ಶಿವಯೋಗದಿಂದ ಅಂತರಂಗ ಶುದ್ಧಿ

7
ಇಷ್ಟಲಿಂಗ ಪೂಜೆ ಮಾಡಿಸಿದ ಶಿವಮೂರ್ತಿ ಮುರುಘಾ ಶರಣರು

ಶಿವಯೋಗದಿಂದ ಅಂತರಂಗ ಶುದ್ಧಿ

Published:
Updated:
Prajavani

ದಾವಣಗೆರೆ: ‘ಶಿವಯೋಗವು ಅಂತರಂಗವನ್ನು ಶುದ್ಧ ಮಾಡುತ್ತದೆ. ಜೀವನದಲ್ಲಿ ಶಾಂತಿ, ನೆಮ್ಮದಿ, ಆರೋಗ್ಯಪೂರ್ಣ ಬದುಕಿಗೆ ದಾರಿ ಮಾಡಿಕೊಡುತ್ತದೆ’ ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಶಿವಯೋಗಾಶ್ರಮದಲ್ಲಿ ಲಿಂಗೈಕ್ಯ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ 62ನೇ ಪುಣ್ಯಸ್ಮರಣೆ, ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಎರಡನೇ ದಿನವಾದ ಶನಿವಾರ ಬೆಳಿಗ್ಗೆ ನಡೆದ ಸಹಜ ಶಿವಯೋಗದಲ್ಲಿ ಅವರು ಮಾತನಾಡಿದರು.

‘ಆಧುನಿಕ ಬದುಕಿನಲ್ಲಿ ಹಲವರು ಬಗೆ ಬಗೆಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ದೂರವಾಗಲು ಬೆಳಿಗ್ಗೆ ಯೋಗ ಮಾಡುತ್ತಾರೆ. ಆದರೆ, ಈ ಯೋಗ ಮಾಡುವುದರಿಂದ ನೋವು, ಕಾಯಿಲೆಗಳು ತಾತ್ಕಾಲಿಕವಾಗಿ ಶಮನಗೊಳ್ಳುತ್ತವೆ. ಆದರೆ, ಶಾಶ್ವತ ಪರಿಹಾರ ಸಿಗುವುದಿಲ್ಲ. ಅದೇ ಶಿವಯೋಗ ಧ್ಯಾನ ಮಾಡಿದರೆ ಎಲ್ಲಾ ಕಾಯಿಲೆಗಳು, ವೇದನೆಗಳು ಶಾಶ್ವತವಾಗಿ ದೂರವಾಗುತ್ತವೆ’ ಎಂದು ಸ್ವಾಮೀಜಿ ಪ್ರತಿಪಾದಿಸಿದರು.

‘ಲಿಂಗಾಯತ ಧರ್ಮ ಪರಂಪರೆಯ ತತ್ವಗಳು, ವಚನಗಳ ಅಧ್ಯಯನ, ಪಾಲನೆಯಿಂದ ರೋಗಿಗಳು ಶಿವಯೋಗಿಗಳಾಗುತ್ತಾರೆ ಎಂದು ಶರಣರು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ನಾವು ಶಿವಯೋಗದ ಮೊರೆ ಹೋಗಬೇಕು’ ಎಂದು ಸಲಹೆ ನೀಡಿದರು.

‘ಶಿವಯೋಗದಲ್ಲಿ ವಿಜ್ಞಾನದ ಜೊತೆಗೆ ಸೂಕ್ಷ್ಮ ರಹಸ್ಯಗಳು ಅಡಕವಾಗಿವೆ. ಶಿವಯೋಗವು ಶಾಶ್ವತ ಸುಖಕ್ಕೆ ನಿಮ್ಮನ್ನು ಒಯ್ಯುತ್ತದೆ’ ಎಂದು ಹೇಳಿದರು.

ಶಿರಸಂಗಿಯ ಬಸವ ಮಹಾಂತ ಸ್ವಾಮೀಜಿ, ‘ಧ್ಯಾನದಿಂದ ಕೋಪ, ಒತ್ತಡ, ಚಿಂತೆಯನ್ನು ಕಳೆದುಕೊಳ್ಳಬಹುದು ಎಂದು ಬುದ್ಧ ತೋರಿಸಿಕೊಟ್ಟಿದ್ದಾರೆ. ಶಿವಯೋಗ ಧ್ಯಾನದಿಂದಲೂ ಇವುಗಳನ್ನು ನಿವಾರಿಸಲು ಸಾಧ್ಯ ಎಂಬುದು ಶರಣರು ಸಾಬೀತು ಪಡಿಸಿದ್ದಾರೆ. ಇಷ್ಟಲಿಂಗ ಪೂಜೆಯಿಂದ ಕೋಪ, ಒತ್ತಡ, ಚಿಂತೆಯನ್ನು ದೂರ ಮಾಡಿ; ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಇತ್ತೀಚೆಗೆ ಕೈಗೆ ಕರಿದಾರ ಕಟ್ಟಿ, ಕೊರಳಲ್ಲಿ ತಾಯಿತ ಹಾಕುವ ಸ್ವಾಮಿಗಳು ಕಂಡು ಬರುತ್ತಿದ್ದಾರೆ. ಆದರೆ, ಮುರುಘಾ ಶರಣರು ಕೈಯಲ್ಲಿ ಲಿಂಗವನಿಟ್ಟು, ಕೊರಳಲ್ಲಿ ರುದ್ರಾಕ್ಷಿ ಹಾಕಿ, ಸಹಜ ಶಿವಯೋಗದ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸುತ್ತಿದ್ದಾರೆ. ಇವರ ಮಾರ್ಗದರ್ಶನಲ್ಲಿ ಎಲ್ಲರೂ ಮುನ್ನಡೆಯಬೇಕು’ ಎಂದು ಹೇಳಿದರು.

ರಾವಂದೂರು ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ, ‘ಶಿವಯೋಗ ಎಂದರೆ ಧ್ಯಾನ ಮಾಡುತ್ತಲೇ ನಮ್ಮನ್ನು ಮರೆತು, ಐಕ್ಯ ಸ್ಥಾನಕ್ಕೆ ಏರುವುದಾಗಿದೆ. ಮನಸ್ಸನ್ನು ಕೇಂದ್ರೀಕರಿಸುವುದಾಗಿದೆ’ ಎಂದು ತಿಳಿಸಿದರು.

ಉಪ ಮೇಯರ್‌ ಕೆ. ಚಮನ್‌ಸಾಬ್‌, ‘ಬಸವ ತತ್ವ ಮತ್ತು ಇಸ್ಲಾಂ ತತ್ವಗಳಲ್ಲಿ ಸ್ವಲ್ಪ ವ್ಯತ್ಯಾಸ ಇದ್ದರೂ, ಎರಡೂ ಧರ್ಮಗಳಲ್ಲಿ ಹೆಚ್ಚಿನ ಸಾಮ್ಯತೆ ಕಂಡು ಬರುತ್ತಿದೆ. ಏಕದೇವೋಪಾಸನೆ ಕುರಿತು ಎರಡೂ ಧರ್ಮದಲ್ಲಿ ಪ್ರತಿಪಾದಿಸಲಾಗಿದೆ’ ಎಂದರು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಂ. ಶಿವಕುಮಾರ್, ಚಿಂದೋಡಿ ಚಂದ್ರಧರ, ಕಾಂಗ್ರೆಸ್ ಮುಖಂಡ ನಿಖಿಲ್ ಕೊಂಡಜ್ಜಿ, ದಾಸೋಹಿಗಳಾದ ಜಿ. ನಾಗನೂರು, ಕಂದನಕೋವಿ ಶಿವಕುಮಾರ್, ಕಂಚಿಕೆರೆ ಮಹೇಶ್, ಎಸ್. ಓಂಕಾರಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !