ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ವಿವಾದಕ್ಕೀಡಾದ ಕಂಟೈನ್‌ಮೆಂಟ್ ವಲಯದ ವ್ಯಾಪ್ತಿ

ಕೆಲವೆಡೆ ಒಂದೇ ಬೀದಿ, ಕೆಲವೆಡೆ ಅರ್ಧ ಕಿಲೋಮೀಟರ್‌ ಸೀಲ್‌ಡೌನ್‌
Last Updated 19 ಮೇ 2020, 7:00 IST
ಅಕ್ಷರ ಗಾತ್ರ

ದಾವಣಗೆರೆ: ಕಂಟೈನ್‌ಮೆಂಟ್‌ ವಲಯ 100 ಮೀಟರ್‌ ಇರಬೇಕು ಎಂಬ ನಿಯಮ ಇದ್ದರೂ ಅದು ಕೆಲವು ಕಡೆ ಒಂದೇ ಬೀದಿಗೆ ಸೀಮಿತವಾಗಿದೆ, ಕೆಲವು ಕಡೆ ಅರ್ಧ ಕಿಲೋಮೀಟರ್‌ ದಾಟಿದೆ. ಇದು ವಿವಾದಕ್ಕೆ ಕಾರಣವಾಗಿದೆ.

ಬೆಳ್ಳುಳ್ಳಿ ವ್ಯಾಪಾರ ಮಾಡುವವರೊಬ್ಬರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದರಿಂದ ರೈತರ ಬೀದಿಯನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಲಾಗಿದೆ. ಅಲ್ಲಿ ಅವರ ಮನೆ ಇರುವ ಒಂದು ಬೀದಿ ಮಾತ್ರ ಸೀಲ್‌ಡೌನ್‌ ಆಗಿದೆ. ಈರುಳ್ಳಿ ವ್ಯಾಪಾರಕ್ಕೆಂದು ಬೇರೆ ಜಿಲ್ಲೆಗೆ ಹೋಗಿದ್ದ ಬೇತೂರು ರಸ್ತೆಯ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಅದನ್ನೂ ಕಂಟೈನ್‌ಮೆಂಟ್‌ ವಲಯ ಮಾಡಲಾಗಿದೆ. ಆದರೆ ಅಲ್ಲಿ 300 ಮೀಟರ್‌ ವ್ಯಾಪ್ತಿಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಎರಡೂ ಪ್ರದೇಶಗಳಲ್ಲಿ ಒಬ್ಬೊಬ್ಬರೇ ಸೋಂಕಿತರಿದ್ದರೂ ಈ ತಾರತಮ್ಯ ಯಾಕೆ ಎಂಬುದು ಜನರ ಪ್ರಶ್ನೆಯಾಗಿದೆ.

ಇಮಾಂನಗರದ ಹಿಂಭಾಗ ಅಂಬ್ರಪ್ಪನ ತೋಟದ ಒಂದೇ ಬಿಲ್ಡಿಂಗ್‌ನಲ್ಲಿ ವಾಸ ಇರುವ ಸುಮಾರು 20 ಮಂದಿಗೆ ಸೋಂಕು ಬಂದಿದೆ. ಆದರೆ ಸೀಲ್‌ಡೌನ್‌ ಅನ್ನು ಅಲ್ಲಿಗೆ ಸೀಮಿತಗೊಳಿಸದೇ ಇಡೀ ಇಮಾಂನಗರವನ್ನು ಒಳಪಡಿಸಿದ್ದಾರೆ. 100 ಮೀಟರ್‌ ಬದಲು 300 ಮೀಟರ್‌ ಆಗಿದೆ ಎಂದು ಪಾಲಿಕೆಯ ಸ್ಥಳೀಯ ಸದಸ್ಯ ಕೆ. ಚಮನ್‌ಸಾಬ್‌ ಅಸಮಾಧಾನ ವ್ಯಕ್ತಪಡಿಸಿದರು.

ಶಿವನಗರದಲ್ಲಿ ಜನರು ಗಲಾಟೆ ಮಾಡಿದ್ದರಿಂದ 100 ಮೀಟರ್‌ ಮಾತ್ರ ಸೀಲ್‌ಡೌನ್‌ ಮಾಡಲಾಗಿದೆ. ಬಾಷಾನಗರದಲ್ಲಿ 400 ಮೀಟರ್‌, ಕೆಟಿಜೆ ನಗರದಲ್ಲಿ 200 ಮೀಟರ್‌, ಎಸ್‌ಪಿಎಸ್‌ ನಗರದಲ್ಲಿ 150 ಮೀಟರ್‌ ಮಾಡಿದ್ದಾರೆ ಎಂದು ವಿವರಿಸಿದರು.

ಜಾಲಿನಗರ ಎಂಟನೇ ವಾರ್ಡ್‌ನಲ್ಲಿ ಸೋಂಕು ಪತ್ತೆಯಾಗಿರುವುದು. ಆದರೆ 7ನೇ ವಾರ್ಡ್‌ ಅನ್ನು ಸೇರಿಸಿ ಸೀಲ್‌ಡೌನ್‌ ಮಾಡಿದ್ದಾರೆ. ಅರ್ಧ ಕಿಲೋಮೀಟರ್‌ನಷ್ಟು ಸೀಲ್‌ಡೌನ್‌ ಯಾಕೆ ಬೇಕು ಎಂದು 7ನೇ ವಾರ್ಡ್‌ನ ಸದಸ್ಯ ವಿನಾಯಕ್‌ ಪೈಲ್ವಾನ್‌ ಪ್ರಶ್ನಿಸಿದ್ದಾರೆ.

ಎಲ್ಲ ಕಡೆ ಒಂದೇ ರೀತಿ ನಿಯಮ ಮಾಡಬೇಕು. ಪೊಲೀಸ್‌ ಕ್ವಾಟ್ರರ್ಸ್‌, ರೈತರ ಬೀದಿಗೆ ಒಂದು ನಿಯಮ, ಉಳಿದೆಡೆ ಒಂದು ನಿಯಮ ಮಾಡಬಾರದು ಎಂದು ವಿನಾಯಕ ಪೈಲ್ವಾನ್‌, ಚಮನ್‌ಸಾಬ್‌ ಒತ್ತಾಯಿಸಿದ್ದಾರೆ.

‘ಪರಿಸ್ಥಿತಿಗೆ ಅನುಗುಣವಾಗಿ ವ್ಯಾಪ್ತಿ ನಿಗದಿ’

ಕಂಟೈನ್‌ಮೆಂಟ್‌ ವಲಯಗಳಲ್ಲಿ ಆಯಾ ಪ್ರದೇಶದಲ್ಲಿ ಇರುವ ಮನೆಗಳ ಅಂತರ, ಇನ್ನಿತರ ಪರಿಸ್ಥಿತಿಗಳನ್ನು ಅವಲೋಕನ ಮಾಡಿ ಸೀಲ್‌ಡೌನ್‌ ಮಾಡಲಾಗಿದೆ. ಮತ್ತೆ ಅವುಗಳನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪರಿಸ್ಥಿತಿ ಸುಧಾರಣೆ ಕಂಡಿರುವ ಪ್ರದೇಶಗಳಲ್ಲಿ ಸೀಲ್‌ಡೌನ್‌ ವ್ಯಾಪ್ತಿಯನ್ನು ಕಡಿಮೆ ಮಾಡಲಾಗುವುದು. ಜನರ ಆರೋಗ್ಯದ ದೃಷ್ಟಿಯಿಂದ, ಅವರ ಒಳಿತಿಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT