ಹೊನ್ನಾಳಿ: ಪಟ್ಟಣದಲ್ಲಿ ನಾಲ್ಕು ದಿನಗಳಿಂದ ಮುಸಿಯಾ ಒಂದರ ಕಾಟ ಹೆಚ್ಚಾಗಿದ್ದು, ಇದರ ದಾಳಿಯಿಂದ 20ಕ್ಕೂ ಹೆಚ್ಚು ಜನರು ತೊಂದರೆಗೊಳಗಾಗಿದ್ದಾರೆ.
ಕೆಲವು ದಿನಗಳ ಹಿಂದೆ ಸಾರ್ವಜನಿಕರಿಂದ ತಿಂಡಿ, ತಿನಿಸು, ಹಣ್ಣುಗಳನ್ನು ಪಡೆದು ತಿಂದು ಓಡಾಡುತ್ತಿದ್ದ ಮುಸಿಯಾವನ್ನು ಯಾರೋ ಒಬ್ಬರು ಬೆದರಿಸಿದರು ಎನ್ನಲಾಗಿದೆ.
ಬೆದರಿದ ಮುಸಿಯಾ ಗಾಬರಿಗೊಂಡು ಉಗುರುಗಳಿಂದ ಪರಚಿದೆ.ಈಗ ಕಂಡ ಕಂಡ ಜನರನ್ನು ಬೆನ್ನಟ್ಟಿ ಕಚ್ಚತೊಡಗಿದೆ. ಈಗ ಅದರ ದಾಳಿಗೆ ಪಟ್ಟಣದ ಜನ ಭಯಭೀತರಾಗಿದ್ದಾರೆ.
ಮೂರು ದಿನಗಳಿಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಅಧ್ಯಕ್ಷರು ಮತ್ತು ಸದಸ್ಯರು ಮುಸಿಯಾ ಹಿಡಿಯಲು ಶ್ರಮಿಸುತ್ತಿದ್ದಾರೆ. ಆದರೆ ಅದು ಯಾರ ಕೈಗೂ ಸಿಗದೆ ಮಾಯವಾಗುತ್ತಿದೆ. ಸಾರ್ವಜನಿಕರಿಂದ ಬಂದ ದೂರು ಆಧರಿಸಿ ಮುಖ್ಯಾಧಿಕಾರಿ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಬುಧವಾರ ಮುಸಿಯಾವನ್ನು ಬೆನ್ನಟ್ಟಿ ಹಿಡಿಯಲು ಯತ್ನಿಸಿದರೂ ಅದು ತಪ್ಪಿಸಿಕೊಂಡಿದೆ.
ಗುರುವಾರ ತಜ್ಞರನ್ನು ಕರೆಯಿಸಿ ಮುಸಿಯಾ ಹಿಡಿಸಲಾಗುವುದು ಎಂದು ಅರಣ್ಯಾಧಿಕಾರಿ ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮುಸಿಯಾ ಹಿಡಿಯುವ ಕೆಲಸದಲ್ಲಿ ತೊಡಗಿದ್ದ ಸಿಬ್ಬಂದಿಯ ಜೊತೆ ಇಡೀ ದಿನ ಅಧ್ಯಕ್ಷ ಶ್ರೀಧರ್, ಸದಸ್ಯ ರಂಗನಾಥ್ ಅವರೂ ಓಡಾಡಿದ್ದು ವಿಶೇಷವಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.