ಮಂಗಳವಾರ, ಮೇ 17, 2022
26 °C
ಮೇಯರ್ ಚುನಾವಣೆ: ಪಾಲಿಕೆ ಕಚೇರಿ ಎದುರು ಕಾಂಗ್ರೆಸ್ ಸದಸ್ಯರ ಪ್ರತಿಭಟನೆ

ಶಂಕರ್, ಚಿದಾನಂದಗೌಡ ಹೆಸರು ಸೇರ್ಪಡೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮೇಯರ್ ಚುನಾವಣೆ ಸಂಬಂಧ ಬಿಜೆಪಿಯವರು ದಾವಣಗೆರೆಯಲ್ಲಿ ವಾಸವಿಲ್ಲದ ವಿಧಾನ‍ಪರಿಷತ್ ಸದಸ್ಯರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ನಗರಪಾಲಿಕೆ ಆಯುಕ್ತರ ಕೊಠಡಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಚುನಾವಣೆ ಸಂಬಂಧ ಪ್ರಾದೇಶಿಕ ಆಯುಕ್ತರ ಕಚೇರಿಗೆ ಕಳುಹಿಸಿರುವ ಮತದಾರರ ಪಟ್ಟಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಆರ್. ಶಂಕರ್ ಹಾಗೂ ಚಿದಾನಂದಗೌಡ ಅವರ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಆರೋಪಿಸಿ ಕೆಪಿಸಿಸಿ ವಕ್ತಾರ
ಡಿ. ಬಸವರಾಜ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ನೇತೃತ್ವದಲ್ಲಿ ಧರಣಿ ಕುಳಿತು ಪಾಲಿಕೆ ಆಯುಕ್ತರ ವಿರುದ್ಧ ಘೋಷಣೆ ಕೂಗಿದರು.

ಸ್ಥಳಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್ ಭೇಟಿ ನೀಡಿ, ‘ಇಲ್ಲಿ ಪ್ರತಿಭಟನೆ ನಡೆಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದರೂ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಪ್ರತಿಭಟನೆಯ ನಂತರ ಸದಸ್ಯರು ಆರ್. ಶಂಕರ್ ಅವರ ವಿಳಾಸವಿರುವ ಮನೆಯನ್ನು ಪರಿಶೀಲಿಸಿದರು. 

ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಮಾತನಾಡಿ, ‘ಈ ಹಿಂದಿನ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ವಾಸವಿಲ್ಲದ ಸದಸ್ಯರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವಂತೆ ಕಳೆದ ಡಿ. 17ರಂದು ಮತದಾನ ನೋಂದಣಾಧಿಕಾರಿಗೆ ಮನವಿ ನೀಡಿದ್ದೆ. ಬಿಎಲ್‌ಒ ಆ ಮನೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ವರದಿ ನೀಡಿದ್ದು, ಈ ವ್ಯಕ್ತಿಗಳು ವಾಸವಿಲ್ಲದೇ ಇರುವುದರಿಂದ ಹೆಸರನ್ನು ಕೈಬಿಡಬೇಕು ಎಂದು ಇಆರ್‌ಒ ವರದಿ ನೀಡಿದ್ದಾರೆ’ ಎಂದು ಹೇಳಿದರು.

‘ಜ. 14 ರಂದು ಪ್ರಾದೇಶಿಕ ಆಯುಕ್ತರ ಕಚೇರಿಗೆ ಕಳುಹಿಸಿದ ಪಟ್ಟಿಯಲ್ಲಿ 149ನೇ ಬೂತ್‌ನಲ್ಲಿ ಆರ್.ಶಂಕರ್ ಹಾಗೂ 238ರ ಬೂತ್‌ನಲ್ಲಿ ಏಕಾಏಕಿ ಚಿದಾನಂದಗೌಡರ ವೋಟ್ ಸೇರ್ಪಡೆಯಾಗಿದೆ. ಒಟ್ಟು 58 ಸದಸ್ಯರ ಪಟ್ಟಿ ಇದೆ. ಹೊಸ ಹೆಸರು ಸೇರ್ಪಡೆಯಲ್ಲಿ ನಂಬರ್ ಹಾಗೂ ಭಾವಚಿತ್ರ ಇಲ್ಲ. ಅವರು ಅಕ್ರಮವಾಗಿ ಹೆಸರು ತೋರಿಸಿದ್ದು, ಈ ಕುರಿತು ಪ್ರಾದೇಶಿಕ ಆಯುಕ್ತರಿಗೆ ಮನವಿ ಕೊಟ್ಟಿದ್ದೇವೆ’ ಎಂದರು.

ಡಿ.ಬಸವರಾಜ್ ಮಾತನಾಡಿ, ‘ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಸಂಬಂಧ ಮಾಹಿತಿ ಕೇಳಲು ಬಂದರೆ ಅಧಿಕಾರಿಗಳು ಇರುವುದಿಲ್ಲ. ಎಲ್ಲರೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರುತ್ತಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಎಲ್ಲವೂ ನಡೆಯುವುದಾದರೆ  ಪಾಲಿಕೆ ಕಚೇರಿ ಯಾಕಿರಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲೇ ವಿರೋಧ ಪಕ್ಷದ ನಾಯಕರಿಗೆ ಕೊಠಡಿ ನೀಡಲಿ’ ಎಂದು ಆಗ್ರಹಿಸಿದರು. 

‘ವಿರೋಧ ಪಕ್ಷದ ನಾಯಕರು ಮೂರು ದಿನ ಸುತ್ತಿದರೂ ಮಾಹಿತಿ ನೀಡಲು ಪಾಲಿಕೆ ಆಯುಕ್ತರು ಪಲಾಯನ ಮಾಡುತ್ತಿದ್ದಾರೆ. ಮತದಾನ ಪ್ರಕ್ರಿಯೆ ವಿಳಂಬ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಆರ್.ಶಂಕರ್, ಚಿದಾನಂದಗೌಡ ಅವರು ದಾವಣಗೆರೆ ನಿವಾಸಿಗಳಲ್ಲ. ಅವರ ಮತ ಸೇರಿಸಲು ಬಿಡುವುದಿಲ್ಲ. ಬಿಜೆಪಿ ಎಂಎಲ್‌ಸಿಗಳು ಟೂರಿಂಗ್ ಟಾಕೀಸ್‌ನಂತೆ ಎಲ್ಲ ಕಡೆಯೂ ಮತದಾನ ಮಾಡುತ್ತಿದ್ದಾರೆ. ಮುಂದಿನ ದಿನ ಯಡಿಯೂರಪ್ಪನವರೇ
ಬಂದು ವೋಟ್ ಮಾಡಿದರೂ ಆಶ್ಚರ್ಯವಿಲ್ಲ. ಇದರ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಸದಸ್ಯ ದೇವರಮನಿ ಶಿವಕುಮಾರ್ ಮಾತನಾಡಿ, ‘ಬಿಜೆಪಿ ಎಂಎಲ್‌ಸಿಗಳು ಕೇವಲ ವೋಟ್ ಹಾಕಲು ಮಾತ್ರ ಇಲ್ಲಿಗೆ ಬರುತ್ತಾರೆ. ಆದರೆ ದಾವಣಗೆರೆಗೆ ಎಷ್ಟು ಅನುದಾನ ಕೊಟ್ಟಿದ್ದಾರೆ’ ಎಂದು ಪ್ರಶ್ನಿಸಿದರು.

ಸದಸ್ಯರಾದ ಚಮನ್‌ಸಾಬ್, ಜಿ.ಎನ್.ಶ್ರೀನಿವಾಸ್ ಮುಖಂಡರಾದ ಆರ್.ಎಚ್. ನಾಗಭೂಷಣ್, ಉಮೇಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು