ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿಗೂ ಇರಲಿ ಅಕಾಡೆಮಿಕ್‌ ಕೌನ್ಸಿಲ್‌

ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅಭಿಮತ
Last Updated 6 ಡಿಸೆಂಬರ್ 2018, 15:40 IST
ಅಕ್ಷರ ಗಾತ್ರ

ದಾವಣಗೆರೆ: ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸಲು ಇರುವಂತೆ ಪದವಿ ಪೂರ್ವ ಶಿಕ್ಷಣಕ್ಕೂ ಅಕಾಡೆಮಿಕ್‌ ಕೌನ್ಸಿಲ್‌ ರಚಿಸಬೇಕು ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹಾಗೂ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಆಶ್ರಯದಲ್ಲಿ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಪಿಯುಸಿಗೆ ರಚಿಸುವ ಅಕಾಡೆಮಿಕ್‌ ಕೌನ್ಸಿಲ್‌ನಲ್ಲಿ ಶಿಕ್ಷಣ ತಜ್ಞರು ಇರಬೇಕು. ಅದರಲ್ಲಿಯೇ ಪಠ್ಯಕ್ರಮವನ್ನು ರಚಿಸಬೇಕು. ಶಿಕ್ಷಣದ ಜೊತೆಗೆ ಜ್ಞಾನ ವಿನಿಮಯವೂ ಆಗಬೇಕು ಎಂದು ಹೇಳಿದರು.

ಪಾಠಕ್ಕೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಶಿಕ್ಷಕರು ತರಗತಿಗೆ ಹಾಜರಾಗಬೇಕು. ಬೋಧನಾ ಪರಿಕರಗಳನ್ನು ತೆಗೆದುಕೊಂಡು ಹೋಗಬೇಕು. ತರಗತಿ ಸೃಜನಶೀಲತೆಯಿಂದ ಕೂಡಿರಬೇಕು. ಮಕ್ಕಳ ಮನಸ್ಸನ್ನು ಹಿಡಿದಿಡುವಂತೆ ಪಾಠ ಮಾಡಬೇಕು ಎಂದು ಅವರು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳೂ ತಮ್ಮ ಮಕ್ಕಳು ಎಂದು ಶಿಕ್ಷಕರು ಭಾವಿಸಬೇಕು. ಅವರ ಆಸಕ್ತಿಯನ್ನು ಗುರುತಿಸಿ, ಪ್ರೋತ್ಸಾಹಿಸಬೇಕು ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ದೇಶದಲ್ಲಿ 400ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ. ಸುಮಾರು 1,200 ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳಿವೆ. ಹೀಗಿದ್ದರೂ ನಾವು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿದ್ದೇವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ವಿದ್ಯಾರ್ಥಿಗಳನ್ನು ಸನ್ಮಾರ್ಗದತ್ತ ಶಿಕ್ಷಕರು ತೆಗೆದುಕೊಂಡು ಹೋಗಬೇಕು’ ಎಂದು ಹೇಳಿದರು.

ಶಾಸಕರಾದ ಎಸ್.ಎ. ರವೀಂದ್ರನಾಥ, ಮಾಡಾಳು ವಿರೂಪಾಕ್ಷಪ್ಪ, ಇಂದಿರಾ ರಾಮಚಂದ್ರಪ್ಪ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ. ದಾದಾಪೀರ್ ನವಿಲೇಹಾಳ್, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಪಾಲಾಕ್ಷಿ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಮುಖಂಡ ಎ.ಎಚ್. ನಿಂಗೇಗೌಡ, ಎಸ್.ಆರ್. ವೆಂಕಟೇಶ್, ಎಂ. ಜಯಣ್ಣ, ಎಚ್.ಎಸ್. ರಂಗಪ್ಪ, ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಬೋಧಕ, ಬೋಧಕೇತರ ನೌಕರರ ಒಕ್ಕೂಟದ ಅಧ್ಯಕ್ಷ ಎಂ.ಪಿ. ಕರಿಬಸಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಹಾಲೇಶಪ್ಪ ಉಪಸ್ಥಿತರಿದ್ದರು.

‘ಅಧಿಕಾರಿಗಳ ಮಾತು ಕೇಳಿ ಪ್ರಯೋಗ ಮಾಡಬೇಡಿ’
‘ಸರ್ಕಾರ ಐಎಎಸ್‌ ಅಧಿಕಾರಿಗಳ ಮಾತು ಕೇಳಿ ನಮ್ಮ ಮೇಲೆ ಪ್ರಯೋಗ ಮಾಡುವುದು ಬೇಡ. ಕೆಲವು ಅಧಿಕಾರಿಗಳ ತಪ್ಪು ನಿರ್ಧಾರಗಳಿಂದಾಗಿ ಇಲಾಖೆ ಅಧೋಗತಿಗೆ ಹೋಗಿದೆ’ ಎಂದು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅಭಿಪ್ರಾಯಪಟ್ಟರು.

ಗುತ್ತಿಗೆ ಶಿಕ್ಷಕರ ಎಳು ಇನ್‌ಕ್ರಿಮೆಂಟ್‌ಗಳನ್ನು ವಾಪಸ್‌ ಪಡೆಯಲು ಮುಂದಾಗಿರುವುದು ಸರಿಯಲ್ಲ. ಶೇ 75ರಷ್ಟು ನೌಕರರು ನಿವೃತ್ತರಾಗುತ್ತಿದ್ದು, ಇದರಿಂದ ಅವರಿಗೆ ತೊಂದರೆಯಾಗಲಿದೆ. ಈ ಸಂಬಂಧ ₹ 75 ಕೋಟಿ ಮನ್ನಾ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅವರು ಹೇಳಿದರು.

‘ವೇತನ ತಾರತಮ್ಯ ಸರಿಪಡಿಸಲು ಒತ್ತಾಯಿಸಿ ಇದುವರೆಗೆ ಕೈಗೊಂಡ ಹೋರಾಟಗಳಿಂದ ಅರ್ಧದಷ್ಟು ಯಶಸ್ಸು ಕಂಡಿದ್ದೇವೆ. ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಆದರೆ, ನಮ್ಮಿಂದ ಆಯ್ಕೆಯಾಗಿ ಹೋದವರೇ ನೋಟಿಸ್‌ ನೀಡುತ್ತಿದ್ದಾರೆ. ಇದಕ್ಕೆ ನಾವು ಹೆದರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT