ಜನತಾ ಬಜಾರ್‌ ಕಚೇರಿಯಲ್ಲಿ ಗುಂಡು ಪಾರ್ಟಿ

7
ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಚಂದ್ರಶೇಖರ್‌ ಸಹ ಭಾಗಿ

ಜನತಾ ಬಜಾರ್‌ ಕಚೇರಿಯಲ್ಲಿ ಗುಂಡು ಪಾರ್ಟಿ

Published:
Updated:
Deccan Herald

ದಾವಣಗೆರೆ: ನಗರದ ನ್ಯಾಯಾಲಯ ಆವರಣ ಪಕ್ಕದ ಜನತಾ ಬಜಾರ್‌ ಕಚೇರಿಯ ಆವರಣದಲ್ಲಿ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ವಿ.ಬಿ. ಚಂದ್ರಶೇಖರ್‌ ನೇತೃತ್ವದಲ್ಲಿ ಕೆಲವರು ಭಾನುವಾರ ರಾತ್ರಿ ‘ಗುಂಡು ಪಾರ್ಟಿ’ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಕಚೇರಿಯ ಒಳಗಿನ ಸಭಾಂಗಣ ಹಾಗೂ ಡೈನಿಂಗ್‌ ಹಾಲ್‌ನಲ್ಲಿ ಕುಳಿತು 10ಕ್ಕೂ ಹೆಚ್ಚು ಜನ ಮದ್ಯ ಸೇವಿಸುತ್ತ ಮಾಂಸದೂಟವನ್ನು ಮಾಡುತ್ತಿದ್ದರು. ಸ್ಥಳಕ್ಕೆ ಮಾಧ್ಯಮದವರು ತೆರಳಿ ದೃಶ್ಯಾವಳಿಗಳನ್ನು ಸೆರೆ ಹಿಡಿಯುತ್ತಿದ್ದಂತೆ ಮದ್ಯದ ಬಾಟಲಿಗಳನ್ನು ಮುಚ್ಚಿಟ್ಟು ಒಬ್ಬಬ್ಬರಾಗಿ ಅಲ್ಲಿಂದ ಕಾಲ್ಕಿತ್ತರು. ಈ ಬಗ್ಗೆ ಪ್ರಶ್ನಿಸಿದಾಗ, ‘ಆಷಾಢ ಮಾಸವಾಗಿದ್ದರಿಂದ ಇಲ್ಲಿಯೇ ಸ್ನೇಹಿತರು ಸೇರಿ ಪಾರ್ಟಿ ಮಾಡುತ್ತಿದ್ದೇವೆ’ ಎಂಬ ಉಡಾಫೆಯ ಉತ್ತರ ನೀಡಿದ್ದಾರೆ. ಡಿಸಿಸಿ ಬ್ಯಾಂಕ್‌ನ ಒಂದಿಬ್ಬರು ನಿರ್ದೇಶಕರು ಹಾಗೂ ಅಧಿಕಾರಿಗಳೂ ಇದ್ದರು ಎನ್ನಲಾಗಿದೆ.

ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕರ ಕಚೇರಿಯನ್ನು ದಾಟಿಕೊಂಡೇ ಜನತಾ ಬಜಾರ್‌ ಕಚೇರಿಗೆ ಹೋಗಬೇಕು. ಭಾನುವಾರವಾಗಿದ್ದರೂ ಬಾಗಿಲು ತೆಗೆಸಿ ಗುಂಡು ಪಾರ್ಟಿ ನಡೆಸಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಪಾರ್ಟಿ ನಡೆಸಿಲ್ಲ; ಊಟ ಮಾಡಿದರು’:

‘ಜನತಾ ಬಜಾರ್‌ನ ಕೆಳಗೆ ಮದ್ಯದಂಗಡಿ ಇದ್ದು, ಕೆಲವರು ಮದ್ಯ ಹಾಗೂ ಆಹಾರ ತಂದು ಕಟ್ಟಡದ ಬಳಿ ನಿತ್ಯ ತಿನ್ನುತ್ತಾರೆ. ಭಾನುವಾರ ರಾತ್ರಿ ಜನತಾ ಬಜಾರ್‌ಗೆ ಬಂದು ಕೆಲ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದೆವು. ಆ ಸಂದರ್ಭದಲ್ಲಿ ಮಳೆ ಬಂದಿದ್ದರಿಂದ ಕೆಲ ಪರಿಚಯಸ್ಥರು ಊಟ ತೆಗೆದುಕೊಂಡು ಮೇಲೆ ಬಂದರು. ಅವರು ಒಳಗೆ ಊಟ ಮಾಡುತ್ತಿರುವಾಗಲೇ ಮಾಧ್ಯಮದವರು ಬಂದು ಪಾರ್ಟಿ ಮಾಡುತ್ತಿದ್ದಾರೆ ಎಂದುಕೊಂಡರು. ನಾವು ಇಲ್ಲಿ ಪಾರ್ಟಿ ಮಾಡಿಲ್ಲ’ ಎಂದು ಜನತಾ ಬಜಾರ್‌ನ ಅಧ್ಯಕ್ಷರೂ ಆಗಿರುವ ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !