ ಪರಿಶ್ರಮದ ಫಲವಾಗಿ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಉದ್ಯಾನದ ಎದುರುಗಡೆ 4 ಎಕರೆ ಪ್ರದೇಶದಲ್ಲಿ ಪ್ರಾದೇಶಿಕ ಉಪವಿಜ್ಞಾನ ಕೇಂದ್ರ ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ. ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಕೂಡಲೆ ಕೇಂದ್ರವನ್ನು ಉದ್ಘಾಟಿಸಿ ಈ ಜಿಲ್ಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಜನಸಾಮಾನ್ಯರಿಗೆ ಉಪಯೋಗವಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಶಿಕ್ಷಕ ದೊಡ್ಡಮನಿ ಕೆಂಚಪ್ಪ, ‘ಸಮಸ್ಯೆಗಳಿಗೆ ನೈಜ ಕಾರಣಗಳನ್ನು ತಿಳಿದು, ಪರಿಹರಿಸಿಕೊಳ್ಳುವ ಬದಲು, ಮಾಟ, ಮಂತ್ರದ ಕಡೆಗೆ ವಾಲುವ ಜನರೇ ಹೆಚ್ಚಾಗಿದ್ದಾರೆ. ಸಮಾಜದ ಪ್ರಗತಿ ಹಾಗೂ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಜನರು ತೊಡಗಿಸಿಕೊಳ್ಳಲು ಅವರಿಗೆ ವಿಜ್ಞಾನದ ಮಾಹಿತಿಯನ್ನು ನೀಡುವ ಅಗತ್ಯವಿದೆ. ಅದಕ್ಕಾಗಿಯೇ ವಿಜ್ಞಾನ ಪರಿಷತ್ತನ್ನು ಆರಂಭಿಸಲಾಗಿದೆ ಎಂದರು.

ಎಚ್.ಎಂ.ಪ್ರಕಾಶ್, ‘ಸರಳ ವಿಜ್ಞಾನ ಪ್ರಯೋಗಗಳು, ಕನ್ನಡ ವಿಜ್ಞಾನ ಸಮ್ಮೇಳನ, ನೀನೇ ಮಾಡಿ ನೋಡು, ಆಕಾಶ ವೀಕ್ಷಣೆ, ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ, ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ, ಪವಾಡ ರಹಸ್ಯ ಬಯಲು, ಜೀವ ವೈವಿಧ್ಯ ಸಂರಕ್ಷಣೆ ಕುರಿತಾದ ವೈಜ್ಞಾನಿಕ ಕಾರ್ಯಕ್ರಮಗಳ ಮೂಲಕ ಈ ನಾಡಿನಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಪರಿಷತ್ತು ಶ್ರಮಿಸಿದೆ’ ಎಂದು ಮಾಹಿತಿ ನೀಡಿದರು.

ಶಿಕ್ಷಕ ಪರಶುರಾಮರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಎಚ್.ನಿರ್ಮಲ ಸ್ವಾಗತಿಸಿದರು. ಶಾಂತಲಾ ದೇವಿ ವಂದಿಸಿದರು. ಎನ್.ಸಿದ್ಧೇಶ್ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ, ಅನಿತಾ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT