ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಕುಕ್ಕರ್‌, ಸೀರೆ ಹಂಚಿ ಮತ ಕೇಳುತ್ತಿರುವ ಶಾಮನೂರು: ಜಾಧವ್‌ ಆರೋಪ

Last Updated 19 ಮಾರ್ಚ್ 2023, 6:36 IST
ಅಕ್ಷರ ಗಾತ್ರ

ದಾವಣಗೆರೆ: ‘ಅಭಿವೃದ್ಧಿಯ ಹರಿಕಾರರು ಎಂದು ಹೇಳಿಕೊಳ್ಳುವ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ತಾವು ಮಾಡಿರುವ ಅಭಿವೃದ್ಧಿಯ ಹೆಸರಲ್ಲಿ ಮತ ಕೇಳುವುದನ್ನು ಬಿಟ್ಟು ಜನರಿಗೆ ಸೀರೆ, ಕುಕ್ಕರ್ ಹಂಚಿ ಮತ ಕೇಳುತ್ತಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಆರೋಪಿಸಿದರು.

‘ತಮ್ಮಿಂದಲೇ ದಾವಣಗೆರೆ ಅಭಿವೃದ್ಧಿ ಕಂಡಿದೆ ಎಂದು ಹೇಳಿಕೊಂಡು ಓಡಾಡುವ ಇವರು ದಕ್ಷಿಣ ಕ್ಷೇತ್ರದಲ್ಲಿ ಹೋದರೆ ಅಲ್ಲಿ ಅದೆಷ್ಟು ಅಭಿವೃದ್ಧಿಯಾಗಿದೆ ಎಂಬುದನ್ನು ಜನರೇ ಹೇಳುತ್ತಾರೆ. ಈಗ ಅದನ್ನು ಮುಚ್ಚಿಹಾಕಲು ಕಳಪೆ ಗುಣಮಟ್ಟದ ಸೀರೆ, ಕುಕ್ಕರ್‌ ಹಂಚುತ್ತಿದ್ದಾರೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಕಾಂಗ್ರೆಸ್‌ನವರು ಮಾತೆತ್ತಿದರೆ ಬಿಜೆಪಿಗೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತಾರೆ. ಹಗಲು ದರೋಡೆ ಮಾಡುವವರು ಕಾಂಗ್ರೆಸ್‌ನವರೇ ಹೊರತು ಬಿಜೆಪಿಗರಲ್ಲ. ಇವರು ಪರ್ಸೆಂಟೇಜ್ ಪಡೆದಿಲ್ಲ ಎನ್ನುವುದಾದರೆ ಇವರಿಗೆ ಮೊದಲಿದ್ದಷ್ಟೇ ಆಸ್ತಿ ಇರಬೇಕಿತ್ತು. ಆಗ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅಕ್ರಮ ಆಸ್ತಿಗಳನ್ನೂ ನಿರ್ವಹಣೆ ಮಾಡಲು ಅಧಿಕಾರ ಬೇಕು. ಹಾಗಾಗಿ ಅಪ್ಪ, ಮಗ ಇಬ್ಬರೂ ಚುನಾವಣೆಗೆ ನಿಲ್ಲುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಜೆ.ಎಚ್. ಪಟೇಲ್ ಅವರು ದಾವಣಗೆರೆ ಜಿಲ್ಲೆ ಮಾಡಿದ್ದರಿಂದ ಅಭಿವೃದ್ಧಿ ಸಾಧ್ಯವಾಗಿದೆಯೇ ಹೊರತು ಶಾಮನೂರು ಕುಟುಂಬದಿಂದಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದಾವಣಗೆರೆ ಅಭಿವೃದ್ಧಿಯಾಯಿತು. ಜಿಲ್ಲಾಡಳಿತ ಭವನ, ಪಾರ್ಕ್‌ಗಳ ಅಭಿವೃದ್ಧಿ, ರೈಲ್ವೆ, ಕೇಂದ್ರೀಯ ವಿದ್ಯಾಲಯ ಹೀಗೆ ಎಲ್ಲ ಅಭಿವೃದ್ಧಿ ಕಾರ್ಯಗಳು ಬಿಜೆಪಿಯ ಅವಧಿಯಲ್ಲಿ ನಡೆದಿವೆ’ ಎಂದು ಸಮರ್ಥಿಸಿಕೊಂಡರು.

ಮುಖಂಡರಾದ ಲೋಕಿಕೆರೆ ನಾಗರಾಜ್, ರಾಜನಹಳ್ಳಿ ಶಿವಕುಮಾರ್, ಸೋಗಿ ಶಾಂತಕುಮಾರ್, ಪಿ.ಸಿ. ಶ್ರೀನಿವಾಸ್, ಎಲ್.ಡಿ. ಗೋಣೆಪ್ಪ, ಟಿಂಕರ್ ಮಂಜಣ್ಣ, ಗೋಪಾಲ್ ರಾವ್ ಮಾನೆ, ಶಿವನಗೌಡ ಪಾಟೀಲ್‌ ಇದ್ದರು.

ಮತದಾರರಿಗೆ ಸೀರೆ, ಕುಕ್ಕರ್‌ ನಾವೇನು ಹಂಚಿಲ್ಲ. ಬಿಜೆಪಿಯವರೇ ನಮಗೆ ಕೆಟ್ಟ ಹೆಸರು ತರುವುದಕ್ಕಾಗಿ ನಮ್ಮ ಹೆಸರಲ್ಲಿ ಹಂಚಿರಬೇಕು.
–ಎಸ್‌.ಎಸ್‌. ಮಲ್ಲಿಕಾರ್ಜುನ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT