ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವದೊಂದಿಗೆ ಚೆಲ್ಲಾಟ ಸಲ್ಲ: ಮುರುಘಾ ಶರಣರು

300 ಕುಟುಂಬಗಳಿಗೆ ಆಹಾರದ ಕಿಟ್‌ ವಿತರಣೆ
Last Updated 9 ಏಪ್ರಿಲ್ 2020, 16:12 IST
ಅಕ್ಷರ ಗಾತ್ರ

ದಾವಣಗೆರೆ: ‘ಕೆಲವರು ಜಾಲಿ ರೈಡ್‌ಗಾಗಿ ರಸ್ತೆಗೆ ಬರುತ್ತಿರುವುದು ಸರಿಯಲ್ಲ. ಜೀವದ ಜೊತೆ ಚೆಲ್ಲಾಟ ಆಡಬಾರದು. ನಿಮ್ಮ ಆರೋಗ್ಯ ಕಾಪಾಡಿಕೊಂಡು, ಬೇರೆಯವರ ಆರೋಗ್ಯ ಕಾಪಾಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ’ ಎಂದು ಚಿತ್ರದುರ್ಗ ಮುರುಘಾಮಠದ ಮುರುಘಾ ಶರಣರು ಕಿವಿಮಾತು ಹೇಳಿದರು.

ಇಲ್ಲಿನ ಜಯದೇವ ವೃತ್ತದ ಶಿವಯೋಗಾಶ್ರಮದಲ್ಲಿ ವಿರಕ್ತಮಠ, ಶಿವಯೋಗಾಶ್ರಮ ಟ್ರಸ್ಟ್‌, ಮುರುಘ ರಾಜೇಂದ್ರ ವಿದ್ಯಾವರ್ಧಕ ಫಂಡ್‌ನಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿರ್ಗತಿಕ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿದರು.

‘ಸಾಮಾಜಿಕ ಅಸ್ಪ್ರಶ್ಯತೆ ಬೇಡ ಎಂದು ಎಲ್ಲ ದಾರ್ಶನಿಕರು ಹೇಳಿದ್ದರು. ಆದರೆ ನಮ್ಮ ಕಾಲದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳುವ ಸ್ಥಿತಿ ಬಂದಿರುವುದು ವಿಷಾದನೀಯ.ಕೊರೊನಾ ವೈರಸ್‌ನಿಂದ ಸಂಕೀರ್ಣವಾದ, ಸಂಕಷ್ಟದ ಕಾಲ ಇಂದು ಬಂದಿದೆ. ಹಿಂದೆ ಮಾನವದತ್ತವಾದ ಯುದ್ಧದ ಸಂದರ್ಭದಲ್ಲಿ ಸಾವಿರಾರು ಜನರು ಸಾವಿಗೀಡಾಗುತ್ತಿದ್ದುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಂದು ಪ್ರಕೃತಿದತ್ತವಾದ ವೈರಾಣುವಿನಿಂದ ಜಗತ್ತಿನಲ್ಲಿ ಅನಾಹುತಗಳಾಗುತ್ತಿವೆ ಎಂಬುದನ್ನು ಕಾಣುತ್ತಿದ್ದೇವೆ. ಇಂತಹ ಪ್ರಸಂಗ ಹಿಂದೆಂದೂ ಕಂಡಿರಲಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಶರೀರಧಾರಿಗಳಾಗಿರುವ ನಾವು ನಮ್ಮ ಅಂಗಗಳಿಗೇ ಅಂಜುವ ಸ್ಥಿತಿ ಇಂದು ಬಂದಿದೆ. ನಮ್ಮ ಅಂಗಾಂಗಗಳೇ ರೋಗಕ್ಕೆ ಆಹ್ವಾನ ನೀಡುವ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಅಂಗಾಂಗದ ಬಗ್ಗೆ ಜಾಗೃತರಾಗಬೇಕು. ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಎಲ್ಲರೂ ಮುಖಕ್ಕೆ ಮಾಸ್ಕ್‌, ಕೈಗಳಿಗೆ ಗ್ಲೌಸ್‌ ಹಾಕಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬಡಜನರಿಗೆ ಅನ್ನಕ್ಕೂ ತೊಂದರೆಯಾಗಿದೆ. ಇದನ್ನು ಮನಗಂಡು ಅಗತ್ಯ ಇರುವವರಿಗೆ ಆಹಾರದ ಕಿಟ್‌ ವಿತರಿಸಲಾಗುತ್ತಿದೆ. 300 ಕುಟುಂಬಗಳಿಗೆ ಆಹಾರದ ಕಿಟ್‌ ವಿತರಿಸಲಾಗುತ್ತಿದೆ. ಇದನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಮುಖಂಡರಾದ ಯಜಮಾನ್ ಮೋತಿ ವೀರಣ್ಣ, ಎಚ್‌.ಕೆ. ರಾಮಚಂದ್ರಪ್ಪ, ಡಿ. ಬಸವರಾಜ್‌, ನಸೀರ್‌ ಅಹ್ಮದ್‌, ಎಂ.ಜಯಕುಮಾರ್‌, ಎಂ.ಕೆ. ಬಕ್ಕೇಶ್‌, ಎಸ್‌.ಓಂಕಾರಪ್ಪ ಇದ್ದರು.

ಆಹಾರ ಪದಾರ್ಥಗಳ ಕಿಟ್‌ ಅನ್ನು ನೀಡುತ್ತಾರೆ ಎಂದು ವಿವಿಧೆಡೆಯಿಂದ ಜನರು ಬಂದು ಬೆಳಿಗ್ಗೆಯಿಂದಲೇ ಬಿಸಿಲಿನಲ್ಲಿ ಕಾಯುತ್ತಿದ್ದರು. ಆದರೆ ಸಾಂಕೇತಿಕವಾಗಿ ಕೆಲವರಿಗೆ ಮಾತ್ರ ವಿತರಿಸಿದ ಕಾರಣ ಜನರು ಖಾಲಿ ಕೈಯಲ್ಲೇ ನಿರಾಸೆಯಿಂದ ವಾಪಸಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT