ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ ಸಂವಿಧಾನದ ಆಶಯಕ್ಕೆ ಮಾರಕ: ಸದಾಶಿವ ಪ್ರಭು

ಕಚೇರಿಗಳಲ್ಲಿ ಆಂತರಿಕ ಸಮಿತಿ ರಚನೆ ಕಡ್ಡಾಯ
Last Updated 9 ಡಿಸೆಂಬರ್ 2021, 16:12 IST
ಅಕ್ಷರ ಗಾತ್ರ

ದಾವಣಗೆರೆ: ‘ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು ಸಂವಿಧಾನ ಕಲ್ಪಿಸಿದ ಸಮಾನತೆ, ಸ್ವಾತಂತ್ರ್ಯದ ಆಶಯಕ್ಕೆ ಧಕ್ಕೆ ತರುವಂತದ್ದಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು.

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮ 2013 ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ದೌರ್ಜನ್ಯ ತಡೆಗಟ್ಟಿ, ಮಹಿಳೆಯರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ 2013ರಲ್ಲಿಯೇ ಅಧಿನಿಯಮವನ್ನು ಸರ್ಕಾರ ಜಾರಿಗೊಳಿಸಿದೆ. ಮಹಿಳೆಯರ ರಕ್ಷಣೆಗೆ ಇದು ದೊಡ್ಡ ಮೈಲಿಗಲ್ಲಾಗಿದೆ. 10ಕ್ಕಿಂತ ಹೆಚ್ಚು ಜನ ಕೆಲಸ ಮಾಡುವ ಎಲ್ಲ ಸರ್ಕಾರಿ, ಖಾಸಗಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿ ಒಳಗೊಂಡ ಆಂತರಿಕ ಸಮಿತಿ ರಚಿಸುವುದು ಕಡ್ಡಾಯವಾಗಿದೆ. ಸಮಿತಿ ರಚಿಸದಿರುವುದು ಅಪರಾಧವಾಗಲಿದೆ’ ಎಂದು ಹೇಳಿದರು.

ಡಿವೈಎಸ್‌ಪಿ ಕನ್ನಿಕಾ ಸಕ್ರಿವಾಲ್, ‘ದೇಶದಲ್ಲಿ ಕೆಲಸದ ಸ್ಥಳಗಳಲ್ಲಿ ಶೇ 48ರಷ್ಟು ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ದೇಶದ ಅಭಿವೃದ್ಧಿ ಸೂಚ್ಯಂಕ ಜಿಡಿಪಿ ಬೆಳವಣಿಗೆಯಲ್ಲಿ ಕೇವಲ ಶೇ 18ರಷ್ಟು ಮಾತ್ರ ಮಹಿಳೆಯರ ಪಾಲಿದೆ ಎಂಬುದು ವಿಪರ್ಯಾಸ. ಅಧಿನಿಯಮದ ಕುರಿತು ಮಹಿಳಾ ನೌಕರರಲ್ಲಿ ಅರಿವಿನ ಕೊರತೆಯಿದೆ. ಮಹಿಳೆಯರು ಕಚೇರಿಗಳಲ್ಲಿ ದಕ್ಷತೆಯಿಂದ, ಪ್ರಾಮಾಣಿಕತೆಯಿಂದ, ಉತ್ತಮ ಸೇವೆ ಸಲ್ಲಿಸುವಂತಹ ಪೂರಕ ವಾತಾವರಣ ಇರಬೇಕು. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ’ ಎಂದು ತಿಳಿಸಿದರು.

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಜಿಲ್ಲಾ ಮಟ್ಟದ ಆಂತರಿಕ ಸಮಿತಿಯ ಸರ್ಕಾರೇತರ ಸಂಘದ ಪ್ರತಿನಿಧಿ, ವಕೀಲರಾದ ಅನಿತಾ ಸಿ.ಪಿ., ‘ಬಹಳಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಉದ್ಯೋಗ ಕಳೆದುಕೊಳ್ಳುವ ಭಯ, ಸಮಾಜ ಏನು ಎನ್ನುತ್ತದೆಯೋ ಎಂಬ ಆತಂಕದಿಂದಾಗಿ ಲೈಂಗಿಕ ದೌರ್ಜನ್ಯವನ್ನು ಸಹಿಸಿಕೊಳ್ಳುವುದು ಸರಿಯಲ್ಲ. ಮೌನ ಹಾಗೂ ಹಿಂಜರಿಕೆಯೇ ಅಪರಾಧ ಪ್ರಕರಣಗಳು ಹೆಚ್ಚಲು ಕಾರಣವಾಗುತ್ತದೆ. ಮಹಿಳೆ ನೀಡುವ ಒಂದು ದೂರು ಮುಂದೆ ಆಗುವ ಎಷ್ಟೋ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಬಲ್ಲದು’ ಎಂದು ಹೇಳಿದರು.

‘ಮೊಬೈಲ್‌ನಲ್ಲಿ ಅಶ್ಲೀಲ ಸಂದೇಶ, ಫೋಟೊ, ವಿಡಿಯೊ ಹಂಚಿಕೊಳ್ಳುವುದು ಕೂಡ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುತ್ತದೆ. ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚು ಕಂಡುಬರುತ್ತವೆ. ನೊಂದವರಿಗೆ, ಶೋಷಣೆಗೆ ಒಳಗಾದವರಿಗೆ ಸಹದ್ಯೋಗಿಗಳು ಧೈರ್ಯ ನೀಡುವ, ಆತ್ಮಸ್ಥೈರ್ಯ ತುಂಬುವ ಕಾರ್ಯ ಆಗಬೇಕು’ ಎಂದು ಅಭಿಪ್ರಾಯಪಟ್ಟರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ‘ಮಹಿಳೆಗೆ ತಾಳ್ಮೆ, ಸಹನೆ ಪುರುಷರಿಂಗಿಂತಲೂ ಹೆಚ್ಚು ಇದೆ. ಅಂದಮಾತ್ರಕ್ಕೆ ಲೈಂಗಿಕ ದೌರ್ಜನ್ಯವನ್ನು ಏಕೆ ಸಹಿಸಿಕೊಳ್ಳಬೇಕು? ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೋಷಿತರಿಗೆ ಆಂತರಿಕ ಸಮಿತಿಗಳು, ಕಾನೂನು ಸೇವಾ ಪ್ರಾಧಿಕಾರಗಳ ರಕ್ಷಣೆ ಹಾಗೂ ನೆರವು ನೀಡಲಾಗುತ್ತದೆ’ ಎಂದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿವೈಎಸ್‌ಪಿ ಬಸವರಾಜ ನಾಯಕ್, ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್, ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ಪಾಲಿಕೆ ಉಪ ಆಯುಕ್ತರಾದ ನಳಿನಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT