ಶುಕ್ರವಾರ, ಮೇ 29, 2020
27 °C
ಶರಣ ಸಂಗಮ ಕಾರ್ಯಕ್ರಮದಲ್ಲಿ ವಿರಕ್ತಮಠದ ಬಸವಪ್ರಭು ಶ್ರೀ

ಲಿಂಗಾಯತ ಹೆಸರಿಗಿಂತ ಶರಣ ಧರ್ಮ ಸೂಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಶರಣ ಸಂಪತ್ತು– ಜಗದ ಸಂಪತ್ತು’ ಬಗ್ಗೆ ಮಂಗಳವಾರ ದಾವಣಗೆರೆ ಶಿವಯೋಗಾಶ್ರಮದ ಬಸವಕೇಂದ್ರದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಮಾತನಾಡಿದರು

ದಾವಣಗೆರೆ: ಲಿಂಗಾಯತ ಧರ್ಮಕ್ಕೆ ಶರಣ ಧರ್ಮ ಎಂದು ಹೆಸರಿಟ್ಟರೆ ಹೆಚ್ಚು ಅರ್ಥಪೂರ್ಣ ಎಂದು ಶಿವಯೋಗಾಶ್ರಮ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿನ ಮುರುಘರಾಜೇಂದ್ರ ವಿರಕ್ತಮಠ, ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್‌ನಿಂದ  ‘ಶರಣ ಸಂಪತ್ತು– ಜಗದ ಸಂಪತ್ತು’ ಬಗ್ಗೆ ಶಿವಯೋಗಾಶ್ರಮದ ಬಸವಕೇಂದ್ರದಲ್ಲಿ ಮಂಗಳವಾರ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಿಂಗಾಯತ ಧರ್ಮ ತಪ್ಪಲ್ಲ. ಬಸವಣ್ಣ ನಮ್ಮ ಗುರು. ವಚನ ನಮ್ಮ ಸಾಹಿತ್ಯ. 25 ಸಾವಿರದಿಂದ 30 ಸಾವಿರ ವಚನಗಳು ಸಿಕ್ಕಿವೆ. ಈ ಸಾಹಿತ್ಯದಲ್ಲಿ ಸುಮಾರು 15 ಸಾವಿರ ಬಾರಿ ಶರಣ ಎಂಬ ಶಬ್ದ ಬರುತ್ತದೆ. ಅದಕ್ಕಾಗಿ ಶರಣ ಧರ್ಮ ಎಂದರೆ ಒಳ್ಳೆಯದು ಎಂದು ಅವರು ಹೇಳಿದರು.

ಶರಣ ಎಂದರೆ ಸಕಲ ಜೀವರಾಶಿಗಳಿಗೆ ಒಳಿತು ಬಯಸುವವನು. ಶರಣ ಎಂದರೆ ತತ್ವಜ್ಞಾನಿ, ಸರ್ವಸಮಾನತೆಯ ಹರಿಕಾರ. ಸತ್ಯವನ್ನು ಅರಿತವನು. ಅರಿವು, ಆಚಾರ, ಅನುಭಾವ ಇರುವವನು. ಅರಿತವನು ಶರಣನಾಗುತ್ತಾನೆ. ಮರೆತವನು ಮಾನವನಾಗುತ್ತಾನೆ ಎಂದು ವಿಶ್ಲೇಷಿಸಿದರು.

ಈ ಸಮಾಜದ ದೊಡ್ಡ ಪಿಡುಗು ಜಾತಿ ವ್ಯವಸ್ಥೆ. ಈ ಜಾತಿ ವ್ಯವಸ್ಥೆಗೆ ಸವಾಲಾದವರು ಶರಣರು. ಹುಟ್ಟಿನಿಂದ, ಜಾತಿಯಿಂದ, ಹಣದಿಂದ, ಪಾಂಡಿತ್ಯದಿಂದ ಯಾರೂ ದೊಡ್ಡವರಲ್ಲ. ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸುವವರು ದೊಡ್ಡವರು. ಕಾಯಕ ಮಾಡಿ ಬಂದಿದ್ದೇ ದೇವರ ಪ್ರಸಾದ ಎಂದು ದಾಸೋಹ ಪ್ರಜ್ಞೆ ಇಟ್ಟುಕೊಂಡವರು ದೊಡ್ಡವರು ಎಂದು ಹೇಳಿದರು.

ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ‘ಭೌತಿಕ ಸಂಪತ್ತಿಗಾಗಿ ನಾವು ಬಡಿದಾಡುತ್ತೇವೆ. ಆದರೆ ಈ ಸಂಪತ್ತು ನಾಶವಾಗಿ ಹೋಗುತ್ತದೆ. ಅನುಭಾವದ ಸಂಪತ್ತು ಶಾಶ್ವತವಾಗಿ ಇರುತ್ತದೆ. 900 ವರ್ಷದ ಹಿಂದಿನ ಶರಣರನ್ನು ನಾವು ಇಂದಿಗೂ ಸ್ಮರಣೆ ಮಾಡುತ್ತೇವೆ ಎಂದರೆ ಅವರು ನಾಶವಾಗದ ಸಂಪತ್ತು ಎಂದು ತಿಳಿಯಬೇಕು’ ಎಂದು ವಿವರಿಸಿದರು.

ನುಡಿದಂತೆ ನಡೆ, ಕಾಯಕವೇ ಕೈಲಾಸ, ಕಳಬೇಡ ಕೊಲಬೇಡ ಮುಂತಾದ ಚಾರಿತ್ರ್ಯದ ಸಂಪತ್ತನ್ನು ಶರಣರು ನೀಡಿದ್ದಾರೆ. ಬದುಕನ್ನು ಶಿವನಿಗೆ, ಜನರ ಸೇವೆಗೆ ಮುಡಿಪಾಗಿಟ್ಟರೆ ಆತ ಶರಣ ಎಂದು ಹೇಳಿದರು.

ತಿರುವಳ್ಳಿ ವಿರಕ್ತಮಠದ ಬಸವನಿರಂಜನ ಸ್ವಾಮೀಜಿ, ಮಾಜಿ ಶಾಸಕ ಯಜಮಾನ್‌ ಮೋತಿ ವೀರಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಕುಮಾರ ಬೆಕ್ಕೇರಿ, ಅರುಣ ಚಿನ್ನಾಭರಣ ಸಂಸ್ಥೆಯ ನಲ್ಲೂರ ಅರುಣಾಚಲ ರೇವಣಕರ್‌ ಉಪಸ್ಥಿತರಿದ್ದರು. ಕುಂಟೋಜಿ ಚನ್ನಪ್ಪ ಸ್ವಾಗತಿಸಿದರು. ಜ್ಯೋತಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

ಆರಂಭದಲ್ಲಿ ಬಸವಲೋಕದ ಸದಸ್ಯರಿಂದ ವಚನಸಂಗೀತ ನಡೆಯಿತು. ಕಾರ್ಯಕ್ರಮದ ಬಳಿಕ ರಾಮದುರ್ಗ ಸಾಲಾಪುರದ ನಾಟ್ಯಯೋಗ ಕಲಾವಿದರಿಂದ ‘ಮೃತ್ಯೋರ್ಮ’ ನಾಟಕ ಪ್ರದರ್ಶನಗೊಂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು