ಭಾನುವಾರ, ಡಿಸೆಂಬರ್ 15, 2019
17 °C
12ನೇ ವಿಜ್ಞಾನ ವಿಚಾರಸಂಕಿರಣ

ವಿಜ್ಞಾನ ಭವಿಷ್ಯದ ಜಗತ್ತಿನ ಕೀಲಿಕೈ: ಪ್ರೊ.ಡಾ.ಎಸ್‌.ಬಿ.ಮುರುಗೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ‘ವಿಜ್ಞಾನ ಭವಿಷ್ಯದ ಹೆಬ್ಬಾಗಿಲಿನ ಕೀಲಿಕೈ ಇದ್ದಂತೆ’ ಎಂದು ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್‌.ಬಿ. ಮುರುಗೇಶ್‌ ಅಭಿಪ್ರಾಯಪಟ್ಟರು.

ದಾವಣಗೆರೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ದಿ.ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ 12ನೇ ವಿಜ್ಞಾನ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನದ ಒಂದೊಂದು ಸಂಶೋಧನೆಯೂ ಜಗತ್ತಿನ ಗತಿಯನ್ನೇ ಶಾಶ್ವತವಾಗಿ ಬದಲಿಸುವಷ್ಟು ಪ್ರಭಾವ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತದೆ. ಆದ್ದರಿಂದ ವಿಜ್ಞಾನವನ್ನು ಕೇವಲ ಒಂದು ವಿಷಯವೆಂದು ಭಾವಿಸದೇ ದೈನಂದಿನ ಜೀವನ ನಿರ್ವಹಣೆಗೆ ಬೇಕಾದ ಅಂಶ ಎಂದು ಪರಿಗಣಿಸಿ ವಿದ್ಯಾರ್ಥಿಗಳು ಅಭ್ಯಸಿಸಬೇಕು. ಪ್ರಸ್ತುತ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ವಿಜ್ಞಾನ ಇದ್ದೇ ಇರುತ್ತದೆ. ವಿಜ್ಞಾನದಿಂದಲೇ ಜಗತ್ತು ನಿರ್ಮಾಣವಾಗಿದೆ ಎಂದರು.

ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ವಿಜ್ಞಾನದ ಅವಶ್ಯಕತೆ ಇಂದು ಹೆಚ್ಚಿದೆ. ಬದುಕು ಸಂಕೀರ್ಣವಾದಂತೆ ವಿಜ್ಞಾನದ ಅವಲಂಬನೆ ಹೆಚ್ಚಾಗುತ್ತಿದೆ. ಪ್ರತಿ ಮನೆಗಳೂ ಪ್ರಯೋಗಾಲಯಗಳಿದ್ದಂತೆ, ಅಲ್ಲಿ ಮಾಡುವ ಪ್ರತಿಯೊಂದು ಕೆಲಸದ ಹಿಂದೆ ವಿಜ್ಞಾನವಿರುತ್ತದೆ ಎಂದು ಉದಾಹರಣೆಗಳ ಮೂಲಕ ವಿವರಿಸಿದರು.

‘ವಿಜ್ಞಾನದ ಹಾದಿಯಲ್ಲಿ ಸಂತಸದ ಪಯಣ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಬೆಂಗಳೂರಿನ ವಿಜಯಾ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ. ಚಂದ್ರಕಾಂತ್‌ ತುಮಕೂರು, ‘ವಿಜ್ಞಾನದ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿಯೇ ಕೆಲಸ ಮಾಡಬೇಕೆಂದಿಲ್ಲ. ವಿಜ್ಞಾನೇತರ ಕ್ಷೇತ್ರಗಳಲ್ಲೂ ಸೇವೆಗೈದು ಸಾಧನೆ ಮಾಡಬಹುದು’ ಎಂದರು.

ವಿವಿಎಸ್‌ ಸರ್ದಾರ್‌ ಪಟೇಲ್‌ ಕಾಲೇಜಿನ ಪ್ರೊ. ಬಿ.ಎಸ್‌. ಅಚ್ಯುತ್‌ ಅವರು ‘ಫನ್‌ ವಿತ್‌ ಸೈನ್ಸ್‌’ ವಿಷಯ ಕುರಿತು ಹಾಗೂ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಎನ್‌.ಬಿ. ತಿಪ್ಪೇಸ್ವಾಮಿ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಪಿ. ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಕೆ.ಸಿ. ವಿಜಯಕುಮಾರ್‌ ನಿರೂಪಿಸಿದರು. ಉಪನ್ಯಾಸಕ ಬಿ.ಎಂ. ಶಿವಕುಮಾರ್‌ ವಂದಿಸಿದರು. ಉಪನ್ಯಾಸಕ ಉಮೇಶ್‌ ಸ್ವಾಗತಿಸಿದರು.

ಡಯಟ್‌ ಪ್ರಾಂಶುಪಾಲ ಎಚ್‌.ಕೆ. ಲಿಂಗರಾಜ್‌, ಡಾ. ಬಿ.ಇ. ರಂಗಸ್ವಾಮಿ, ನಾಗರಾಜ್‌ರಾವ್‌ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು