ಬೀದಿಬದಿ ವ್ಯಾಪಾರಿಗಳಿಗೆ 20ರೊಳಗೆ ಪರ್ಯಾಯ ಸ್ಥಳ ನಿಗದಿಪಡಿಸಿ

7
ದಾವಣಗೆರೆ: ನಗರಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಮೇಶ್‌ ಸೂಚನೆ

ಬೀದಿಬದಿ ವ್ಯಾಪಾರಿಗಳಿಗೆ 20ರೊಳಗೆ ಪರ್ಯಾಯ ಸ್ಥಳ ನಿಗದಿಪಡಿಸಿ

Published:
Updated:
Deccan Herald

ದಾವಣಗೆರೆ: ಕೆ.ಆರ್‌. ಮಾರ್ಕೆಟ್‌ನ ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳವನ್ನು ಗುರುತಿಸಿ ಸೆ. 20ರ ಒಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೀದಿಬದಿ ವ್ಯಾಪಾರಿಗಳಿಗೆ ಜಾಗ ಗುರುತಿಸುವುದಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪಾಲಿಕೆ, ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕೆ.ಆರ್‌. ಮಾರ್ಕೆಟ್‌ನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ರಸ್ತೆ ಅಭಿವೃದ್ಧಿಪಡಿಸುವುದಕ್ಕಾಗಿ ಮರಗಳನ್ನು ಕಡಿಯುವುದಕ್ಕೂ ಮುನ್ನ ಅಲ್ಲಿನ ವ್ಯಾಪಾರಿಗಳಿಗೆ ಒಂದು ವಾರ ಮುಂಚೆ ಮಾಹಿತಿ ನೀಡಿ. ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ. ಒಂದೇ ರಸ್ತೆಯಲ್ಲಿ ಏಕಕಾಲದಲ್ಲಿ ಎರಡೂ ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕೆಲಸವನ್ನು ಕೈಗೆತ್ತಿಕೊಳ್ಳಬೇಡಿ ಎಂದು ತಿಳಿಸಿದರು.

ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ, ಗುರುತಿನ ಚೀಟಿ ವಿತರಿಸಬೇಕು. ಜಕಾತಿ ಹೆಸರಿನಲ್ಲಿ ವಸೂಲಿ ಮಾಡುವ ಕಂದಾಯಕ್ಕೆ ರಸೀದಿ ನೀಡಬೇಕು. ಕೆ.ಆರ್‌. ಮಾರುಕಟ್ಟೆಯಲ್ಲಿ ಅಧಿಕೃತವಾಗಿ ವ್ಯಾಪಾರ ನಡೆಸುತ್ತಿರುವ ಎಲ್ಲರಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಎಸ್‌ಯುಸಿಐ ಮುಖಂಡರಾದ ಮಂಜುನಾಥ್‌ ಕೈದಾಳೆ, ಅಣಬೇರು ತಿಪ್ಪೇಸ್ವಾಮಿ, ಮಂಜುನಾಥ ರೆಡ್ಡಿ ಒತ್ತಾಯಿಸಿದರು.

ಬೀದಿಬದಿ ವ್ಯಾಪಾರಿಗಳಿಗೆ ಮಳಿಗೆ ನಿರ್ಮಾಣ ಮಾಡುವ ಜವಾಬ್ದಾರಿ ಎಪಿಎಂಸಿಯದ್ದು. ಹೀಗಾಗಿ, ಎಪಿಎಂಸಿ ಅಧಿಕಾರಿಗಳ ಸಭೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಮರಗಳ ಕಡಿತಲೆ ನಿಲ್ಲಿಸುವಂತೆ ವ್ಯಾಪಾರಿಗಳು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ಅಧಿಕಾರಿಗಳು, ಅಭಿವೃದ್ಧಿಗಾಗಿ ಮರಗಳನ್ನು ಕಡಿಯುವುದು ಅನಿವಾರ್ಯ. ಈ ಮರಗಳನ್ನು ತೆರವುಗೊಳಿಸುವುದಕ್ಕೆ ಪರ್ಯಾಯವಾಗಿ, ₹ 20 ಸಾವಿರ ಬೆಲೆಯ ವಿದೇಶಿ ಮರಗಳನ್ನು ನೆಡಲಾಗುವುದು ಎಂದರು.

ಪ್ರಾಯೋಗಿಕವಾಗಿ ಒಂದು ಮರವನ್ನು ಮಾತ್ರ ನೆಟ್ಟು ಆರೈಕೆ ಮಾಡಿ, ಸಾರ್ವಜನಿಕರ ಪ್ರತಿಕ್ರಿಯೆ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಸಭೆಯಲ್ಲಿ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ಅಧಿಕಾರಿಗಳಾದ ಗುರುಪಾದಯ್ಯ, ಷರೀಫ್‌, ವ್ಯಾಪಾರಿಗಳ ಸಂಘದ ಅಧ್ಯಕ್ಷ ರಮೇಶ್‌, ಕಾರ್ಯದರ್ಶಿ ಇಸ್ಮಾಯಿಲ್‌, ಖಜಾಂಚಿ ವೀರೇಶ್‌ ಅವರೂ ಇದ್ದರು.

ಸಭೆಗೂ ಮುನ್ನ ಕೆ.ಆರ್‌. ಮಾರ್ಕೆಟ್‌ನ ಬೀದಿಬದಿ ವ್ಯಾಪಾರಿಗಳ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಎಸ್‌ಯುಸಿಐ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !