ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ದರ ಹೆಚ್ಚಳದ ನಿರೀಕ್ಷೆಯಲ್ಲಿ ಹಾಲು ಉತ್ಪಾದಕರು

ಹಸುಗಳ ಮೇವಿನ ದರ ದುಬಾರಿ; ನಿರ್ವಹಣೆಯೇ ಸವಾಲು
Last Updated 16 ಮೇ 2022, 3:02 IST
ಅಕ್ಷರ ಗಾತ್ರ

ದಾವಣಗೆರೆ: ಶಿಮುಲ್‌ನ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ರೈತರು, ರೈತ ಮಹಿಳೆಯರು, ಕೂಲಿಕಾರರು ಹಾಲು ಮಾರಾಟ ಮಾಡಿ ಜೀವನ ನಡೆಸುತ್ತಿದ್ದು, ಲೀಟರ್ ಹಾಲಿಗೆ ₹ 27.86 ದರ ನೀಡಲಾಗುತ್ತಿದೆ. ಆದರೆ, ಮೇವಿನ ದರ ದುಬಾರಿಯಾಗಿರುವ ಕಾರಣ ತೀವ್ರ ನಷ್ಟ ಎದುರಿಸುತ್ತಿದ್ದಾರೆ.

ಹಾಲು ಉತ್ಪಾದಕರು ಸಹಕಾರ ಸಂಘಕ್ಕೆ ತರುವ ಹಾಲನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹಾಲಿನಲ್ಲಿ ಜಿಡ್ಡಿನ ಅಂಶದ ಪ್ರಮಾಣ 3.5 ಇದ್ದರೆ ಮಾತ್ರ ₹ 27.86 ನೀಡಲಾಗುತ್ತಿದೆ. ಜಿಡ್ಡಿನ ಅಂಶದ ಪ್ರಮಾಣ 3ರಿಂದ 2.5ರ ಒಳಗೆ ಇದ್ದರೆ ₹ 22 ನೀಡಲಾಗುತ್ತಿದೆ. 2.5ಕ್ಕಿಂತ ಕಡಿಮೆ ಇರುವ ಹಾಲನ್ನು ವಾಪಸ್ ಕಳುಹಿಸಲಾಗುತ್ತಿದೆ. ಒಂದು ಹಸು 5 ಲೀಟರ್ ಹಾಲು ನೀಡಲು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಲಾ 3 ಕೆ.ಜಿ. ಹಿಂಡಿ ಅತ್ಯಗತ್ಯ. ಮೇವಿನ ದರ ಹೆಚ್ಚಳದಿಂದಾಗಿ ನಿಗದಿತ ಪ್ರಮಾಣದಲ್ಲಿ ಹಿಂಡಿ ನೀಡಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಹಸುಗಳ ನಿರ್ವಹಣೆ ತಿಳಿವಳಿಕೆ ಕೊರತೆಯಿಂದಲೂ ನಷ್ಟ ಅನುಭವಿಸುತ್ತಿದ್ದಾರೆ.

‘ರೈತರು ಉತ್ತಮ ಬೆಲೆ ನೀಡಿ ಹಸುಗಳನ್ನು ತಂದು ಕಟ್ಟುತ್ತಾರೆ. ಆದರೆ, ಅವುಗಳಿಗೆ ನೀಡಬೇಕಾದ ಮೇವಿನ ಪ್ರಮಾಣ, ಕಾಲ ಕಾಲಕ್ಕೆ ಚಿಕಿತ್ಸೆ, ಹಸುಗಳ ಗರ್ಭಧಾರಣೆ ಇತ್ಯಾದಿ ವಿಷಯಗಳ ಬಗ್ಗೆ ತಿಳಿವಳಿಕೆಯ ಕೊರತೆ ಇದೆ. ಪರಿಣಾಮವಾಗಿ ನಷ್ಟ ಅನುಭವಿಸುವಂತಾಗಿದೆ. ಪ್ರತಿ ಲೀಟರ್ ಹಾಲಿನ ದರವನ್ನು ₹ 32ಕ್ಕೆ ಹೆಚ್ಚಿಸಿದರೆ ಹಾಲು ಉತ್ಪಾದಕರು ಬದುಕುಳಿಯಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಕಾರಿಗನೂರು ಗ್ರಾಮದ ಹಾಲು ಉತ್ಪಾದಕ ಬಸವರಾಜ ಮುದೇನೂರು.

‘ಪ್ರತಿ ಲೀಟರ್ ಹಾಲಿಗೆ ₹ 5 ಪ್ರೋತ್ಸಾಹಧನ ನೀಡುತ್ತಿದ್ದು, ಈ ಮುಂಚೆ ಎರಡು ತಿಂಗಳಿಗೆ ಒಮ್ಮೆ ಸಿಗುತ್ತಿತ್ತು. ಈಗ ಆರು ತಿಂಗಳುಗಳಾದರೂ ನೀಡುವುದಿಲ್ಲ. ₹ 70 ಸಾವಿರದಿಂದ ₹ 80 ಸಾವಿರ ಕೊಟ್ಟು ಹಸು ಖರೀದಿಸಿ ತಂದಿರುತ್ತೇವೆ. ಹಸು ಮೃತಪಟ್ಟರೆ ₹ 35 ಸಾವಿರದಿಂದ ₹ 50 ಸಾವಿರದವರೆಗೆ ಮಾತ್ರವೇ ಇನ್ಶೂರೆನ್ಸ್ ನೀಡಲಾಗುತ್ತಿದೆ. ಹಸು ಮೃತಪಟ್ಟು ತಿಂಗಳುಗಳು ಕಳೆದರೂ ಇನ್‌ಶೂರೆನ್ಸ್ ಕಂಪನಿಗಳು ಹಣ ನೀಡಲು ಸತಾಯಿಸುತ್ತವೆ. ಇದರಿಂದಾಗಿ ಮತ್ತೊಂದು ಹಸು ಖರೀದಿಸಿ ತರಲು ಸಾಧ್ಯವಾಗುವುದಿಲ್ಲ. ಹಸು ಮೃತಪಟ್ಟ ತಿಂಗಳ ಒಳಗೆ ಹಣ ಪಾವತಿಸುವಂತೆ ಕಂಪನಿ ಮೇಲೆ ಒಕ್ಕೂಟದಿಂದ ಒತ್ತಡ ಹಾಕಬೇಕು’ ಎಂದು ಆಗ್ರಹಿಸುತ್ತಾರೆ ಅವರು.

‘ಮೂರು ವರ್ಷಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ ಬೆಳ ನಷ್ಟವಾಗಿ ಹುಲ್ಲು ಸಿಗುವುದು ಕಷ್ಟವಾಗಿದೆ. ಸಿಕ್ಕರೂ ದರ ಹೆಚ್ಚು. ಹಾಲಿಗೆ ನೀಡುವ ದರ ಮೇವಿನ ಖರ್ಚು ಅಲ್ಲಿಗಲ್ಲಿಗೇ ಸಮವಾಗುತ್ತದೆ. ನಯಾ ಪೈಸೆ ಲಾಭ ಉಳಿಯಲ್ಲ. ಹರಿಯಾಣ, ಪಂಜಾಬ್, ಮಹಾರಾಷ್ಟ್ರ, ತಮಿಳುನಾಡು ಮುಂತಾದೆಡೆ ಹಾಲು ಉತ್ಪಾದಕರಿಗೆ ₹ 40 ದರ ನೀಡಲಾಗುತ್ತಿದೆ. ಇಲ್ಲೂ ದರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸುತ್ತಾರೆ ಹರಿಹರ ತಾಲ್ಲೂಕಿನ ಬಿಳಸನೂರು ಹಾಲು ಉತ್ಪಾದಕರ ಒಕ್ಕೂಟದ ಕಾರ್ಯದರ್ಶಿ ಟಿ.ಎಂ. ನಾಗರಾಜ್.

**

‘ಶಿಮುಲ್‌’ ವಿಭಜಿಸಿ ಪ್ರತ್ಯೇಕ ಒಕ್ಕೂಟ ರಚಿಸುವಂತೆ ದಶಕದಿಂದ ಹೋರಾಟ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ಬಜೆಟ್‌ ಘೋಷಣೆ ಮಾಡಿದರೂ ಸಿದ್ಧತೆ ಆರಂಭಿಸಿಲ್ಲ. ಇದೊಂದು ಕಣ್ಣೊರೆಸುವ ತಂತ್ರದಂತೆ ಕಾಣುತ್ತಿದೆ.
-ಜಿ.ಪಿ. ಯಶವಂತರಾಜ್‌, ಶಿಮುಲ್‌ ನಿರ್ದೇಶಕ

ಹಸುಗಳಿಗೆ ತಿಂಡಿ ನೀಡುವ ಜತೆಗೆ ಹಸಿ ಮತ್ತು ಒಣ ಹುಲ್ಲಿನ ವ್ಯವಸ್ಥೆ ಮಾಡಿಕೊಂಡರೆ ಮಾತ್ರ ನಾಲ್ಕು ಕಾಸು ಉಳಿಯುತ್ತದೆ. ಇಲ್ಲದಿದ್ದರೆ ಏನೂ ಉಳಿಯುವುದಿಲ್ಲ. ಮನೆಯಲ್ಲಿಯೇ ಹಸು ಕಟ್ಟಿಕೊಂಡು ನಿಭಾಯಿಸುವುದು ಕಷ್ಟ.
-ಕಾವ್ಯಾ, ಹಾಲು ಉತ್ಪಾದಕರು, ನ್ಯಾಮತಿ

ಹಾಲಿನಲ್ಲಿ ಜಿಡ್ಡಿನ ಅಂಶದ ಪ್ರಮಾಣ 3.5 ಬರಲು ಹಸುವಿಗೆ ಯಾವ ಪ್ರಮಾಣದಲ್ಲಿ ಮೇವು ನೀಡಬೇಕು ಎಂಬ ಬಗ್ಗೆ ಸೂಕ್ತ ತಿಳಿವಳಿಕೆ ನೀಡಬೇಕು. ಹಸುಗಳ ವೈಜ್ಞಾನಿಕ ನಿರ್ವಹಣೆ ಬಗ್ಗೆ ವೈದ್ಯರು ಕಾಲ ಕಾಲಕ್ಕೆ ಅರಿವು ಮೂಡಿಸಬೇಕು.
-ಬಸವರಾಜ ಮುದೇನೂರು, ಹಾಲು ಉತ್ಪಾದಕರು, ಕಾರಿಗನೂರು

ಒಂದು ಲೀಟರ್ ಖನಿಜಯುಕ್ತ ನೀರಿಗೆ ₹ 30 ಕೊಟ್ಟು ಖರೀದಿಸಬೇಕು. ಆದರೆ, ದಿನವಿಡೀ ಶ್ರಮವಹಿಸಿ ಹಾಲು ಉತ್ಪಾದಿಸುವ ರೈತರಿಗೆ ಲೀಟರ್ ಹಾಲಿಗೆ ನೀಡುವ ದರ ಕಡಿಮೆ. ಲೀಟರ್ ಹಾಲಿನ ದರ ಹೆಚ್ಚಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು.
-ಟಿ.ಎಂ. ನಾಗರಾಜ್, ಕಾರ್ಯದರ್ಶಿ, ಹಾಲು ಉತ್ಪಾದಕರ ಸಹಕಾರ ಸಂಘ, ಬಿಳಸನೂರು

ಮತ್ತೆ ಲಾಭದ ಹಾದಿಯಲ್ಲಿ ಶಿಮುಲ್‌
-ಚಂದ್ರಹಾಸ ಹಿರೇಮಳಲಿ
ಶಿವಮೊಗ್ಗ:
ಕೋವಿಡ್‌ ನಂತರ ಸಾಕಷ್ಟು ಸಂಕಷ್ಟ ಅನುಭವಿಸಿದ್ದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಈಗ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದೆ.

ಪ್ರತಿದಿನ ಗುಣಮಟ್ಟದ ಹಾಲನ್ನು ರೈತರಿಂದ ಸ್ವೀಕರಿಸಲಾಗುತ್ತಿದ್ದು,ಸದ್ಯ ಲೀಟರ್‌ ಹಾಲಿಗೆ ₹ 27.86 ಇದೆ. 2022ನೇ ಸಾಲಿನಲ್ಲಿ ₹ 7 ಕೋಟಿ ನಿವ್ವಳ ಲಾಭವಾಗಿದೆ. ಪ್ರತಿದಿನ 6.30 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಆದರೆ, ಗ್ರಾಹಕರು ಖರೀದಿಸುತ್ತಿರುವ ಹಾಲಿನ ಪ್ರಮಾಣ 2.50 ಲಕ್ಷ ಲೀಟರ್ ದಾಟಿಲ್ಲ. 1 ಲಕ್ಷ ಲೀಟರ್ ನಂದಿನಿ ಉತ್ಪನ್ನಗಳಾದ ಪೇಡ, ಮೈಸೂರು ಪಾಕ್, ಕೋವಾ ಮತ್ತಿತರ ಸಿಹಿ ಪದಾರ್ಥಗಳ ತಯಾರಿಕೆಗೆ ಬಳಸಲಾಗುತ್ತಿದೆ. 20 ಸಾವಿರದಿಂದ 23 ಸಾವಿರ ಲೀಟರ್ ಮೊಸರು ಹಾಗೂ 90 ಸಾವಿರ ಲೀಟರ್ ಹಾಲು ಹೊರ ಜಿಲ್ಲೆಗಳಿಗೆ ಸರಬರಾಜಾಗುತ್ತಿದೆ. ಉಳಿದ 3 ಲಕ್ಷ ಲೀಟರ್‌ನಷ್ಟು ಹಾಲು ಪುಡಿಯಾಗಿ ಪರಿವರ್ತನೆಯಾಗುತ್ತಿದೆ.

ನಂದಿನಿ ಹಾಲು ಮತ್ತು ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದಿಂದ ಕೂಡಿದ್ದು, ಗುಣಮಟ್ಟದಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಮಾಚೇನಹಳ್ಳಿ ಶಿಮುಲ್ ಆವರಣದಲ್ಲಿ ₹ 145 ಕೋಟಿ ವೆಚ್ಚದಲ್ಲಿ ಹಾಲಿನ ಪೌಡರ್ ಪ್ಲಾಂಟ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ದಾವಣಗೆರೆಯಲ್ಲಿ ₹ 300 ಕೋಟಿ ವೆಚ್ಚದಲ್ಲಿ ಹೊಸದಾಗಿ ಹಾಲಿನ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ.

ಕಲಬೆರೆಕೆ ದಂಧೆಗೂ ಕಡಿವಾಣ: ಹಾಲಿಗೆ ಹಾನಿಕಾರಕ ರಾಸಾಯನಿಕ ಸೇರಿ ಹಲವು ವಸ್ತುಗಳನ್ನು ಮಿಶ್ರಣ ಮಾಡುವ ದಂಧೆಯ ವಿರುದ್ಧ ಇಲ್ಲಿನ ಶಿವಮೊಗ್ಗ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ದಶಕಗಳ ಹಿಂದೆಯೇ ಬಿಗಿ ತಪಾಸಣೆ ಆರಂಭಿಸಿದ ಪರಿಣಾಮ ಇಂದು ಮಿಶ್ರಣ ಪ್ರಕರಣಗಳು ಕ್ಷೀಣಿಸಿವೆ.

ಎರಡು ಲೀಟರ್ ಹಾಲು ಮಾರಾಟ ಮಾಡುವ ಉತ್ಪಾದಕರು ಅದಕ್ಕೆ ಒಂದು ಲೀಟರ್ ನೀರು ಬೆರೆಸಿ, ಹಾಲಿನಂತೆ ಗಟ್ಟಿಗೊಳಿಸಲು ಕೃಷಿಗೆ ಬಳಸುವ ಯೂರಿಯಾ, ಗೃಹೋಪಯೋಗಿ ಸಕ್ಕರೆ, ಗಂಜಿ, ಸೋಡಾ, ಉಪ್ಪು ಸೇರಿ ಹಲವು ಸಾಮಗ್ರಿಗಳನ್ನು ಮಿಶ್ರಣ ಮಾಡುತ್ತಿದ್ದರು. ಕಲಬೆರಕೆ ನಿಯಂತ್ರಿಸಲು ಹಾಲಿನ ರಾಸಾಯನಿಕ ಮಿಶ್ರಣ ತಪಾಸಣೆ ಮತ್ತು ಅಧ್ಯಯನ ತಂಡವನ್ನೇ ರಚಿಸಲಾಗಿತ್ತು. ಈ ತಂಡ ಹಾಲು ಉತ್ಪಾದಕರ ಮನೆಗಳಿಗೇ ತೆರಳಿ ಹಾಲು ಪರೀಕ್ಷೆ ನಡೆಸುತ್ತಿತ್ತು. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲಿನ ಗುಣಮಟ್ಟ ಪರೀಕ್ಷೆಗೆ ಒತ್ತು ನೀಡಿತ್ತು. ಇದೆಲ್ಲದರ ಫಲವಾಗಿ ಇಂದು ಕಲಬೆರಕೆ ದಂಧೆಗೆ ಕಡಿವಾಣ ಬಿದ್ದಿದೆ.

ಕಲಬೆರಕೆ ತಡೆಯಲು ಕಠಿಣ ಕ್ರಮಗಳನ್ನು ಕೈಗೊಂಡಿರುವ ಶಿಮುಲ್‌ ಆಡಳಿತ ಮಂಡಳಿ ದಾವಣಗೆರೆಯ ಬಾತಿ, ಶಿವಮೊಗ್ಗದ ಮಾಚೇನಹಳ್ಳಿಯ ಎರಡೂ ಘಟಕಗಳಿಗೂ ₹ 1.70 ಕೋಟಿ ವೆಚ್ಚದಲ್ಲಿ ಎರಡು ಅತ್ಯಾಧುನಿಕ ಮಿಲ್ಕ್‌ ಸ್ಕ್ಯಾನಿಂಗ್ ಯಂತ್ರಗಳನ್ನು ಅಳವಡಿಸಿದೆ. ಈ ಯಂತ್ರ ಮಿಶ್ರಣವಾದ 14 ಬಗೆಯ ರಾಸಾಯನಿಕಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ.

‘1,200 ಹಾಲು ಉತ್ಪಾದಕ ಸಂಘಗಳಿಗೆ ಪರೀಕ್ಷಕರು, ಪರೀಕ್ಷೋಪಕರಣಗಳನ್ನು ನೀಡಲಾಗಿದೆ. ಕಲಬೆರಕೆ ಕಂಡು ಬಂದರೆ ಹಣ ಪಾವತಿ ತಡೆಹಿಡಿಯುವಂತೆ ಸೂಚನೆ ನೀಡಲಾಗಿದೆ’ ಎನ್ನುತ್ತಾರೆ ಶಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಬಸವರಾಜು.

ಸಾಗಣೆ ವೆಚ್ಚ ಉಳಿತಾಯ, ರೈತರಿಗೆ ಲಾಭ
-ಜಿ.ಬಿ. ನಾಗರಾಜ್‌

ಚಿತ್ರದುರ್ಗ: ‘ಶಿಮುಲ್‌’ ವಿಭಜಿಸಿ ದಾವಣಗೆರೆ–ಚಿತ್ರದುರ್ಗಕ್ಕೆ ಪ್ರತ್ಯೇಕ ಹಾಲು ಉತ್ಪಾದಕರ ಸಹಕಾರ ಒಕ್ಕೂಟ ರೂಪಿಸಿದರೆ ಸಾಗಣೆ ವೆಚ್ಚ ಉಳಿತಾಯವಾಗುತ್ತದೆ. ಹಾಲು ಸಂಗ್ರಹ, ಶೀತಲೀಕರಣ ಪ್ರಕ್ರಿಯೆ, ವಿಂಗಡಣೆ, ಮೌಲ್ಯವರ್ಧನೆಯ ವೆಚ್ಚ ತಗ್ಗಿ ಹೈನುಗಾರರಿಗೆ ಅನುಕೂಲವಾಗಲಿದೆ.

ಇದೇ ಕಾರಣಕ್ಕೆ ದಶಕದಿಂದ ಹೋರಾಟ ನಡೆದಿದೆ. ಮಧ್ಯಕರ್ನಾಟಕದ ಹೈನುಗಾರರ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಪ್ರತ್ಯೇಕ ಹಾಲು ಉತ್ಪಾದಕರ ಸಹಕಾರ ಒಕ್ಕೂಟ ರೂಪಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಇದು ಇನ್ನಷ್ಟೇ ಅನುಷ್ಠಾನವಾಗಬೇಕಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ 294 ಗ್ರಾಮ ಮಟ್ಟದ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಹೈನುಗಾರಿಕೆ ನಂಬಿಕೊಂಡು 81,119 ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ನಿತ್ಯ ಸರಾಸರಿ 92 ಸಾವಿರ ಲೀಟರ್‌ ಹಾಲು ಉತ್ಪಾದನೆಯಾಗುತ್ತದೆ. ಹೊಸದುರ್ಗ ತಾಲ್ಲೂಕು ಒಂದರಲ್ಲೇ 30 ಸಾವಿರ ಲೀಟರ್‌ ಹಾಲು ಲಭ್ಯವಾಗುತ್ತದೆ.

ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆಯಲ್ಲಿ ಹಾಲು ಉತ್ಪಾದನೆ ನಿರೀಕ್ಷೆ ಮೀರಿ ನಡೆಯುತ್ತಿದೆ. ಹೀಗೆ ಉತ್ಪಾದನೆಯಾದ ಹಾಲನ್ನು ಸಂಸ್ಕರಿಸಿ, ಶೇಖರಿಸುವ ಪ್ರಕ್ರಿಯೆ ವೆಚ್ಚದಾಯಕವಾಗಿದೆ. ಪ್ರತಿ ಲೀಟರ್‌ ಹಾಲಿಗೆ ₹ 8 ವೆಚ್ಚ ತಗಲುತ್ತಿದೆ. ಸಾಗಣೆ ಹೊರೆ ತಗ್ಗಿದರೆ ಈ ವೆಚ್ಚವನ್ನು ₹ 5ಕ್ಕೆ ತರಲು ಸಾಧ್ಯವಿದೆ. ಸಂಘ ಹೆಚ್ಚು ಲಾಭದಾಯಕವಾಗಿ ಬೆಳೆಯಲಿದ್ದು, ಈ ಲಾಭಾಂಶ ಹಾಲು ಉತ್ಪಾದಕರಿಗೆ ಹಂಚಿಕೆಯಾಗಲಿದೆ.

‘ಹಾಲು ಕರೆದ ಒಂದು ಗಂಟೆಯ ಒಳಗೆ ಶೀತಲೀಕರಣ ಪ್ರಕ್ರಿಯೆಗೆ ಒಳಪಡಿಸಬೇಕು. ಆಗ ಮಾತ್ರ ಹಾಲು ಉತ್ಪನ್ನಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ನೀಡಬಲ್ಲವು. ‘ಶಿಮುಲ್‌’ ವ್ಯಾಪ್ತಿ ದೊಡ್ಡದಾಗಿರುವುದರಿಂದ ಇದು ಕಷ್ಟವಾಗುತ್ತಿದೆ. ಒಕ್ಕೂಟ ವಿಭಜಿಸಿದರೆ ಚಿತ್ರದುರ್ಗ–ದಾವಣಗೆರೆ ಜಿಲ್ಲೆಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ‘ಶಿಮುಲ್‌’ ನಿರ್ದೇಶಕ ಹಿರಿಯೂರಿನ ಜಿ.ಪಿ. ಯಶವಂತರಾಜ್‌.

ಉತ್ಪಾದಕರಿಗೆ ಹಾಲಿನ ದರ ಹೆಚ್ಚಿಸಲು ಶೀಘ್ರ ಸಭೆ
ಕೊರೊನಾ ಸಂದರ್ಭದಲ್ಲಿ ಹಾಲಿಗೆ ಬೇಡಿಕೆ ಇರಲಿಲ್ಲ. ಈಗ ಉತ್ಪಾದನೆಗೆ ತಕ್ಕಂತೆ ಬೇಡಿಕೆ ಹೆಚ್ಚಿದೆ. ಕೇರಳ, ವಾರಂಗಲ್, ಕಲಬುರಗಿ, ಧಾರವಾಡಗಳಿಗೆ ಹಾಲು ಸರಬರಾಜು ಮಾಡಲಾಗುತ್ತಿದೆ. ಉತ್ಪಾದಕರಿಗೆ ನೀಡುವ ದರ ಹೆಚ್ಚಿಸುವ ಸಂಬಂಧ ಶೀಘ್ರದಲ್ಲಿಯೇ ಆಡಳಿತ ಮಂಡಳಿ ಸಭೆ ಕರೆದು ನಿರ್ಧಾರ ಕೈಗೊಳ್ಳಲಾಗುವುದು ಎನ್ನುತ್ತಾರೆ ಶಿವಮೊಗ್ಗ-ದಾವಣಗೆರೆ-ಚಿತ್ರದುರ್ಗ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಎಚ್.ಕೆ. ಬಸಪ್ಪ.

ಹಸುಗಳ ಆರೋಗ್ಯ ತಪಾಸಣೆಗೆ ಒಕ್ಕೂಟದಿಂದಲೇ ವೈದ್ಯರನ್ನು ನೇಮಿಸಲಾಗಿದೆ. ಮೇವಿನ ಉತ್ಪಾದನೆಗೆ ಸೋಯಾಬೀನ್, ಅವರೆ, ಅಲಸಂಧಿ, ಮೆಕ್ಕೆಜೋಳ ಬೀಜಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಮೇವು ಕಟಾವು ಮತ್ತು ಹಾಲು ಕರೆಯುವ ಯಂತ್ರಗಳನ್ನು ಶೇ 50 ಸಬ್ಸಿಡಿ ದರದಲ್ಲಿ ಒದಗಿಸಲಾಗುತ್ತಿದೆ. ಹಸುಗಳಿಗೂ ಇನ್‌ಶೂರೆನ್ಸ್ ನೀಡಲಾಗಿದೆ. ಹಾಲು ಉತ್ಪಾದಕರು ಮೃತಪಟ್ಟರೆ 18ರಿಂದ 40 ವರ್ಷದ ಒಳಗಿನವರಿಗೆ ₹ 1 ಲಕ್ಷ, 40ರಿಂದ 60 ವರ್ಷದ ಒಳಗಿನವರಿಗೆ ₹ 40 ಸಾವಿರ, 60 ವರ್ಷದ ಮೇಲಿನವರಿಗೆ ₹ 20 ಸಾವಿರ ಪರಿಹಾರವನ್ನು ಕಲ್ಯಾಣ ಟ್ರಸ್ಟ್ ಅಡಿ ನೀಡಲಾಗುತ್ತಿದೆ. ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿದವರು ನಿವೃತ್ತಿ ಹೊಂದಿದ ಸಂದರ್ಭದಲ್ಲಿ ₹ 1 ಲಕ್ಷ ನೀಡಲಾಗುತ್ತಿದೆ ಎಂದು ವಿವರಿಸುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT