ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಸ್ವಾಮೀಜಿ ಆದರ್ಶ ದಾರಿದೀಪ

ಸಿದ್ಧಗಂಗಾ ಶ್ರೀ ಪುಣ್ಯಸ್ಮರಣೆಯಲ್ಲಿ ಜಿಲ್ಲಾಧಿಕಾರಿ
Last Updated 22 ಜನವರಿ 2021, 0:44 IST
ಅಕ್ಷರ ಗಾತ್ರ

ದಾವಣಗೆರೆ: ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳಆದರ್ಶ ಎಲ್ಲರಿಗೂ ದಾರಿದೀಪ. ದೊಡ್ಡ ಮಠದ ನೆರಳಿನಲ್ಲಿ ಬೆಳೆಯುವವರು ವಿಭೂತಿ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಎರಡನೇ ವರ್ಷದ ಪುಣ್ಯಸ್ಮರಣೆ ಮತ್ತು ದಾಸೋಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇಡೀ ಜಗತ್ತು ತಿರುಗಿ ನೋಡುವಂತೆ ಸತ್ಕಾರ್ಯ ಮಾಡಿದವರು ‌ಶಿವಕುಮಾರ ಶ್ರೀಗಳು. ಶ್ರೀಗಳ ಹೆಸರಿನಲ್ಲಿರುವ ಸಿದ್ಧಗಂಗಾ ವಿದ್ಯಾಸಂಸ್ಥೆ ಅವರ ಹಾದಿಯಲ್ಲಿ ನಡೆಯುತ್ತಿದೆ. ಇಲ್ಲಿ ಕಲಿತವರು ಸುಸಂಸ್ಕೃತರಾಗುತ್ತಾರೆ. ವಿನಮ್ರತೆ ಇದ್ದಲ್ಲಿ ಜ್ಞಾನ ಇರುತ್ತದೆ. ಮಕ್ಕಳು ಸುಜ್ಞಾನವಂತರಾಗಬೇಕು’ ಎಂದು ಕಿವಿಮಾತು ಹೇಳಿದರು.

‘ವಿದ್ಯಾರ್ಥಿಗಳು ಮುಂದೆ ತಾವು ಏನಾಗಬೇಕು ಎಂದು ಕನಸು ಕಟ್ಟುವ ಸಮಯ ಪಿಯುಸಿ ಹಂತ. ಈ ಅವಧಿಯಲ್ಲಿ ಉನ್ನತ ಗುರಿಗಳನ್ನು ಇರಿಸಿಕೊಂಡಲ್ಲಿ ಭವಿಷ್ಯ ಉಜ್ವಲವಾಗಲಿದೆ’ ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ‘ಶಿವಕುಮಾರ ಸ್ವಾಮೀಜಿ ನಮ್ಮ ನಾಡಿನ ಸಹಸ್ರಾರು ನಿರ್ಗತಿಕರ ಆಶಾಕಿರಣವಾಗಿದ್ದರು. ಅವರ ಆದರ್ಶ ನಮ್ಮ ಜತೆಗಿದೆ. ಅವುಗಳನ್ನು ಎಲ್ಲರೂ ಪಾಲಿಸೋಣ’ ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಡಿ.ಎಸ್. ಜಯಂತ್, ‘ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳು ಪಾದಸ್ಪರ್ಶ ಮಾಡಿದ ಪುಣ್ಯಭೂಮಿ ಸಿದ್ಧಗಂಗಾ ವಿದ್ಯಾಸಂಸ್ಥೆ’ ಎಂದರು.

ಪಾಲಿಕೆ ಸದಸ್ಯೆ ಶ್ವೇತಾ ಶ್ರೀನಿವಾಸ್, ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್‌. ಪ್ರಶಾಂತ್ ಇದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಸಿ. ನಿರಂಜನ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸದಾಶಿವ ಹೊಳ್ಳ ನಿರೂಪಿಸಿದರು. ದರ್ಶನ್ ರುದ್ರಾಕ್ಷಿಬಾಯಿ ಮತ್ತು ತಂಡದವರು ಭಕ್ತಿಗೀತೆ ಹಾಡಿದರು. ಮುಖ್ಯ ಶಿಕ್ಷಕಿ ಜಸ್ಟಿನ್ ಡಿ ಸೌಜಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT