ಶುಕ್ರವಾರ, ಫೆಬ್ರವರಿ 26, 2021
19 °C
ಶಿರಸಿಯ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಬೇಸರ

ದೇಗುಲಗಳಲ್ಲಿ ಧರ್ಮಗ್ರಂಥ ಪಠಣ ನಡೆಯುತ್ತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರುವನೂರು: ‘ಸಿಖ್, ಮುಸ್ಲಿಂ, ಕ್ರಿಶ್ಚಿಯನ್ ಮೊದಲಾದ ಮತದ ಕೇಂದ್ರಗಳಲ್ಲಿ ಧರ್ಮ ಗ್ರಂಥದ ಪಠಣ ನಿರಂತರವಾಗಿ ನಡೆಯುತ್ತದೆ. ಆದರೆ, ಹಿಂದೂ ದೇಗುಲಗಳಲ್ಲಿ ಮಾತ್ರ ಧರ್ಮಗ್ರಂಥ ಪಠಣ ನಡೆಯುತ್ತಿಲ್ಲ’ ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಮುತ್ತಯ್ಯನಹಟ್ಟಿ ಗ್ರಾಮದ ಸಮೀಪದ ರಾಜರಾಜೇಶ್ವರಿ ದೇಗುಲದ ಆವರಣದಲ್ಲಿ ಭಾನುವಾರ ಭಗವದ್ಗೀತಾ ಅಭಿಯಾನ ಕರ್ನಾಟಕ, ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ, ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ದಿನಗಳಲ್ಲಿ ದೇಗುಲಗಳಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ದೇಗುಲಗಳ ಪರಿಸ್ಥಿತಿ ಸುಧಾರಣೆ ಜತೆಗೆ ಧರ್ಮ ಗ್ರಂಥದ ಪಠಣವೂ ನಡೆಯಬೇಕು. ಇದರಿಂದ ಮನಸ್ಸು ಶುದ್ಧಿಯಾಗುತ್ತದೆ’ ಎಂದರು.

‘2007ರಿಂದ ಭಗವದ್ಗೀತಾ ಅಭಿಯಾನದ ಮೂಲಕ ಇಡೀ ಭಗವದ್ಗೀತೆಯನ್ನು ಜನರಿಗೆ ಮುಟ್ಟಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಪ್ರತಿ ವರ್ಷವೂ ಭಗವದ್ಗೀತೆಯ ಒಂದೊಂದು ಅಧ್ಯಾಯದ ಮೇಲೆ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದ್ದೇವೆ’ ಎಂದರು.

‘16ನೇ ಅಧ್ಯಾಯವನ್ನು ಅಭಿಯಾನದ ಮೂಲಕ ಜನರಿಗೆ ತಿಳಿಸಿಕೊಡಲಿದ್ದೇವೆ. ಭಗವದ್ಗೀತೆಯನ್ನು ನಡತೆಯ ಸುಧಾರಣೆಗೆ ಉಪಯೋಗಿಸಿಕೊಳ್ಳಬಹುದು. ಒಳ್ಳೆತನವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಭಗವದ್ಗೀತೆ ಉತ್ತಮವಾದ ಕೈಪಿಡಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ನಡತೆಯ ಒಳ್ಳೆಯತನ, ಕೆಟ್ಟತನಗಳು ಭಗವದ್ಗೀತೆಯ ಅಲ್ಲಲ್ಲಿ ಸಿಗುತ್ತವೆ. ಆದರೆ, 16ನೇ ಅಧ್ಯಾಯದಲ್ಲಿ ಈ ವಿಷಯ ಕೇಂದ್ರಿಕೃತವಾಗಿದೆ. ನಮ್ಮ ನಡತೆ ಸುಧಾರಣೆಯಾಗಲು ಈ ಅಧ್ಯಾಯವನ್ನು ಪ್ರತಿಯೊಬ್ಬರೂ ಓದಬೇಕು’ ಎಂದರು.

ಸ್ವರ್ಣವಲ್ಲಿ ಮಠದ ಆಡಳಿತ ಮಂಡಳಿ ಸದಸ್ಯ ಗಂಗಾಧರ್ ಹೆಗಡೆ, ‘ಅಭಿಯಾನಕ್ಕಾಗಿ ಈಗಾಗಲೇ ಜಿಲ್ಲಾ ಮತ್ತು ತಾಲ್ಲೂಕು ಸಮಿತಿಗಳು ರೂಪುಗೊಂಡಿವೆ. ಅಕ್ಟೋಬರ್ 30 ರಿಂದ ಡಿಸೆಂಬರ್ 4 ರವರೆಗೆ ಅಭಿಯಾನ ನಡೆಯುತ್ತದೆ’ ಎಂದರು.

ಸಚ್ಚಿದಾನಂದ ಸ್ವರಸ್ಪತಿ ಸ್ವಾಮೀಜಿ, ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಭಗವದ್ಗೀತಾ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಕಾಶಿವಿಶ್ವನಾಥ ಶೆಟ್ಟಿ, ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್. ಮಂಜುನಾಥ್, ಹೊಸಪೇಟೆಯ ಉದ್ಯಮಿ ಪ್ರಭಾಕರ್, ರಾಜರಾಜೇಶ್ವರಿ ದೇಗುಲದ ಅರ್ಚಕ ನಾಗರಾಜ್ ಭಟ್, ಡಾ. ರಾಜೀವಲೋಚನ ಅವರೂ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು